ರಾಯಚೂರು: ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿದ್ದು, ನದಿ ದಂಡೆ ಗ್ರಾಮಗಳಲ್ಲಿ ನದಿ ನೀರು ನುಗ್ಗಿದೆ. ಅಲ್ಲದೆ ದೇವದುರ್ಗ ತಾಲೂಕಿನ ಗೂಗಲ್ ಗ್ರಾಮದ ಅಲ್ಲಮಪ್ರಭು ದೇವಸ್ಥಾನ ಜಲಾವೃತವಾಗಿದ್ದು, ಕಲ್ಯಾಣ ಮಂಟಪ ಸಂಪೂರ್ಣ ಮುಳುಗಡೆಯಾಗಿದೆ. ಕೊಪ್ಪರ ನರಸಿಂಹಸ್ವಾಮಿ ದೇವಸ್ಥಾನವು ಕೂಡ ಮುಳುಗಡೆಯಾಗಿದೆ. ನದಿ ತೀರದ ಗ್ರಾಮಸ್ಥರು ಪ್ರವಾಹದ ಹೊಡೆತಕ್ಕೆ ತತ್ತರಿಸಿ ಹೊಗಿದ್ದು, ಅಂಗಡಿ-ಮಳಿಗೆಗಳೆಲ್ಲ ಜಲಾವೃತವಾಗಿವೆ.
ನದಿ ನೀರಲ್ಲಿ ಇಳಿದು ಸಾಹಸ ಪ್ರದರ್ಶಿಸ್ತಿರುವ ಯುವಕರು
ಬಸವ ಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 4.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ನದಿಯಲ್ಲಿ ಮುಳುಗಿರುವ ಕರೆಂಟ್ ಟಿಸಿ ಬಳಿ ಹೋಗಿ ನೀರಿನ ಆಳ ಪತ್ತೆ ಮಾಡುವ ಸಾಹಸಕ್ಕೆ ಯುವಕರು ಕೈ ಹಾಕುತ್ತಿದ್ದಾರೆ. ರಾಯಚೂರ ಜಿಲ್ಲೆಯ ದೇವದುರ್ಗ ತಾಲ್ಲೂಕಿನ ನದಿ ದಂಡೆಯಲ್ಲಿ ಭಾರಿ ಪ್ರವಾಹ ಇದ್ದರೂ, ಕೊಪ್ಪರ ಗ್ರಾಮದ ಬಳಿ ನದಿ ನೀರಲ್ಲಿ ಯುವಕರು ಗುಂಪಾಗಿ ಸೇರಿ ನೀರಿನಲ್ಲಿ ಸಾಹಸ ಪ್ರದರ್ಶಿಸುತ್ತಿದ್ದಾರೆ.
ಬಾಗಲಕೋಟೆ: ಮಹಾರಾಷ್ಟ್ರ-ಬೆಳಗಾವಿ ಮಳೆ ತಗ್ಗಿದರೂ ನಿಲ್ಲದ ಕೃಷ್ಣಾ ನದಿ ಪ್ರವಾಹ
ಮಹಾರಾಷ್ಟ್ರ ಮತ್ತು ಬೆಳಗಾವಿಯಲ್ಲಿ ಮಳೆ ಕಡಿಮೆಯಾದರೂ ಕೃಷ್ಣಾ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ಪರಿಣಾಮ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಟಕ್ಕೋಡ ಕ್ರಾಸ್ನ ತೋಟದ ಮನೆಗಳು ಜಲಾವೃತವಾಗಿದೆ. ತಗಡಿನ ಶೆಡ್ ಮನೆಗಳು ಹಾಗೂ ಗ್ರಾಮದ ಮತ್ತಷ್ಟು ಮನೆಗಳು ಕೂಡ ಜಲಾವೃತ್ತವಾಗಿದೆ. ಅಲ್ಲದೆ ಶೂರ್ಪಾಲಿ ಗ್ರಾಮದ ಲಕ್ಷ್ಮಿನರಶಿಂಹ ದೇವಾಲಯ ಸಂಪೂರ್ಣ ಮುಳುಗಡೆ ಹಂತಕ್ಕೆ ಬಂದಿದೆ.
ಹುನಗುಂದ ಭಾಗದಲ್ಲಿ ಬಾರಿ ಪ್ರಮಾಣದಲ್ಲಿ ಬೆಳೆ ಹಾನಿ
ಮಲಪ್ರಭಾ ನದಿ ಆರ್ಭಟ ಹಾಗೂ ಬಸವಸಾಗರ ಜಲಾಶಯ ಹಿನ್ನೀರಿನ ಪರಿಣಾಮ. ಬಾಗಲಕೋಟೆ ಜಿಲ್ಲೆ ಹುನಗುಂದ ಭಾಗದ ಹತ್ತಕ್ಕೂ ಹೆಚ್ಚು ಹಳ್ಳಿಗಳ ಸಾವಿರಾರು ಎಕರೆ ಬೆಳೆ ಜಲಾವೃತವಾಗಿದೆ. ಬಿಸ್ನಾಳಕೊಪ್ಪ ಗ್ರಾಮದಲ್ಲಿ ಹೆಸರು, ಕಬ್ಬು, ಜೋಳ ಜಲಾವೃತ್ತವಾಗಿದೆ. ಹೀಗಾಗಿ ರೈತರು ಹೆಸರು ಬೆಳೆಯನ್ನು ಕಿತ್ತು ಹಾಕುತ್ತಿದ್ದಾರೆ. ಇದರಿಂದಾಗಿ ಒಂದು-ಎರಡು ಎಕರೆ ಭೂಮಿ ಹೊಂದಿದ ಸಣ್ಣ ಸಣ್ಣ ರೈತರಿಗೆ ಬಾರಿ ಸಂಕಷ್ಟ ಎದುರಾಗಿದೆ. ಸಾಲಸೂಲ ಮಾಡಿ ಬಿತ್ತಿದ್ದೇವೆ. ಎಲ್ಲವೂ ನೀರಲ್ಲಿ ಮುಳುಗಿದೆ. ಯಾವ ಅಧಿಕಾರಿಗಳು, ಜನಪ್ರತಿನಿಧಿಗಳು ಈ ಕಡೆ ತಿರುಗಿ ನೋಡಿಲ್ಲ. ಇನ್ನಾದರೂ ಸ್ಥಳಕ್ಕೆ ಭೇಟಿ ನೀಡಿ ಅಧಿಕಾರಿಗಳು ನಮಗೆ ಪರಿಹಾರ ನೀಡಬೇಕು ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ವಿಜಯಪುರ: ಆಲಮಟ್ಟಿ ಡ್ಯಾಂನ ಒಳ ಹರಿವು ಹಾಗೂ ಹೊರ ಹರವಿನಲ್ಲಿ ಹೆಚ್ಚಳ
ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿ ಬಳಿಯ ಲಾಲ್ ಬಹಾದ್ದೂರ್ ಶಾಸ್ತ್ರೀ ಸಾಗರದ ಡ್ಯಾಂನ ಒಳ ಹರಿವು ಹಾಗೂ ಹೊರ ಹರವಿನಲ್ಲಿ ನಿನ್ನೆಗಿಂತ ಹೆಚ್ಚಳವಾಗಿದೆ. 519.60 ಮೀಟರ್ ಸಾಮರ್ಥ್ಯದ ಡ್ಯಾಂಗೆ ಇಂದು 4,31,852 ಕ್ಯೂಸೆಕ್ ಒಳ ಹರಿವು ಮತ್ತು 4,20,000 ಕ್ಯೂಸೆಕ್ ನೀರು ಹೊರ ಹರಿವಾಗಿದೆ. ಸದ್ಯ ಆಲಮಟ್ಟಿ ಡ್ಯಾಂ ಹೊರ ಹರಿವು ಹಾಗೂ ಬಸವ ಸಾಗರದ ಹಿನ್ನೀರಿನ ಕಾರಣ ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರ ಬಳಿಯ ಬಸವ ಸಾಗರ ನದಿ ಪಾತ್ರದಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಮುದ್ದೇಬಿಹಾಳ ತಾಲೂಕಿನ ಕಮ್ಮಲದಿನ್ನಿ, ಕುಂಚಗನೂರು, ಗಂಗೂರು, ಜೇವೂರು, ತಂಗಡಗಿ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಕ್ಷಣದಿಂದ ಕ್ಷಣಕ್ಕೆ ನದಿಯ ನೀರು ಏರಿಕೆಯಾಗುತ್ತಿದೆ.
ಜಲಾವೃತವಾದ ದೇಗುಲಕ್ಕೆ ತೆಪ್ಪದಲ್ಲಿ ತೆರಳಿ ಪೂಜೆ ಸಲ್ಲಿಕೆ
ಕೃಷ್ಣಾ ನದಿ ನೀರು ಉಕ್ಕಿ ಹರಿಯುತ್ತಿದ್ದು, ಮುದ್ದೇಬಿಹಾಳ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಗ್ರಾಮ ದೇವರು ಶ್ರೀ ಪರಮಾನಂದ ದೇವಸ್ಥಾನ ಈಗಾಗಲೇ ಜಲಾವೃತವಾಗಿದ್ದು, ಜಲಾವೃತವಾದ ದೇವಸ್ಥಾನಕ್ಕೆ ತೆಪ್ಪದ ಮೂಲಕ ತೆರಳಿ ಅರ್ಚಕರು ಪೂಜೆ ಸಲ್ಲಿಸುತ್ತಿದ್ದಾರೆ. ಆ ಮೂಲಕ ಪ್ರವಾಹ ಇಳಿಮಖವಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ನೆರೆ ಪ್ರದೇಶಕ್ಕೆ ಜಮಖಂಡಿ ಶಾಸಕ ಆನಂದ ನ್ಯಾಮಗೌಡರ ಭೇಟಿ
ಕೃಷ್ಣಾ ನದಿ ನೀರು ನುಗ್ಗಿ ಕಬ್ಬು, ಬಾಳೆ ಬೆಳೆ ಹಾನಿ ಹಿನ್ನೆಲೆ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತುಬಚಿ, ಶೂರ್ಪಾಲಿಯಲ್ಲಿ ಬೆಳೆ ಹಾನಿ ವೀಕ್ಷಿಸಿದ ಶಾಸಕ, ಒಂದು ವಾರದಿಂದ ಜಲಾವೃತ ಸ್ಥಿತಿಯಲ್ಲಿರುವ ಗ್ರಾಮಗಳನ್ನು ವೀಕ್ಷಸಲು ಬೋಟ್‌ನಲ್ಲಿ ತೆರಳಿದ್ದಾರೆ.
ಯಾದವಾಡ ಸೇತುವೆ ಜಲಾವೃತ್ತದಿಂದ ತೆರವು
ಘಟಪ್ರಭಾ ನದಿ ನೀರಿನ ಹರಿವು ತಗ್ಗುತ್ತಿರುವ ಹಿನ್ನೆಲೆ ಸುಮಾರು ಐದಾರು ದಿನಗಳಿಂದ ಜಲಾವೃತವಾಗಿದ್ದ ಬಾಗಲಕೋಟೆ ಜಿಲ್ಲೆ ಮುಧೋಳದ ಯಾದವಾಡ ಸೇತುವೆ ತೆರವಾಗುತ್ತಿದೆ. ಪ್ರವಾಹಕ್ಕೆ ಸೇತುವೆ ಪಕ್ಕದ ಹೊಲಗದ್ದೆಗಳಲ್ಲಿದ್ದ ರಸ್ತೆ, ವಿದ್ಯುತ್ ಕಂಬಗಳು ಕೊಚ್ಚಿಹೊಗಿದ್ದು, ಸೇತುವೆ ಇನ್ನೂ ಸಂಪೂರ್ಣ ತೆರವಾಗಿಲ್ಲ.
ಇದನ್ನೂ ಓದಿ:
ಮಳೆ ನಿಂತರೂ ನಿಲ್ಲದ ನೆರೆ ಸಂತ್ರಸ್ತರ ಪರದಾಟ; ಕಾರವಾರದಲ್ಲಿ 50 ಕ್ಕೂ ಹೆಚ್ಚು ಮನೆಗಳು ಕುಸಿತ
ಬೆಳಗಾವಿಯಲ್ಲಿ ಮುಂದುವರಿದ ಪ್ರವಾಹ ಭೀತಿ; ಗ್ರಾಮವೊಂದರಲ್ಲಿ 300ಕ್ಕೂ ಹೆಚ್ಚು ಮನೆಗಳು ಜಲಾವೃತ
Published On - 10:19 am, Fri, 30 July 21