ರಾಯಚೂರಿನಲ್ಲಿ ಸಿಂಥೆಟಿಕ್ ಸೇಂದಿ ದಂಧೆ ಜಾಲಾಡಿದ ಅಬಕಾರಿ: ಕೊಳಚೆ ಪ್ರದೇಶದಲ್ಲಿ ತಯಾರಾಗುತ್ತಿತ್ತು ಸೇಂದಿ

| Updated By: Ganapathi Sharma

Updated on: Apr 08, 2024 | 11:48 AM

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರ್ನಾಟಕದಾದ್ಯಂತ ಹಣ, ಹೆಂಡದ ಹೊಳೆಯೇ ಹರಿಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಸಾಗಾಟವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಇದೀಗ ರಾಯಚೂರಿನಲ್ಲಿ ಸಿಂಥೆಟಿಕ್ ಸೇಂದಿ ದಂಧೆ ಬಯಲಾಗಿದೆ.

ರಾಯಚೂರಿನಲ್ಲಿ ಸಿಂಥೆಟಿಕ್ ಸೇಂದಿ ದಂಧೆ ಜಾಲಾಡಿದ ಅಬಕಾರಿ: ಕೊಳಚೆ ಪ್ರದೇಶದಲ್ಲಿ ತಯಾರಾಗುತ್ತಿತ್ತು ಸೇಂದಿ
ಅತಿ ಕೊಳಚೆ ಪ್ರದೇಶದಲ್ಲಿ ತಯಾರಾಗುತ್ತಿತ್ತು ಸಿಂಥೆಟಿಕ್ ಸೇಂದಿ
Follow us on

ರಾಯಚೂರು, ಏಪ್ರಿಲ್ 8: ಲೋಕಸಭೆ ಚುನಾವಣೆ (Lok Sabha Elections) ಸಮೀಪಿಸುತ್ತಿರುವಂತೆಯೇ ಹಣ, ಹೆಂಡ ಹಂಚಿಕೆ ಜೋರಾಗಿದೆ. ರಾಜ್ಯದ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಮದ್ಯ (Liquor) ಹಂಚುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಮೈಸೂರು, ಹಾಸನ ಸೇರಿದಂತೆ ರಾಜ್ಯದ ಹಲವೆಡೆ ಕೋಟ್ಯಂತರ ರೂಪಾಯಿ ಮೌಲ್ಯದ ಲೀಟರ್​ಗಟ್ಟಲೆ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಮತ್ತು ಚುನಾವಣಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದಾರೆ. ಈ ಮಧ್ಯೆ, ಗಡಿ ಜಿಲ್ಲೆ ರಾಯಚೂರಿನಲ್ಲಿ (Raichur) ಅಕ್ರಮ ಸೇಂದಿ ದಂಧೆ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ.

ಮನುಷ್ಯರ ಜೀವ ಹಿಂಡುವ ಹೊಸ ಬಗೆಯ ಸಿಂಥೆಟಿಕ್ ಸೇಂದಿ ದಂಧೆಯನ್ನು ರಾಯಚೂರು ಅಬಕಾರಿ ಇಲಾಖೆ ಜಾಲಾಡಿದೆ. ಸೋಮವಾರ ಬೆಳ್ಳಂಬೆಳಿಗ್ಗೆ ಅಬಕಾರಿ ಇಲಾಖೆಯ ತಂಡ ರಾಯಚೂರು ನಗರದ ಗದ್ವಾಲ್ ರಸ್ತೆಯ ಮನೆಯೊಂದರ ಮೇಲೆ ದಾಳಿ ನಡೆಸಿದ್ದು, ದಂಧೆಯನ್ನು ಬಯಲಿಗಳೆದಿದೆ.

ನಿಷೇಧಿತ ಸಿಎಚ್ ಪೌಡರ್ ಎಂಬ ಕೆಮಿಕಲ್ ಬಳಸಿ ಸೇಂದಿ ತಯಾರಿಸುವುದು ಈ ಹಿಂದೆಯೂ ಬೆಳಕಿಗೆ ಬಂದಿತ್ತು. ಇದೀಗ ಅಲ್ಫಾ ಎಂಬ ಹೊಸ ಬಗೆಯ ರಾಸಾಯನಿಕ ಬಳಸಿ ಸೇಂದಿ ತಯಾರು ಮಾಡುತ್ತಿರುವುದು ಗೊತ್ತಾಗಿದೆ

ಅತಿ ಕೊಳಚೆ ಪ್ರದೇಶದಲ್ಲಿ ತಯಾರಾಗುತ್ತಿತ್ತು ಸಿಂಥೆಟಿಕ್ ಸೇಂದಿ

ಅತಿ ಕೊಳಚೆ ಪ್ರದೇಶದಲ್ಲಿ ಸೇಂದಿ ತಯಾರಿಸಲಾಗುತ್ತಿರುವುದು ಅಬಕಾರಿ ಅಧಿಕಾರಿಗಳ ದಾಳಿ ವೇಳೆ ಕಂಡುಬಂದಿದೆ. ಕಸದಲ್ಲಿರುವ ಕ್ಯಾನ್​​ಗಳಲ್ಲೇ ಸೇಂದಿ ಶೇಖರಣೆ ಮಾಡಿ ಇಡಲಾಗಿತ್ತು. 1 ಗ್ರಾಂಗೆ ಸುಮಾರು 1500 ರೂ.ಮೌಲ್ಯ ಬೆಲೆ ಬಾಳುವ ಅಲ್ಫಾ ರಾಸಾಯನಿಕವನ್ನು ಸೇಂದಿ ತಯಾರಿಗೆ ಬಳಸಲಾಗುತ್ತಿತ್ತು. ಈ ಮೂಲಕ 15 ಗ್ರಾಂನಿಂದ 6 ಬ್ಯಾರಲ್ ಸೇಂದಿ ತಯಾರಿಕೆ ಮಾಡಲಾಗಿತ್ತು.

200 ಲಿಟರ್ ಸಾಮರ್ಥ್ಯದ 6 ಬ್ಯಾರಲ್​​ನಲ್ಲಿ ಸೇಂದಿ ಶೇಖರಣೆ ಮಾಡಿ ಇಡಲಾಗಿತ್ತು. ಲಿಟರ್​​​ಗೆ 40-50 ರೂ.ನಂತೆ 1000 ಲಿಟರ್ ಸೇಂದಿ ಸಂಗ್ರಹಿಸಿ ಇಡಲಾಗಿತ್ತು. ಇದನ್ನು ಜಪ್ತಿ ಮಾಡಲಾಗಿದೆ. ಜತೆಗೆ, ಕೆಮಿಕಲ್ ಅಲ್ಫಾ, ಸಿಟ್ರಿಕ್ ಆಸಿಡ್, ಪೇಸ್ಟ್, ವೈಟ್ ಬಿಸ್ಕೆಟ್ ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಲೋಕಸಭಾ ಚುನಾವಣೆ 2024: ಹಾಸನದಲ್ಲಿ 9 ಕೋಟಿ ಮೌಲ್ಯದ ಮದ್ಯ ಜಪ್ತಿ

ಸೇಂದಿ ತಯಾರಿಯ ಕಿಂಗ್​​ಪಿನ್ ವಾಹಿದ್ ಪರಾರಿಯಾಗಿದ್ದಾನೆ. ಆತನ ಸಹಚರರಾದ ಅರ್ಬಾಸ್ ಹಾಗೂ ಜಲಾಲ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಬಕಾರಿ ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ