Fire Accident: ರಾಯಚೂರು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅನಾಹುತ, ಸ್ವಲ್ಪದರಲ್ಲಿ ತಪ್ಪಿದ ಭಾರೀ ಅವಘಡ

ಅಗ್ನಿ ಅನಾಹುತದಿಂದ ಕಲ್ಲಿದ್ದಲು ಉರಿಸುವ ಒಲೆಗೆ ಉರುವಲು ಸರಬರಾಜು ಮಾಡುವ ಸುಮಾರು 25 ಕನ್​ವೇಯರ್ ಬೆಲ್ಟ್​ಗಳು ಹೊತ್ತಿ ಉರಿದಿದೆ.

Fire Accident: ರಾಯಚೂರು ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅನಾಹುತ, ಸ್ವಲ್ಪದರಲ್ಲಿ ತಪ್ಪಿದ ಭಾರೀ ಅವಘಡ
ರಾಯಚೂರು ಶಾಖೋತ್ಪನ್ನ ಘಟಕದಲ್ಲಿ ಅಗ್ನಿ ಅನಾಹುತ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Nov 08, 2022 | 11:21 AM

ರಾಯಚೂರು: ಆರ್​ಟಿಪಿಎಸ್​ ಶಾಖೋತ್ಪನ್ನ ಕೇಂದ್ರದಲ್ಲಿ ವಿದ್ಯುತ್ ಕೇಂದ್ರದಲ್ಲಿ ಭಾರೀ ಅನಾಹುತವೊಂದು ಸ್ವಲ್ಪದರಲ್ಲಿ ತಪ್ಪಿದೆ. ವಿದ್ಯುತ್ ಉತ್ಪಾದನೆ ನಡೆಯುತ್ತಿದ್ದ ವೇಳೆಯಲ್ಲಿಯೇ ಕಲ್ಲಿದ್ದಲು ಸಾಗಿಸುವ ಕೋಲ್ ಬೆಲ್ಟ್ ಹೊತ್ತಿ ಉರಿದಿದೆ. ಸ್ಥಳದಲ್ಲಿದ್ದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಬೆಂಕಿ ನಂದಿಸಲು ಶ್ರಮಿಸುವುದರ ಜೊತೆಗೆ ಅಗ್ನಿ ಅನಾಹುತದ ಎಚ್ಚರಿಕೆ ಮೊಳಗಿಸಿದರು. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿತು. ರಾಯಚೂರು ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಒಟ್ಟು 8 ವಿದ್ಯುತ್ ಉತ್ಪಾದನಾ ಘಟಕಗಳಿವೆ. ಕರ್ನಾಟಕದ ವಿದ್ಯುತ್ ಭದ್ರತೆಗೆ ಈ ಘಟಕದ ಕೊಡುಗೆ ದೊಡ್ಡದು. ರಾಯಚೂರು ಘಟಕದ ವಿದ್ಯುತ್ ಉತ್ಪಾದನೆಯಲ್ಲಿ ತುಸು ಏರುಪೇರಾದರೂ ಕರ್ನಾಟಕದಲ್ಲಿ ವಿತರಣೆಯ ಮೇಲೆ ಪರಿಣಾಮವಾಗುತ್ತದೆ.

ಅಗ್ನಿ ಅನಾಹುತದಿಂದ ಕಲ್ಲಿದ್ದಲು ಉರಿಸುವ ಒಲೆಗೆ ಉರುವಲು ಸರಬರಾಜು ಮಾಡುವ ಸುಮಾರು 25 ಕನ್​ವೇಯರ್ ಬೆಲ್ಟ್​ಗಳು ಹೊತ್ತಿ ಉರಿದಿದೆ. ಘಟನೆ ಹಿನ್ನೆಲೆಯಲ್ಲಿ 5 ಮತ್ತು 8ನೇ ಘಟಕಕ್ಕೆ ಕಲ್ಲಿದ್ದಲು ಸರಬರಾಜು ಸ್ಥಗಿತಗೊಂಡಿದ್ದು ವಿದ್ಯುತ್ ಉತ್ಪಾದನೆಗೂ ವ್ಯತ್ಯಯ ಉಂಟಾಗಿದೆ. ಅಗ್ನಿ ಅನಾಹುತದಿಂದ ಸುಮಾರು ₹ 70 ಲಕ್ಷ ಮೌಲ್ಯದಷ್ಟು ನಷ್ಟ ಉಂಟಾಗಿದೆ.

ರಾಯಚೂರು ಶಾಖೋತ್ಪನ್ನ ಕೇಂದ್ರವು ಇತ್ತೀಚೆಗೆ ಸಲ್ಲದ ಕಾರಣಗಳಿಂದಲೇ ಆಗಾಗ ಸುದ್ದಿಯಾಗುತ್ತಿರುತ್ತದೆ. ಇತ್ತೀಚೆಗಷ್ಟೇ ಕಾರ್ಮಿಕನೊಬ್ಬ ಹೊಗೆಕೊಳವೆಯ ಮೇಲೇರಿ ಕಾರ್ಮಿಕರಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಗಮನ ಸೆಳೆಯಲು ಯತ್ನಿಸಿದ್ದ. ಕಳೆದ ಆಗಸ್ಟ್ ತಿಂಗಳಲ್ಲಿ ಹಾರುಬೂದಿ ಸಾಗಿಸುವ ಬಂಕರ್​ಗಳು ಕುಸಿದಿದ್ದವು. ಅನಂತರ ಒಂದು ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸ್ಥಗಿತಗೊಂಡಿತ್ತು.

ಲೈವ್ ವಿಡಿಯೊದಲ್ಲಿ ಆತ್ಮಹತ್ಯೆ ಸಂದೇಶ ರವಾನಿಸಿದ್ದ ಕಾರ್ಮಿಕ

ರಾಯಚೂರು ತಾಲ್ಲೂಕಿನ ಶಕ್ತಿನಗರ ಬಳಿಯಿರುವ ಆರ್​ಟಿಪಿಎಸ್ ಘಟಕದ ಕಾರ್ಮಿಕರೊಬ್ಬರು ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಘಟಕದ ಕಟ್ಟಡದ ಮೇಲೇರಿ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದರು. ಅ 17ರಂದು ನಡೆದಿದ್ದ ಈ ಬೆಳವಣಿಗೆಯು ಇಡೀ ರಾಜ್ಯದ ಗಮನ ಸೆಳೆದಿತ್ತು. ಚಿಮಣಿ ಏರಿದ ನಂತರ ಲೈವ್ ವಿಡಿಯೊದಲ್ಲಿ ಕಾಣಿಸಿಕೊಂಡಿದ್ದ ಅವರು, ಶೀಘ್ರ ಕನಿಷ್ಠ ವೇತನ ಜಾರಿ ಮಾಡಬೇಕು. ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದರು. ಕಾರ್ಮಿಕ ಆತ್ಮಹತ್ಯೆಗೆ ಯತ್ನಿಸುತ್ತಿರುವ ವಿಷಯ ತಿಳಿದ ತಕ್ಷಣ ಸಾವಿರಾರು ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ ಆರಂಭಿಸಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

Published On - 11:17 am, Tue, 8 November 22