ರಾಯಚೂರು: ಕಾರ್ನಲ್ಲಿ ಬಂದಿಳಿದು ಹೈಟೆಕ್ ಕಳ್ಳತನ! ಒಂದೇ ರಾತ್ರಿ ನಾಲ್ಕು ದೇವಸ್ಥಾನಗಳಲ್ಲಿ ಕೃತ್ಯ, ಬೆಚ್ಚಿದ ಜನ
ಅವರೆಲ್ಲ ಕಾರ್ನಲ್ಲಿ ಬಂದಿಳಿದು ಒಂದೇ ರಾತ್ರಿ ದೇವಸ್ಥಾನಗಳಲ್ಲಿ ಕೈಚಳ ತೋರಿಸುತ್ತಿರುವ ಹೈಟೆಕ್ ಕಳ್ಳರು. ಸ್ಟೈಲಿಶ್ ಆಗಿ ನುಗ್ಗಿ ಕಳ್ಳತನ ಮಾಡುವ ಕಿರಾತಕರ ಹಾವಳಿಗೆ ಗಡಿ ಜಿಲ್ಲೆ ರಾಯಚೂರು ಬೆಚ್ಚಿ ಬಿದ್ದಿದೆ. ಒಮ್ಮೆ ಮೊಬೈಲ್ ಅಂಗಡಿಗಳಲ್ಲಿ ಸರಣಿ ಕಳ್ಳತನವಾದ್ರೆ, ಮತ್ತೊಮ್ಮೆ ಪೆಟ್ಟಿ ಅಂಗಡಿಗಳಲ್ಲಿ ಕೈಚಳಕ. ಈಗ ದೇವಸ್ಥಾನಗಳಲ್ಲಿ ಸರಣಿ ಕೃತ್ಯ ನಡೆದಿದೆ.
ರಾಯಚೂರು, ಫೆ.20: ನೋಡುವುದಕ್ಕೆ ಸಾಮಾನ್ಯರಂತೆ ಕಂಡರೂ, ಇವರು ಆಕ್ಟಿವ್ ಆಗೋದೇ ನಟ್ಟು ನಡುರಾತ್ರಿ. ಜನ ಮಲಗಿದ ಮೇಲೆ ಕಾರ್ನಲ್ಲಿ ಎಂಟ್ರಿ ಕೊಡುವ ಈ ಐನಾತಿಗಳು ಒಂದೇ ರಾತ್ರಿ ನಾಲ್ಕು ದೇವಸ್ಥಾನಗಳಲ್ಲಿ ಕಳ್ಳತನ ಮಾಡಿದ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು(Sindhanur) ತಾಲ್ಲೂಕಿನ ಗೊರೆಬಾಳ ಕ್ಯಾಂಪ್ ಹಾಗೂ ಸಾಸಲಮರಿ ಕ್ಯಾಂಪ್ನಲ್ಲಿ ನಡೆದಿದೆ. ಗೊರೆಬಾಳ ಕ್ಯಾಂಪ್ನಲ್ಲಿ ಆಂಜನೇಯ ದೇವಸ್ಥಾನದಲ್ಲಿ ಬೆಳ್ಳಿ ಕಿರಿಟ, ಹುಂಡಿ ಹಣ ಎಗರಿಸಿದ್ದಾರೆ. ಇದಾದ ಬಳಿಕ ಇದೇ ಗ್ರಾಮದ ರಾಮನ ದೇವಸ್ಥಾನದಲ್ಲಿ ಚಿನ್ನಾಭರಣ, ಸಿದ್ದೇಶ್ವರ ಮಠದಲ್ಲಿ ಮಾಂಗಲ್ಯ ಸರ, ಮೂಗೂತಿ ಕಳ್ಳತನ ಮಾಡಲಾಗಿದೆ.
ಕಳ್ಳರ ಕೈಚಳಕ ಸಿಸಿಟಿವಿಯಲ್ಲಿ ಸೆರೆ
ಹೀಗೆ ಗೊರೆಬಾಳ ಕ್ಯಾಂಪ್ನಲ್ಲಿ ಗುಡಿಸಿ ಗುಂಡಾಂತರ ಮಾಡಿದ ಬಳಿಕ ಐನಾತಿಗಳು ಸೀದಾ ಹೋಗಿದ್ದು ಸಾಸಲಮರಿ ಕ್ಯಾಂಪ್ಗೆ, ಈ ಕ್ಯಾಂಪ್ನಲ್ಲಿನ ತಾಯಮ್ಮ ದೇವಸ್ಥಾನದಲ್ಲಿ ಸುಮಾರು 2 ಲಕ್ಷದಷ್ಟು ಹುಂಡಿ ಹಣ ಕಳುವು ಮಾಡಲಾಗಿದೆ. ಒಂದೇ ರಾತ್ರಿ ಹೀಗೆ ನಾಲ್ಕು ದೇವಸ್ಥಾನಗಳಲ್ಲಿ ಹೈಟೆಕ್ ಖದೀಮರು ಕಳ್ಳತನ ಮಾಡಿ ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ. ಈ ಹಿಂದೆ ರಾಯಚೂರು ನಗರದ ದೇವಸ್ಥಾನವೊಂದರಲ್ಲಿ ಕಳ್ಳರು ಹುಂಡಿ ಹಣದ ಕಳ್ಳತನಕ್ಕೆ ಯತ್ನಿಸಿ ವಿಫಲರಾಗಿದ್ದರು. ಗಂಟೆಗಟ್ಟಲೇ ತದಕಾಡಿದ್ರು ಹುಂಡಿ ಲಾಕರ್ ಒಡೆದಿರ್ಲಿಲ್ಲ. ಆ ದೃಶ್ಯ ಕೂಡ ವೈರಲ್ ಆಗಿತ್ತು. ನಂತರ ಇತ್ತೀಚೆಗೆ ಸಿಂಧನೂರು ಪಟ್ಟಣದಲ್ಲಿ ಮೊಬೈಲ್ ಅಂಗಡಿಗಳಲ್ಲಿ ಕಳ್ಳತನವಾಗಿತ್ತು.
ಇದನ್ನೂ ಓದಿ:ಹಳಿಯಾಳದಲ್ಲಿ ಬುರ್ಖಾ ಧರಿಸಿಕೊಂಡು ಬಂದ ಮಹಿಳೆಯರ ಗ್ಯಾಂಗ್‌ನಿಂದ ಚಿನ್ನ ಕಳ್ಳತನ
ಮೊನ್ನೆಯಷ್ಟೇ ರಾಯಚೂರು ತಾಲ್ಲೂಕಿನ ಆಂಧ್ರ ಗಡಿ ಭಾಗದ ಇಡಪನೂರು ಠಾಣಾ ವ್ಯಾಪ್ತಿ ಪೆಟ್ಟಿ ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆದಿದ್ದವು. ಪೆಟ್ಟಿ ಅಂಗಡಿಗಳಲ್ಲಿರುವ ಸಾವಿರ, ಎರಡು ಸಾವಿರ ರೂಪಾಯಿ ಹಣವನ್ನೂ ಲಪಟಾಯಿಸಿದ್ರು. ಹೀಗೆ ಗಡಿ ಭಾಗಗಳಲ್ಲಿ ಕಳ್ಳರು ಕೈ ಚಳಕ ತೋರುತ್ತಿರೋದನ್ನ ನೋಡಿದ್ರೆ, ಇದು ಹೊರ ರಾಜ್ಯದ ಕಳ್ಳರ ಕೃತ್ಯ ಇರಬಹುದು ಎಂದು ಹೇಳಲಾಗುತ್ತಿದೆ. ಇಲ್ಲಿ ಕಳ್ಳತನ ಮಾಡಿ ಸಲೀಸಾಗಿ ತಮ್ಮ ರಾಜ್ಯಕ್ಕೆ ಎಸ್ಕೇಪ್ ಆಗುತ್ತಿರುವ ಶಂಕೆ ವ್ಯಕ್ತವಾಗಿದೆ. ಇತ್ತ ಒಂದೇ ರಾತ್ರಿ ನಾಲ್ಕು ದೇವಸ್ಥಾನ ಕಳ್ಳತನ ಪ್ರಕರಣ ಬೆಳಕಿಗೆ ಬಂದ ಬಳಿಕ ಸಿಂಧನೂರು ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಐನಾತಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ