ರಾಯಚೂರಿನಲ್ಲಿ ಗಾಂಜಾ ಚಾಕೊಲೇಟ್ ದಂಧೆ ಪ್ರಕರಣ: ಎಂಟು ಕಡೆ ದಾಳಿ, ಐವರ ಬಂಧನ

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 03, 2023 | 10:03 AM

ಮಂಗಳೂರಿನ ಬೆನ್ನಲ್ಲೇ ನಿನ್ನೆ(ಆ.2) ರಾಯಚೂರು ಅಬಕಾರಿ ಅಧಿಕಾರಿಗಳು ಗಾಂಜಾ ಚಾಕೊಲೇಟ್​ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಈ ಪ್ರಕರಣದಿಂದ ಮತ್ತಷ್ಟು ಕಾರ್ಯಪ್ರವೃತ್ತರಾದ ಪೊಲೀಸರು ಮತ್ತು ಅಬಕಾರಿ ಅಧಿಕಾರಿಗಳು ಸೇರಿ ಉತ್ತರ ಪ್ರದೇಶ ಹಾಗೂ ಬಿಹಾರ ಮೂಲದ ಕಿಂಗ್​ಫಿನ್​ಗಳನ್ನ ಬಂಧಿಸಿದ್ದಾರೆ.

ರಾಯಚೂರಿನಲ್ಲಿ ಗಾಂಜಾ ಚಾಕೊಲೇಟ್ ದಂಧೆ ಪ್ರಕರಣ: ಎಂಟು ಕಡೆ ದಾಳಿ, ಐವರ ಬಂಧನ
ರಾಯಚೂರಿನಲ್ಲಿ ಗಾಂಜಾ ಚಾಕೊಲೇಟ್​ ಮಾರಾಟ
Follow us on

ರಾಯಚೂರು, ಆ.3: ಮಂಗಳೂರಿನಲ್ಲಿ ಇತ್ತೀಚೆಗಷ್ಟೇ ಮಾದಕ ವಸ್ತು ಮಿಶ್ರಿತ ಚಾಕೊಲೇಟ್​ನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸಿದ್ದರು. ಅದರ ಬೆನ್ನಲ್ಲೇ ನಿನ್ನೆ(ಆ.2) ರಾಯಚೂರು(Raichur) ಅಬಕಾರಿ ಅಧಿಕಾರಿಗಳು ಗಾಂಜಾ ಚಾಕೊಲೇಟ್​ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಈ ಪ್ರಕರಣ ಸಂಬಂಧ ಎಚ್ಚೆತ್ತುಕೊಂಡ ಅಬಕಾರಿ ಅಧಿಕಾರಿಗಳು ಹಾಗೂ ರಾಯಚೂರು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 8 ಕಡೆ ದಾಳಿ ನಡೆಸಿ ಉತ್ತರ ಪ್ರದೇಶ ಹಾಗೂ ಬಿಹಾರದ ಲಿಂಕ್​ಗಳನ್ನು ಬೇಧಿಸಿದ್ದಾರೆ. ಹೌದು, ಕಿರಾಣಿ ಅಂಗಡಿಗಳು, ಪಾನ್ ಶಾಫ್​ಗಳಲ್ಲೇ ಇವರು ಈ ದಂಧೆ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ಬಗೆದಷ್ಟು ಹೊರ ಬರ್ತಿದೆ ಖತರ್ನಾಕ್ ದಂಧೆಯ ಕರಾಳ ಮುಖ

ಇನ್ನು ಮೊದಲ ದಾಳಿ ಬೆನ್ನಲ್ಲೆ ಕಾರ್ಯಸನ್ನದ್ಧರಾದ ಪೊಲೀಸರು ರಾಯಚೂರು ನಗರ, ಯರಮರಸ್, ಚಿಕ್ಕಸುಗೂರು, ಇಂಡಸ್ಟ್ರಿಯಲ್ ಏರಿಯಾ ಸೇರಿ ಎಂಟು ಕಡೆ ದಾಳಿ ನಡೆಸಿ, ನಾಲ್ಕು ಕಡೆಗಳಲ್ಲಿ ಇಬ್ಬರು ಕಿಂಗ್​ ಫಿನ್​ಗಳು ಸೇರಿ ಐದು ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಿಹಾರ್ ಮೂಲದ ಸಂದೀಪ್ ಪಾಂಡೆ ಹಾಗೂ ರಾಯಚೂರು ನಗರದ ವಾಜಿದ್ ಬಂಧಿತ ಕಿಂಗ್​ ಫಿನ್​ಗಳಾದರೆ, ಅದನ್ನು ಡಿಸ್ಟ್ರಿಬ್ಯೂಟ್ ಮಾಡುತ್ತಿದ್ದ ರತನೇಶ್ ಮತ್ತು ಮಗ ಕುಂದನ್ಕುಮಾರ್ ಹಾಗೂ ಕೃಷ್ಣಾ ರೆಡ್ಡಿಯನ್ನ ಬಂಧಿಸಲಾಗಿದೆ.

ಇದನ್ನೂ ಓದಿ:ಮಂಗಳೂರು ಬೆನ್ನಲ್ಲೇ ಇದೀಗ ರಾಯಚೂರಿನಲ್ಲಿ ಗಾಂಜಾ ಚಾಕೋಲೆಟ್ ದಂಧೆ; ಇಬ್ಬರ ಬಂಧನ

ಡೌಟ್​ ಬಾರದಿರಲು ಮನೆ ಟೆರಸ್ ಮೇಲೆ ಪಾರಿವಾಳಗಳ ಸಾಕಾಣಿಕೆ

ರಾಯಚೂರು ನಗರದ ಅರಬ್ಮೊಹಲ್ಲಾದ ಮನೆಯಲ್ಲಿ ವಾಸಿಸುತ್ತಿದ್ದ ಕಿಂಗ್​ಫಿನ್​ ವಾಜಿದ್ ಅಕ್ಕ ಪಕ್ಕದವರಿಗೆ ಅನುಮಾನ ಬಾರದಿರಲು ಪಾರಿವಾಳ ಸಾಕಾಣಿಕೆ ಮಾಡುತ್ತಿದ್ದ. ಈ ಹಿನ್ನಲೆ ಆರೋಪಿ ವಾಜಿದ್ ಮನೆಕಡೆ ಯಾರು ತಿರುಗಿ ನೋಡುತ್ತಿರಲಿಲ್ಲ. ಅದರಂತೆ ತನ್ನ ಗಾಂಜಾ ದಂಧೆಯನ್ನ ನಡೆಸುತ್ತಿದ್ದ. ಮತ್ತೊಂದು ಕಡೆ ರಾಯಚೂರು ನಗರದ ಯರಮರಸ್ನಲ್ಲಿ ತಂದೆ ರತನೇಶ್ ಮತ್ತು ಮಗ ಕುಂದನ್ಕುಮಾರ್​ನನ್ನು ಬಂಧಿಸಲಾಗಿದೆ. ಇವರು ತಮ್ಮ ಕಿರಾಣಿ ಅಂಗಡಿಯಲ್ಲಿ ಯಾರುಗೂ ಅನುಮಾನ ಬರದಂತೆ ಗಾಂಜಾ ಚಾಕೋಲೇಟ್ ಮಾರಾಟ ಮಾಡುತ್ತಿದ್ದರು. ಇತ್ತ
ಚಿಕ್ಕಸುಗೂರಿನಲ್ಲಿ ಕೃಷ್ಣಾ ರೆಡ್ಡಿ ಕೂಡ ತನ್ನ ಕಿರಾಣಿ ಅಂಗಡಿಯಲ್ಲಿ ಈ ಚಾಕೊಲೇಟ್​ ಮಾರಾಟ ಮಾಡಿ ಲಾಕ್ ಆಗಿದ್ದಾನೆ.

ಗಾಂಜಾ ಚಾಕೊಲೇಟ್ ದಂಧೆಗೆ ಕೇಂದ್ರಗಳಾದ ಗಡಿ ಜಿಲ್ಲೆಗಳು

ಇನ್ನು ಹೆಚ್ಚಾಗಿ ಬೆಳಕಿಗೆ ಬರುತ್ತಿರುವ ಗಾಂಜಾ ದಂಧೆ ರಾಯಚೂರು, ಯಾದಗಿರಿ, ಕಲಬುರ್ಗಿಯಲ್ಲಿ ಇದೇ ನೆಟ್ವರ್ಕ್ ಮೂಲಕ ನಡೆಯುತ್ತಿದೆ. ಈ ಹಿಂದೆ ಯಾದಗಿರಿಯಲ್ಲಿ ನಡೆದ ಕೇಸ್ ಬಳಿಕ ರಾಯಚೂರು ಅಬಕಾರಿ ವಿಭಾಗ ಅಲರ್ಟ್ ಆಗಿ, ಇದೀಗ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನಾದರೂ ಇಂತಹ ಘಟನೆಗಳು ಕೊನೆ ಕಾಣುತ್ತದೆಯಾ ಅಥವಾ ಇವರ ನೆಟ್​ವರ್ಕ್​ ಇನ್ನು ದೊಡ್ಡದಿದೆಯಾ ತನಿಖೆಯಿಂದ ಹೊರಬರಬೇಕಿದೆ.

ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ