ಮಂಗಳೂರು ಬೆನ್ನಲ್ಲೇ ಇದೀಗ ರಾಯಚೂರಿನಲ್ಲಿ ಗಾಂಜಾ ಚಾಕೋಲೆಟ್ ದಂಧೆ; ಇಬ್ಬರ ಬಂಧನ
ರಾಜ್ಯದಲ್ಲಿ ಮಾದಕವಸ್ತು ಪ್ರಕರಣಗಳು ಹೆಚ್ಚಾಗಿ ಬೆಳಕಿಗೆ ಬರುತ್ತಿದೆ. ಅದರಂತೆ ಇದೀಗ ರಾಯಚೂರಿನಲ್ಲಿ ಗಾಂಜಾ ಚಾಕೋಲೆಟ್ ಮಾರಾಟ ಮಾಡುವ ಗ್ಯಾಂಗ್ ಪತ್ತೆಯಾಗಿದ್ದು, ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ.
ರಾಯಚೂರು, ಆ.2: ರಾಜ್ಯದಲ್ಲಿ ಮಾದಕವಸ್ತು ಪ್ರಕರಣಗಳ ತಡೆಗೆ ಪೊಲೀಸರು ಟೊಂಕ ಕಟ್ಟಿ ನಿಂತಂತೆ ಕಾಣುತ್ತಿದೆ. ಹೌದು ಇತ್ತೀಚೆಗೆ ಹೆಚ್ಚಾಗಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದೆ. ಕಳೆದ ಜುಲೈ 21ರಂದು ಮಂಗಳೂರಿ (Mangalore) ನಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್(Chocolate) ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಇದೀಗ ರಾಯಚೂರಿ(Raichur)ನಲ್ಲಿ ಗಾಂಜಾ ಚಾಕೋಲೆಟ್ ಮಾರಾಟ ಮಾಡುವ ಗ್ಯಾಂಗ್ ಪತ್ತೆಯಾಗಿದ್ದು, ಇಬ್ಬರನ್ನು ಅರೆಸ್ಟ್ ಮಾಡಿದ್ದಾರೆ. ಇವರು ಉತ್ತರ ಪ್ರದೇಶದಿಂದ ಗಾಂಜಾವನ್ನು ತಂದು ರಾಯಚೂರಿನಲ್ಲಿ ಮಾರಾಟ ಮಾಡುತ್ತಿರುವುದಾಗಿ ತನಿಖೆಯಿಂದ ಬೆಳಕಿಗೆ ಬಂದಿದೆ.
ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಟಾರ್ಗೆಟ್
ಇನ್ನು ಈ ದಂಧೆಕೋರರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರನ್ನ ಟಾರ್ಗೆಟ್ ಮಾಡಿದ್ದರು. ಹೌದು, ಇಂಡಸ್ಟ್ರಿಯಲ್ ಫ್ಯಾಕ್ಟರಿಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲಸದವರ ಜೊತೆಗೆ ಕಾಲೇಜು ವಿದ್ಯಾರ್ಥಿಗಳಿಗೆ ಇದನ್ನು ಮಾರಾಟ ಮಾಡುತ್ತಿದ್ದರು. ಇದನ್ನ ಮಕ್ಕಳು ತಿನ್ನುವ ಚಾಕೋಲೆಟ್ ಮಾದರಿಯಲ್ಲಿಯೇ ಗಾಂಜಾ ಚಾಕೋಲೆಟ್ ರೆಡಿ ಮಾಡಿದ್ದರು. ಜೊತೆಗೆ ಪ್ರತಿ ಚಾಕೋಲೆಟ್ಗೆ 50ರಿಂದ60 ರೂಪಾಯಿಗೆ ಮಾರಾಟ ಮಾಡುತ್ತಿದ್ದರು.
ಇದನ್ನೂ ಓದಿ:ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಚರಣೆ, ಮಾದಕ ವಸ್ತು ಸಹಿತ ಪಿಸ್ತೂಲ್ ಹೊಂದಿದ್ದ ಡ್ರಗ್ ಪೆಡ್ಲರ್ಗಳ ಬಂಧನ
ಅಬಕಾರಿ ಇಲಾಖೆಯ ಅಧಿಕಾರಿಗಳಿಂದ ಭರ್ಜರಿ ಬೇಟೆ
ಇನ್ನು ಈ ಕುರಿತು ಖಚಿತ ಮಾಹಿತಿ ಮೇರೆಗೆ ರಾಯಚೂರು ನಗರದ ಎಲ್.ಬಿ.ಎಸ್ ನಗರದ ಮನೆಯೊಂದರಲ್ಲಿ ದಾಳಿ ಮಾಡಿದ ಅಬಕಾರಿ ಇಲಾಖೆಯ ಅಧಿಕಾರಿಗಳು ರಾಚಯ್ಯ ಸ್ವಾಮಿ ಹಾಗೂ ಅಮರಯ್ಯ ಸ್ವಾಮಿ ಅವರನ್ನು ಬಂಧಿಸಿದ್ದಾರೆ. ಬಂಧಿತರಿಂದ 2 ಕೆ.ಜಿ 66 ಗ್ರಾಂ ತೂಕದ ಗಾಂಜಾ ಚಾಕಲೇಟ್ ಜಪ್ತಿ ಮಾಡಲಾಗಿದೆ.
ಇನ್ನಷ್ಟು ಅಪರಾಧ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ