ರಾಹುಲ್​ ಗಾಂಧಿ ತಂದಿದ್ದ ಬೆಳ್ಳಿ ಖಡ್ಗ ಸ್ವೀಕರಿಸಲು ಒಪ್ಪದ ಮಂತ್ರಾಲಯ ರಾಯರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ

| Updated By: Digi Tech Desk

Updated on: Oct 21, 2022 | 10:24 AM

ಸುಬುಧೇಂದ್ರ ತೀರ್ಥರು ಬೆಳ್ಳಿ ಖಡ್ಗ ಸ್ವೀಕರಿಸಲು ಒಪ್ಪಲಿಲ್ಲ.ಖಡ್ಗವನ್ನು ನೋಡಿ ನಯವಾಗಿಯೇ ಬೇಡ ಎಂದು ತಿರಸ್ಕರಿಸಿದರು.

ರಾಹುಲ್​ ಗಾಂಧಿ ತಂದಿದ್ದ ಬೆಳ್ಳಿ ಖಡ್ಗ ಸ್ವೀಕರಿಸಲು ಒಪ್ಪದ ಮಂತ್ರಾಲಯ ರಾಯರ ಮಠದ ಸುಬುಧೇಂದ್ರ ತೀರ್ಥ ಸ್ವಾಮೀಜಿ
ಮಂತ್ರಾಲಯ ರಾಯರ ಮಠದಲ್ಲಿ ರಾಹುಲ್ ಗಾಂಧಿ (ಎಡಚಿತ್ರ). ಸುಬುಧೇಂದ್ರ ತೀರ್ಥರು (ಬಲಚಿತ್ರ)
Follow us on

ರಾಯಚೂರು: ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ನಿನ್ನೆ (ಅ 20) ಭೇಟಿ ನೀಡಿದ್ದರು. ಈ ವೇಳೆ ಅವರು ಮಂತ್ರಾಲಯ ಮಠದ (Mantralaya Mutt) ಪೀಠಾಧಿಪತಿ ಸುಬುಧೇಂದ್ರ ತೀರ್ಥರಿಗೆ ಬೆಳ್ಳಿ ಖಡ್ಗ ಅರ್ಪಿಸಲು ಮುಂದಾದರು. ಆದರೆ ಸುಬುಧೇಂದ್ರ ತೀರ್ಥರು ಬೆಳ್ಳಿ ಖಡ್ಗ ಸ್ವೀಕರಿಸಲು ಒಪ್ಪಲಿಲ್ಲ. ಅದನ್ನು ಸ್ಪರ್ಶಿಸಲೂ ಇಲ್ಲ. ಖಡ್ಗವನ್ನು ನೋಡಿ ನಯವಾಗಿಯೇ ಬೇಡ ಎಂದು ತಿರಸ್ಕರಿಸಿದರು. ಬಳಿಕ ಡಿಕೆಶಿ ಆಪ್ತರು ಖಡ್ಗವನ್ನು ಹಿಂದಕ್ಕೆ ತೆಗೆದುಕೊಂಡು ಹೋದರು.

ಈ ವಿಚಾರ ಸಾರ್ವಜನಿಕ ಚರ್ಚೆಗೆ ಗ್ರಾಸವಾದ ನಂತರ ಮಠದ ಮೂಲಗಳು ಘಟನೆ ಕುರಿತು ಸ್ಪಷ್ಟನೆ ನೀಡಿವೆ. ಶ್ರೀಗಳಿಂದ ಆಶಿರ್ವಾದ ಪಡೆಯಲು ರಾಹುಲ್​ ಗಾಂಧಿ ಬೆಳ್ಳಿ ಖಡ್ಗ ತಂದಿದ್ದರು. ಆದರೆ ಅದನ್ನು ಶ್ರೀಗಳು ಸ್ಪರ್ಶಿಸಲಿಲ್ಲ ಎಂದು ಮಠದ ಹಿರಿಯರು ಹೇಳಿದರು.

ರಾಯರಿಗೆ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ರಾತ್ರಿ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳು ಮಠಕ್ಕೆ ಭೇಟಿ ನೀಡಿ ಬೃಂದಾವನ ದರ್ಶನ ಮಾಡಿದರು. ಗುರುಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ಮಂತ್ರಾಲಯದ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಹುಲ್ ಗಾಂಧಿ ಹಾಗೂ ಅವರೊಂದಿಗೆ ಮಠಕ್ಕೆ ಬಂದಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಆಶೀರ್ವಾದ ಮಾಡಿದರು.

ಇಂದಿನಿಂದ ರಾಯಚೂರಿನಲ್ಲಿ ಪಾದಯಾತ್ರೆ

ರಾಹುಲ್ ಗಾಂಧಿ ನಾಯಕತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಪಾದಯಾತ್ರೆಯು ಇಂದಿನಿಂದ (ಅ 21) ಸಂಚರಿಸಲಿದೆ. ಒಟ್ಟು ಮೂರು ದಿನ, ಅಂದರೆ ಅ 23ರವರೆಗೆ ಜಿಲ್ಲೆಯ ವಿವಿಧೆಡೆ ಭಾರತ್ ಜೋಡೊ ಪಾದಯಾತ್ರೆಯ ಅಂಗವಾಗಿ ಕಾಂಗ್ರೆಸ್ ನಾಯಕರು ಸಂಚರಿಸಲಿದ್ದಾರೆ. ನಾಳೆ ಯಾತ್ರೆಯಲ್ಲಿ ಪ್ರಿಯಾಂಕಾ ಗಾಂಧಿ ಭಾಗವಹಿಸುವ ನಿರೀಕ್ಷೆಯಿದೆ. ಈ ಬಗ್ಗೆ ರಾಜ್ಯ ನಾಯಕರು ಈಗಾಗಲೇ ಈಗಾಗಲೇ ಮಾತುಕತೆ ನಡೆಸಿದ್ದಾರೆ. ರಾಹುಲ್ ಗಾಂಧಿಯವರು ನಿನ್ನೆ (ಅ 20) ರಾತ್ರಿ ಮಂತ್ರಾಲಯ ಮಠದಲ್ಲಿ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನದ ದರ್ಶನ ಪಡೆದು, ಮಂತ್ರಾಲಯದಲ್ಲಿಯೇ ವಾಸ್ತವ್ಯ ಹೂಡಿದ್ದರು. ಇಂದು ಮಂತ್ರಾಲಯದಿಂದ ರಾಷ್ಟ್ರೀಯ ಹೆದ್ದಾರಿ 167ರ ಮೂಲಕ ಯಾತ್ರೆ ಆರಂಭವಾಗಿದೆ.

ತುಂಗಭದ್ರಾ ಸೇತುವೆಯ ಮೂಲಕ ಮುನ್ನಡೆಯಲಿರುವ ಯಾತ್ರೆಯು ಗಿಲ್ಲೆಸುಗೂರು, ಕೆರೆಬುದೂರು, ಯರಗೇರಾ, ರಾಯಚೂರು ನಗರ, ಶಕ್ತಿನಗರ ಮಾರ್ಗದಲ್ಲಿ ಮುನ್ನಡೆಯಲಿದೆ. ಈ ವೇಳೆ ರೈತರು, ಸ್ಥಳೀಯರ ಜೊತೆಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ. ನಾಳೆ (ಅ 22) ರಾಯಚೂರಿನ ಗ್ರಾಮೀಣ ಭಾಗದಿಂದ ನಗರಕ್ಕೆ ಯಾತ್ರೆ ತಲುಪಲಿದೆ. ರಾಯಚೂರು ಜಿಲ್ಲೆಯಲ್ಲಿ ನಡೆಯಲಿರುವ ಯಾತ್ರೆಯ ವೇಳೆ ನಿತ್ಯ 10ರಿಂದ 20 ಸಾವಿರ ಕಾರ್ಯಕರ್ತರನ್ನು ಸೇರಿಸುವ ಗುರಿ ಇರಿಸಿಕೊಳ್ಳಲಾಗಿದೆ. ಅ 23ರ ಬೆಳಿಗ್ಗೆ ರಾಯಚೂರಿನಿಂದ ಕೃಷ್ಣಾ ನದಿ ಸೇತುವೆ ಮಾರ್ಗವಾಗಿ ಯಾತ್ರೆಯು ತೆಲಂಗಾಣಕ್ಕೆ ತೆರಳಲಿದೆ.

Published On - 8:07 am, Fri, 21 October 22