ಮಹಿಳೆಗೆ ವಿ.ಸೋಮಣ್ಣ ಕಪಾಳಮೋಕ್ಷ: ಗೃಹ ಸಚಿವರು ಜೀವಂತವಾಗಿದ್ದರೆ ಕ್ರಮ ಕೈಗೊಳ್ಳಿ – ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ
ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಕಪಾಳಮೋಕ್ಷ ಮಾಡಿದ ಸಚಿವ ವಿ ಸೋಮಣ್ಣ
ರಾಯಚೂರು: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ (V Somanna) ಕಪಾಳಮೋಕ್ಷ ಮಾಡಿದ್ದು, ಗೃಹ ಸಚಿವರು ಜೀವಂತವಾಗಿದ್ದರೆ ಕ್ರಮ ತೆಗೆದುಕೊಳ್ಳಲಿ ಎಂದು ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ (Pushpa Amarnath) ಕಿಡಿಕಾರಿದ್ದಾರೆ. ಪ್ರಕರಣ ಸಂಬಂಧ ರಾಯಚೂರಿನಲ್ಲಿ ಟಿವಿ9ಗೆ ಪ್ರತಿಕ್ರಿಯಿಸಿದ ಅವರು ವಿ.ಸೋಮಣ್ಣ ವಿರುದ್ಧ ಎಫ್ಐಆರ್ ದಾಖಲಿಸಬೇಕು. ಸಚಿವ ವಿ.ಸೋಮಣ್ಣ ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.
ಕೆಂಪಮ್ಮ ಎಸ್ಟಿ ಸಮುದಾಯಕ್ಕೆ ಸೇರಿದ ಮಹಿಳೆ. ಇದು ಬಿಜೆಪಿ ಮಹಿಳಾ ವಿರೋಧಿ ಮನಸ್ಥಿತಿ ತೋರಿಸುತ್ತೆ. ವಿಡಿಯೋ ನೋಡಿದ್ದಿನಿ, ಶಾಕ್ ಆಯ್ತು. ನಾಚಿಕೆಗೇಡಿನ ಘಟನೆಯಿದು. ಬಡ ಮಹಿಳೆ ಆಕೆ. ಗೃಹ ಸಚಿವರು ಜೀವಂತವಾಗಿದ್ದರೆ, ವಿಡಿಯೋ ನೋಡಿ ಕ್ರಮಕೈಗೊಳ್ಳಲಿ ಎಂದು ಒತ್ತಾಯಿಸಿದ್ದಾರೆ.
ತನ್ನ ಸ್ಥಿತಿ ಹೇಳಿಕೊಂಡು, ಹಕ್ಕು ಪತ್ರ ಕೇಳಿರಬಹುದು. ಆಗ ಕೆನ್ನೆಗೆ ಹೊಡೆದಿರೋದು ಕಾಣಿಸುತ್ತಿದೆ. ನಾನು ಮಹಿಳೆಯಾಗಿ ಒಂದೇ ಕೇಳುತ್ತೇನೆ. ನಿಮ್ಮ ಮನೆಯಲ್ಲಿ ಮಹಿಳೆಯರಿದ್ದಾರೆ, ಮಕ್ಕಳಿದ್ದಾರೆ. ಮಹಿಳೆಯರನ್ನ ನೋಡೊವಾಗ ಪ್ರಾಣಿಗಳನ್ನ ನೋಡೊ ರೀತಿ ನೋಡುತ್ತೀರಿ. ಬೇಟಿ ಬಜಾವೋ, ಬೇಟಿ ಪಡಾವೋ ಅಂತಾರೆ. ಆದರೆ ಅವರೇ ಹೆಣ್ಮಕ್ಕಳನ್ನು ಹೊಡೆಯುತ್ತಿದ್ದಾರೆ. ಅಪರಾಧ ಇದು, ತಕ್ಷಣ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆ
ಚಾಮರಾಜನಗರ: ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಮಹಿಳೆಗೆ ಸಚಿವ ವಿ.ಸೋಮಣ್ಣ ಕಪಾಳಮೋಕ್ಷ ಮಾಡಿರುವಂತಹ ಘಟನೆ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ನಿನ್ನೆ (ಅ.22) ಸಂಜೆ ನಡೆದಿತ್ತು. ಗ್ರಾಮದಲ್ಲಿ 175 ಜನರಿಗೆ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮವನ್ನು ಮಧ್ಯಾಹ್ನ 3.30ಕ್ಕೆ ನಿಗದಿ ಮಾಡಲಾಗಿತ್ತು. ಆದರೆ ಸಂಜೆ 6:30 ಕ್ಕೆ ಸಚಿವರು ಆಗಮಿಸಿದ್ದಾರೆ. ಹೀಗಾಗಿ ನಿವೇಶನದ ಹಕ್ಕುಪತ್ರ ಪಡೆಯಲು ನೂಕುನುಗ್ಗಲು ಉಂಟಾಗಿದೆ. ಈ ನಡುವೆ ತನ್ನ ಸಮಸ್ಯೆ ಹೇಳಿಕೊಳ್ಳಲು ಮಹಿಳೆ ಓರ್ವರು ಸಚಿವರ ಬಳಿ ತೆರಳಿದ್ದಾರೆ. ಈ ವೇಳೆ ಸೋಮಣ್ಣ ಮಹಿಳೆಗೆ ಕಪಾಳಮೋಕ್ಷ ಮಾಡಿದ್ದಾರೆ. ಘಟನೆ ನಂತರ ಪರಿಸ್ಥಿತಿಯನ್ನ ಪೊಲೀಸರು ತಿಳಿಗೊಳಿಸಿದರು.
ಸಚಿವರು ಹೊಡೆಯಲಿಲ್ಲ ಎಂದ ಪೆಟ್ಟು ತಿಂದ ಮಹಿಳೆ
ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪೆಟ್ಟು ತಿಂದ ಮಹಿಳೆ ಕೆಂಪಮ್ಮ, ನನಗೆ ಸಚಿವರು ಕಪಾಳಮೋಕ್ಷ ಮಾಡಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನನಗೂ ಸೈಟ್ ಕೊಡಿ ಎಂದು ಕಾಲಿಗೆಬಿದ್ದೆ. ಸಚಿವರು ನನ್ನನ್ನು ಎತ್ತಿ ಕ್ಷಮೆ ಕೇಳಿ ಸಮಾಧಾನಪಡಿಸಿದರು. ಸಚಿವರು ನನಗೆ ಹೊಡೆಯಲಿಲ್ಲ. ಆದರೆ ಅವರು ನನಗೆ ಹೊಡೆದಿದ್ದಾರೆಂದು ತಪ್ಪು ಅಪವಾದ ಹೊರಿಸಿದ್ದಾರೆ. ಸೈಟಿಗೆಂದು ಕೊಟ್ಟಿದ್ದ ನಾಲ್ಕು ಸಾವಿರ ರೂಪಾಯಿಯನ್ನು ವಾಪಸ್ ಕೊಡಿಸಿದ್ದಾರೆ. ಪುಣ್ಯಾತ್ಮ ನನಗೆ ಸೈಟ್ ಕೊಡ್ಸಿ ನನ್ನ ಮಕ್ಕಳಿಗೆ ದಾರಿ ತೋರಿಸಿ ಒಳ್ಳೆಯದು ಮಾಡಿದ್ದಾರೆ. ನಾನು ಅವರ ಫೋಟೋ ಇಟ್ಕೊಂಡು ಪೂಜೆ ಮಾಡುತ್ತೇನೆ ಎಂದು ಹೇಳಿದರು. ಸಚಿವರ ಆಪ್ತ ಸಹಾಯಕನಿಂದ ಮಹಿಳೆಯ ಸ್ಪಷ್ಟನೆ ವಿಡಿಯೋ ಬಿಡುಗಡೆ ಮಾಡಲಾಗಿದೆ.
ಆದರೆ ಇಕ್ಕೂ ಮೊದಲು ಹರಿದಾಡಿದ್ದ ವಿಡಿಯೊದಲ್ಲಿ ಸಚಿವ ವಿ.ಸೋಮಣ್ಣ ಮಹಿಳೆಯ ಕೆನ್ನೆಗೆ ಹೊಡೆಯುವುದು ಸ್ಪಷ್ಟವಾಗಿ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:44 pm, Sun, 23 October 22