ರಾಯಚೂರು: ಕಾಂಗ್ರೆಸ್ ನಾಯಕ ಸಿ.ಎಂ.ಇಬ್ರಾಹಿಂ ವಿಧರ್ಮೀಯರು ಇರಬಹುದು. ಆದರೆ ಅವರೂ ರಾಯರ ಭಕ್ತರೇ ಆಗಿದ್ದಾರೆ. ಅವರು ನಿಜವಾಗಿ ಏನು ಮಾತನಾಡಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಬೃಂದಾವನ ತೆಗೆಯಬೇಕು ಎನ್ನುವಂತೆ ಅವರು ಮಾತನಾಡಿಲ್ಲ. ಬೃಂದಾವನ ತೆಗಿತಾರಾ ಎನ್ನುವ ರೀತಿ ಮಾತನಾಡಿಲ್ಲವೆಂದು ಮಾಧ್ಯಮಗಳಲ್ಲಿ ಅವರ ಹೇಳಿಕೆ ಗಮನಿಸಿದವರು ಹೇಳಿದ್ದಾರೆ. ಅವರು ಪ್ರಚೋದನಾಕಾರಿ ಮಾತುಗಳನ್ನು ಆಡಿರಲಿಕ್ಕಿಲ್ಲ ಎಂದು ಭಾವಿಸುತ್ತೇನೆ ಎಂದು ಮಂತ್ರಾಲಯ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥ ಸ್ವಾಮೀಜಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಘವೇಂದ್ರ ಸ್ವಾಮಿಗಳೊಂದಿಗೆ ಸಿದ್ಧಿ ಮಸೂದ್ ಖಾನ್ ಅತ್ಯಂತ ಆತ್ಮೀಯತೆ ಹೊಂದಿದ್ದರು. ರಾಯರ ಮಹತ್ವ ಕಂಡು ಆ ಕ್ಷೇತ್ರವನ್ನು ಜಹಗೀರಾಗಿ ಕೊಟ್ಟಿದ್ದರು. ಅದಕ್ಕೂ ಮೊದಲು ಮಂತ್ರಾಲಯ ಎನ್ನುವುದು ನಮ್ಮ ಮಠಕ್ಕೆ ನಡೆದುಕೊಳ್ಳುತ್ತಿದ್ದ ಗ್ರಾಮವೇ ಆಗಿತ್ತು ಎಂದು ವಿಶ್ಲೇಷಿಸಿದರು.
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಂದೂಗಳು ಹಲಾಲ್ ಕಟ್ ಬಳಸಬಾರದು ಅಭಿಯಾನ ಕುರಿತು ಪ್ರತಿಕ್ರಿಯಿಸಿದ ಅವರು, ಹಲಾಟ್ ಕಟ್ ಎನ್ನುವುದು ಹಿಂದೂಗಳ ಆಚಾರಲ್ಲ. ಮುಸ್ಲಿಮರ ಧಾರ್ಮಿಕ ಆಚರಣೆಗೆ ಅನುಗುಣವಾಗಿರುವ ಪದ್ಧತಿ. ಈ ಪದ್ಧತಿಯನ್ನು ಏಕೆ ಅನುಸರಿಸುತ್ತಿದ್ದಾರೆ ಮತ್ತು ಏಕೆ ನಿಷೇಧಿಸುತ್ತಾರೆ ಎನ್ನುವ ಕುರಿತು ನನಗೆ ಸಂಪೂರ್ಣ ಮಾಹಿತಿಯಿಲ್ಲ. ಈ ಬಗ್ಗೆ ಆಯಾ ಮತಗಳವರಿಂದ ಸ್ಪಷ್ಟನೆ ಪಡೆದುಕೊಳ್ಳಬೇಕಿದೆ ಎಂದರು.
ಪಠ್ಯ ಪುಸ್ತಕಗಳಲ್ಲಿ ಟಿಪ್ಪು ಪಠ್ಯ ಕೈಬಿಡುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ಸರ್ಕಾರ ಪಠ್ಯಗಳಿಂದ ಪಾಠವನ್ನು ತೆಗೆಯುವುದಾಗಲಿ, ಸೇರಿಸುವುದಾಗಲಿ ಮಾಡಲು ಆಗುವುದಿಲ್ಲ. ಈ ಸಂಬಂಧ ಸಲಹಾ ಮಂಡಳಿ, ಸಮಿತಿಗಳನ್ನು ರಚಿಸುತ್ತಾರೆ. ಅವರು ನೀಡುವ ವರದಿಗಳ ಆಧಾರದಲ್ಲಿ ಯಾವುದು ಇರಬೇಕು, ಯಾವುದು ಇರಬಾರದು ಎನ್ನುವ ಬಗ್ಗೆ ರಾಜ್ಯ ಸರ್ಕಾರ ಸೂಕ್ತವಾದ ನಿರ್ಣಯ ಕೈಗೊಳ್ಳತ್ತವೆ. ರಾಜಕೀಯ ವಿವಾದಗಳಲ್ಲಿ ಮಠಮಾನ್ಯಗಳನ್ನು ಎಳೆದು ತರುವುದು ಸರಿಯಲ್ಲ. ಆಯಾ ಮಠಮಾನ್ಯಗಳಿಗೆ, ದೇವಸ್ಥಾನಗಳಿಗೆ ಆಚಾರ, ಸಂಪ್ರದಾಯ, ಪದ್ದತಿಗಳು ಇರುತ್ತವೆ. ಹೀಗಾಗಿ ರಾಜಕೀಯ ವಿವಾದಗಳಲ್ಲಿ ಧಾರ್ಮಿಕ ಸಂಸ್ಥೆಗಳನ್ನು ಎಳೆದು ತರಬಾರದು ಎಂದು ಸಲಹೆ ಮಾಡಿದರು.
ಇದನ್ನೂ ಓದಿ: ಮದರಸಾ ಶಾಲೆಗಳನ್ನು ಸರ್ಕಾರ ವಹಿಸಿಕೊಳ್ಳುವುದಿಲ್ಲ -ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್ ಕೈಬಿಡುವುದಿಲ್ಲ: ಶಿಕ್ಷಣ ಸಚಿವ ನಾಗೇಶ್
Published On - 9:11 am, Thu, 31 March 22