ರಾಮಕೃಷ್ಣ ಆಶ್ರಮದ ಬಾಲಕನಿಗೆ ಕಚ್ಚಿ, ಕಣ್ಣಿಗೆ ಖಾರದ ಪುಡಿ ಹಾಕಿದ್ದ ಸೈಕೋ ಗುರೂಜಿ ಅರೆಸ್ಟ್!

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 04, 2024 | 3:54 PM

ಆತ ಶಿಸ್ತು, ಪಾಠ ಜೀವನ ಶೈಲಿ ಕಲಿಸಬೇಕಿದ್ದವ. ಆದ್ರೆ, ಆಶ್ರಮದಲ್ಲಿನ ಬಾಲಕ ಪೆನ್ನು ಕದ್ದ ಎನ್ನುವ  ಏಕೈಕ ಕಾರಣಕ್ಕೆ ಆ ಸಂಚಾಲಕ ಅಲಿಯಾಸ್​ ಗುರೂಜಿ ಸೈಕೊಪಾತ್ ರೀತಿಯಲ್ಲಿ ಬಾಲಕನಿಗೆ ಚಿತ್ರಹಿಂಸೆ ನೀಡಿದ್ದಾನೆ. ಇದೀಗ ಬಾಯಿಂದ ಕಚ್ಚಿ, ಉಗುರುನಿಂದ ಪರಚಿ, ಕಣ್ಣಿಗೆ ಖಾರದ ಪುಡಿ ಎರಚಿ ವಿಕೃತಿ ಮೆರೆದಿದ್ದವ ಅರೆಸ್ಟ್ ಆಗಿದ್ದಾನೆ.

ರಾಮಕೃಷ್ಣ ಆಶ್ರಮದ ಬಾಲಕನಿಗೆ ಕಚ್ಚಿ, ಕಣ್ಣಿಗೆ ಖಾರದ ಪುಡಿ ಹಾಕಿದ್ದ ಸೈಕೋ ಗುರೂಜಿ ಅರೆಸ್ಟ್!
ಆರೋಪಿ ರಾಮಕೃಷ್ಣ ಆಶ್ರಮ ವೇಣುಗೋಪಾಲ್ ಗುರೂಜಿ
Follow us on

ರಾಯಚೂರು, ಆ.04: ಕಳೆದ ಜುಲೈ 28 ರಂದು ರಾಯಚೂರು ನಗರದಲ್ಲಿರುವ ರಾಮಕೃಷ್ಣ-ವಿವೇಕಾನಂದ ಆಶ್ರಮ (Ramakrishna – Vivekananda Ashrama)ದಲ್ಲಿ ಅದೊಂದು ಘಟನೆ ನಡೆದಿತ್ತು. ಆಶ್ರಮದಲ್ಲಿದ್ದ 10 ಕ್ಕೂ ಹೆಚ್ಚು ಮಕ್ಕಳ ಪೈಕಿ 3 ನೇ ತರಗತಿ ವಿದ್ಯಾರ್ಥಿಗೆ ಹಿಗ್ಗಾಮುಗ್ಗಾ ಥಳಿಸಲಾಗಿತ್ತು. ಅದು ಯಾವ ಪರಿ ಅಂದರೆ ಇಡೀ ಮಾನವ ಕುಲವೇ ಹಿಡಿಶಾಪ ಹಾಕೋ ರೀತಿ ಆ ಹಲ್ಲೆ ನಡೆದಿತ್ತು. ಇದೇ ರಾಮಕೃಷ್ಣ-ವಿವೇಕಾನಂದ ಆಶ್ರಮದ ಸಂಚಾಲಕ@ಗುರೂಜಿಯಾಗಿದ್ದ ವೇಣುಗೋಪಾಲ್ ಎಂಬಾತ ಈ ಕೃತ್ಯ ಎಸಗಿದ್ದ. ಸೈಕೋಪಾತ್ ರೀತಿ ವರ್ತಿಸಿದ್ದ ಆರೋಪಿ ವೇಣುಗೋಪಾಲ್​ ಸತತ ಮೂರು ದಿನ ಆ ಮೂರನೇ ತರಗತಿ ವಿದ್ಯಾರ್ಥಿ ಮೇಲೆ ನಿರಂತರ ಹಲ್ಲೆ ನಡೆಸಿದ್ದ. ಆದ್ರೆ, ದೇವರ ದಯೆಯೇ ಏನೋ ಗೊತ್ತಿಲ್ಲ, ಜುಲೈ 31 ನೇ ತಾರಿಖಿನಂದು ಹಲ್ಲೆಗೊಳಗಾಗಿದ್ದ ಬಾಲಕನ ತಾಯಿ ಮಗನ ಬಗ್ಗೆ ವಿಚಾರಿಸಲು ಅಕಸ್ಮಾತ್ ಆ ಆಶ್ರಮಕ್ಕೆ ಹೋಗಿದ್ದರು. ಈ ವೇಳೆ ಹೆತ್ತ ಮಗನಿಗೆ ಚಿತ್ರಹಿಂಸೆ ನೀಡಿದ್ದ ವಿಚಾರ ಬೆಳಕಿಗೆ ಬಂದಿತ್ತು.

ಹಲ್ಲೆಗೊಳಗಾದ 3 ನೇತರಗತಿ ಬಾಲಕ ಬೇರೊಬ್ಬ ವಿದ್ಯಾರ್ಥಿಯ ಪೆನ್ ಕದ್ದಿದ್ದನಂತೆ. ಈ ಬಗ್ಗೆ ಆ ವಿದ್ಯಾರ್ಥಿ ಗುರೂಜಿ ವೇಣುಗೋಪಾಲ್​ಗೆ ಹೇಳಿದ್ದ. ಆ ಬಳಿಕ ವೇಣುಗೋಪಾಲ್, ಪೆನ್ನು ಕದ್ದ ವಿಚಾರವಾಗಿ ಆ ಮೂರನೇ ತರಗತಿ ವಿದ್ಯಾರ್ಥಿಗೆ ಅಕ್ಷರಶಃ ನರಕ ತೋರಿಸಿದ್ದ. ಆರೋಪಿ ವೇಣುಗೋಪಾಲ್ ಕುಕೃತ್ಯದ ಬಗ್ಗೆ ಎಫ್ಐಆರ್​ನಲ್ಲಿ ಎಳೆಎಳೆಯಾಗಿ ಉಲ್ಲೇಖಿಸಲಾಗಿದೆ. 3ನೇ ತರಗತಿ ಬಾಲಕನ ಕಣ್ಣಿಗೆ ಖಾರದ ಪುಡಿ ಹಾಕಿದ್ದ ಆರೋಪಿ, ಬಾಯಿಯಿಂದ ಬಾಲಕನ ಎಡಗೈ, ಮುಂಗೈಗೆ ಬಲವಾಗಿ ಕಚ್ಚಿ ವಿಕೃತಿ ಮೆರೆದಿದ್ದ.

ಇದನ್ನೂ ಓದಿ:ರಾಯಚೂರು: ಪೆನ್ನು ಕದ್ದ ವಿದ್ಯಾರ್ಥಿಯನ್ನ ಹೊಡೆದು ಕತ್ತಲ ಕೋಣೆಗೆ ಹಾಕಿದ ರಾಮಕೃಷ್ಣ ಆಶ್ರಮ ಗುರೂಜಿ

ಆರೋಪಿ ಬಂಧನ

ಮುಖಕ್ಕೆ ಉಗುರಿನಿಂದ ಪರಚಿ, ಕಟ್ಟಿಗೆ-ಬ್ಯಾಟ್ನಿಂದ ಹಲ್ಲೆ ನಡೆಸಿದ್ದ. ಕಣ್ಣೀರಿಟ್ಟರೇ ಜಾಸ್ತಿ ಹೊಡೆಯೋದಾಗಿ ಬೆದರಿಸಿ ಮನಸೋ ಇಚ್ಛೆ ಹೊಡೆದಿದ್ದ. ಇದೇ ಕಾರಣಕ್ಕೆ ಆರೋಪಿ ಹೊಡೆಯೋ ಭಯದಲ್ಲಿ ಬಾಲಕ ಮೂರು ದಿನ ಕಣ್ಣೀರು ಹಾಕದೇ ಉಸಿರು ಬಿಗಿಹಿಡಿದು ಬದುಕಿದ್ದ. ಸದ್ಯ ಈ ಬಗ್ಗೆ ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವೇಣುಗೋಪಾಲ್​​ನನ್ನ ಬಂಧಿಸಲಾಗಿದೆ. ಘಟನೆ ಬಗ್ಗೆ ರಾಯಚೂರು ಎಸ್ಪಿ ಪುಟ್ಟಮಾದಯ್ಯ ಹೇಳಿಕೆ ನೀಡಿದ್ದು, ‘ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ. ಪೋಷಕರು ಮಕ್ಕಳನ್ನ ಆಶ್ರಮಕ್ಕೆ ಬಿಡುವ ಮೊದಲು ಎಚ್ಚರವಹಿಸಿ. ಆಶ್ರಮಗಳ ಬಗ್ಗೆ ತಿಳಿದುಕೊಂಡು ಸೇರಿಸಿ ಎಂದು ಪೋಷಕರಿಗೆ ಎಸ್ಪಿ ಸಲಹೆ ನೀಡಿದ್ದಾರೆ.

ಇತ್ತ ಘಟನೆ ಬೆಳಕಿಗೆ ಬಂದ ಬಳಿಕ ಆಶ್ರಮದಲ್ಲಿ ಸುಮಾರು ಎಂಟ್ಹತ್ತು ವಿದ್ಯಾರ್ಥಿಗಳನ್ನ ಮಕ್ಕಳ ರಕ್ಷಣಾ ಇಲಾಖೆ ಸಿಬ್ಬಂದಿ ರಕ್ಷಿಸಿ ಬಾಲಮಂದಿರಕ್ಕೆ ಶಿಫ್ಟ್ ಮಾಡಿದ್ದಾರೆ. ಅದೆನೆ ಇರಲಿ ಮಕ್ಕಳಿಗೆ ವ್ಯಕ್ತಿತ್ವದ ಪಾಠ ಹೇಳಿಬೇಕಿದ್ದವನೇ ವಿಕೃತಿ ಮೆರೆದಿದ್ದು ತಲೆ ತಗ್ಗಿಸುವಂಥದ್ದು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:52 pm, Sun, 4 August 24