
ರಾಯಚೂರು, ನ.11: ಮಕ್ಕಳು ಹಾಗೂ ವಿದ್ಯಾರ್ಥಿಗಳು ಸರಿಯಾಗಿ ಓದದಿದ್ದರೆ ತಿದ್ದಿ ಬುದ್ಧಿ ಹೇಳಬೇಕಾದ ಶಿಕ್ಷಕನೊಬ್ಬ, ರಕ್ಕಸನಂತೆ ವರ್ತಿಸಿ 10 ವರ್ಷದ ಬಾಲಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪಟ್ಟಣದಲ್ಲಿ ನಡೆದಿದೆ. ಕವಿತಾಳದ ‘ಮದರಸಾ ದಾರುಲ್ ಹುಫ್ಫಾಜ್’ನಲ್ಲಿ 3ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ಬಾಯಿಗೆ ಬಟ್ಟೆ ತುರುಕಿ, ಕಣ್ಣು, ಬೆನ್ನು ಹಾಗೂ ಹೊಟ್ಟೆಯ ಭಾಗಕ್ಕೆ ಮನಬಂದಂತೆ ಥಳಿಸಲಾಗಿದೆ. ಹಲ್ಲೆಯ ತೀವ್ರತೆಗೆ ಬಾಲಕನ ಕಣ್ಣುಗಳು ಊದಿಕೊಂಡು ಹೆಪ್ಪುಗಟ್ಟಿದ್ದು, ಬಾಲಕ ಅಕ್ಷರಶಃ ನೋವಿನಿಂದ ನರಳಾಡುವಂತಾಗಿದೆ.
ಬಾಲಕನ ತಂದೆ ಅಬ್ದುಲ್ ನಹೀಮ್ ಅವರು ಮಗನಿಗೆ ಉತ್ತಮ ಶಿಕ್ಷಣ ಸಿಗಲೆಂದು ಕಳೆದ ಎರಡು ವರ್ಷಗಳ ಹಿಂದೆ ಇದೇ ಮದರಸಾಕ್ಕೆ ಸೇರಿಸಿದ್ದರು. ನವೆಂಬರ್ 8 ರಂದು ಮಗನನ್ನು ನೋಡಲು ಮದರಸಾಕ್ಕೆ ತೆರಳಿದ್ದಾಗ, ಮಗನ ನರಳಾಟ ಹಾಗೂ ದೇಹದ ಮೇಲಿನ ಗಾಯಗಳನ್ನು ಕಂಡು ಆತಂಕಗೊಂಡು ವಿಚಾರಿಸಿದಾಗ ಶಿಕ್ಷಕ ಅಬ್ಬಾಸ್ ನಡೆಸಿದ ಭೀಕರ ಕೃತ್ಯ ಬೆಳಕಿಗೆ ಬಂದಿದೆ. “ಮಗನಿಗೆ ಓದಲು ಬರ್ತಿರಲಿಲ್ಲ, ಇನ್ನಷ್ಟು ಹೊಡೆದರೆ ಚೆನ್ನಾಗಿ ಓದುತ್ತಾನೆ” ಎಂದು ಆರೋಪಿ ಶಿಕ್ಷಕ ಅಬ್ಬಾಸ್ ತಂದೆಗೇ ಉಡಾಫೆಯಾಗಿ ಉತ್ತರಿಸಿದ್ದಾನೆ.
ಆಕ್ರೋಶಗೊಂಡ ತಂದೆ ಕವಿತಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಲ್ಲೆ ನಡೆಸಿದ ಶಿಕ್ಷಕ ಅಬ್ಬಾಸ್, ಮುಖ್ಯ ಶಿಕ್ಷಕ ಹಜಮ್ ಮುರಾರಿ ಸೇರಿದಂತೆ ಮದರಸಾದ 6 ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸದ್ಯ ಗಾಯಾಳು ಬಾಲಕನಿಗೆ ಲಿಂಗಸುಗೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಆರೋಪಿ ಶಿಕ್ಷಕ ಅಬ್ಬಾಸ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿ ಶೋಧ ಕಾರ್ಯ ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ:ಕನ್ನಡ ನಾಡಲ್ಲೇ ಕನ್ನಡ ಕಾಯುವ ಸ್ಥಿತಿ ಬಂದಿರುವುದು ದುರ್ದೈವ: ನಾನು 100 ವರ್ಷ ಬದುಕಬೇಕು ಎಂದ ಸಿದ್ದರಾಮಯ್ಯ
ಇದೇ ಮದರಸಾದಲ್ಲಿ ಈ ಹಿಂದೆಯೂ ಮತ್ತೊಬ್ಬ ಬಾಲಕನ ಮೇಲೆ ಹಲ್ಲೆ ನಡೆದು, ಕಾಲು ಮುರಿಯಲಾಗಿತ್ತು ಹಾಗೂ ಆ ಪ್ರಕರಣವನ್ನು ಮುಚ್ಚಿಹಾಕಲಾಗಿತ್ತು ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಲಾಗುವುದು ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ತಿಳಿಸಿದ್ದಾರೆ. ಮಕ್ಕಳಿಗೆ ಓದಲು-ಬರೆಯಲು ಬಾರದಿದ್ದರೆ ಪೋಷಕರಿಗೆ ಮಾಹಿತಿ ನೀಡಬೇಕೇ ವಿನಃ ಈ ರೀತಿ ದೈಹಿಕ ಹಲ್ಲೆ ನಡೆಸುವುದು ಕಾನೂನಿನಡಿ ಗಂಭೀರ ಅಪರಾಧ ಎಂದು ಎಸ್ಪಿ ಅರುಣಾಂಗ್ಷು ಗಿರಿ ಶಿಕ್ಷಕರಿಗೆ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ