ರಾಯಚೂರಿನಲ್ಲಿ ಬಾಣಂತಿಯರ ಸರಣಿ ಸಾವು: ರಿಮ್ಸ್ ಆಸ್ಪತ್ರೆಗೆ ಜೆಡಿಎಸ್ ನಿಯೋಗ ಭೇಟಿ,​ ರಿಯಾಲಿಟಿ ಚೆಕ್

| Updated By: ಗಂಗಾಧರ​ ಬ. ಸಾಬೋಜಿ

Updated on: Jan 09, 2025 | 6:24 PM

ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸರಣಿ ಸಾವುಗಳಿಂದ ಜೆಡಿಎಸ್ ನಿಯೋಗ ಆಘಾತಗೊಂಡಿದೆ. ದೇವದುರ್ಗ ಶಾಸಕಿ ಕರೆಮ್ಮ ನೇತೃತ್ವದಲ್ಲಿ ಭೇಟಿ ನೀಡಿದ ನಿಯೋಗ, ವೈದ್ಯಕೀಯ ನಿರ್ಲಕ್ಷ್ಯದ ಆರೋಪ ಮಾಡಿದೆ. ಮೃತ ಬಾಣಂತಿಯರ ಕುಟುಂಬಗಳಿಗೆ ಪರಿಹಾರ ಮತ್ತು ಅನಾಥ ಮಕ್ಕಳಿಗೆ ಸರ್ಕಾರದ ರಕ್ಷಣೆಗೆ ಒತ್ತಾಯಿಸಿದೆ. ಆಸ್ಪತ್ರೆಯಲ್ಲಿನ ಕಳಪೆ ಸೌಕರ್ಯಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದೆ.

ರಾಯಚೂರಿನಲ್ಲಿ ಬಾಣಂತಿಯರ ಸರಣಿ ಸಾವು: ರಿಮ್ಸ್ ಆಸ್ಪತ್ರೆಗೆ ಜೆಡಿಎಸ್ ನಿಯೋಗ ಭೇಟಿ,​ ರಿಯಾಲಿಟಿ ಚೆಕ್
ರಾಯಚೂರಿನಲ್ಲಿ ಬಾಣಂತಿಯರ ಸರಣಿ ಸಾವು: ರಿಮ್ಸ್ ಆಸ್ಪತ್ರೆಗೆ ಜೆಡಿಎಸ್ ನಿಯೋಗ ಭೇಟಿ,​ ರಿಯಾಲಿಟಿ ಚೆಕ್
Follow us on

ರಾಯಚೂರು, ಜನವರಿ 09: ಬಾಣಂತಿಯರ ಸರಣಿ ಸಾವು (Matternal deaths) ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದಾದ್ಯಂತ ಸರ್ಕಾರ, ಸಚಿವರುಗಳು, ಅಧಿಕಾರಿಗಳ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಮೊನ್ನೆಯಷ್ಟೇ ಬಿಜೆಪಿ ರಾಜ್ಯ ಮಟ್ಟದ ಸಮಿತಿ ಈ ಬಗ್ಗೆ ಸತ್ಯ ಶೋಧನೆ ನಡೆಸಿತ್ತು. ಈಗ ಜೆಡಿಎಸ್​​ ನಿಯೋಗ ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಅಸಲಿ ಕಾರಣವೇನು ಎಂಬುದರ ಪತ್ತೆಗೆ ಮುಂದಾಗಿದೆ.

ರಾಜ್ಯದಲ್ಲಿ ಉಂಟಾಗುತ್ತಿರುವ ಬಾಣಂತಿಯರ ಸರಣಿ ಸಾವಿನ ಪ್ರಕರಣ ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿದೆ. ಮಹಿಳೆಯರಂತು ಹೆರಿಗೆಗಾಗಿ ಸರ್ಕಾರಿ ಆಸ್ಪತ್ರೆಗೆ ಹೋಗುವ ಮುನ್ನ ಈಗ ನೂರು ಬಾರಿ ಯೋಚನೆ ಮಾಡುವ ಸ್ಥಿತಿ ಬಂದಿದೆ. ಅದೆಷ್ಟೋ ಪೋಷಕರು ಹಣ ಹೋದರೆ ಹೋಗಲಿ ಅಂತ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತಗಳು ನಡೆದಿರುವ ಹಿನ್ನೆಲೆ ಮೊನ್ನೆಯಷ್ಟೇ ಬಿಜೆಪಿ ರಾಜ್ಯ ಮಟ್ಟದ ನಿಯೋಗ ರಾಯಚೂರಿನ ಸಿಂಧನೂರು ತಾಲ್ಲೂಕು ಆಸ್ಪತ್ರೆಗೆ ಭೇಟಿ ನೀಡಿತ್ತು. ವೈದ್ಯಾಧಿಕಾರಿಗಳ ಮಾಹಿತಿ ಪಡೆದು, ಸಂತ್ರಸ್ತ ಕುಟುಂಬಸ್ಥರಿಗೆ ಸಾಂತ್ವ ಹೇಳಿತ್ತು. ಇಂದು ಜೆಡಿಎಸ್​ ನಿಯೋಗ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದೆ.

ಇದನ್ನೂ ಓದಿ: ರಾಯಚೂರಿನಲ್ಲಿ ಮತ್ತೋರ್ವ ಬಾಣಂತಿಯ ಸಾವು: 3 ತಿಂಗಳಲ್ಲಿ 12 ಮಂದಿ ಮೃತ

ರಾಯಚೂರು ಜಿಲ್ಲೆಯೊಂದರಲ್ಲೇ ಇದೇ ಅಕ್ಟೋಬರ್​ನಿಂದ ಈ ವರೆಗೆ 12 ಜನ ಬಾಣಂತಿಯರ ಸಾವಾಗಿದೆ. ಸಿಂಧನೂರು ತಾಲ್ಲೂಕು ಆಸ್ಪತ್ರೆಯಲ್ಲಿ ನಾಲ್ಕು ಜನ ಮರತಪಟ್ಟಿದ್ದರೆ, ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಐದು ಜನ ಉಸಿರು ಚೆಲ್ಲಿದ್ದಾರೆ. ಹೀಗಾಗಿ ಇಂದು ದೇವದುರ್ಗ ಜೆಡಿಎಸ್ ಶಾಸಕ ಕರೆಮ್ಮ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ವಿರುಪಾಕ್ಷ ನೇತೃತ್ವದ ತಂಡ ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯಾಧಿಕಾರಿಗಳಿಂದ ಘಟನೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ರಿಮ್ಸ್ ಆಸ್ಪತ್ರೆ ವಿರುದ್ಧ ನಿರ್ಲಕ್ಷಗಳ ಸರಮಾಲೆಯೇ ಬಿಚ್ಚಿಕೊಂಡಿದೆ.

 

ಸುಮಾರು ಒಂದು ಗಂಟೆ ಕಾಲ ಜೆಡಿಎಸ್ ನಿಯೋಗ ರಿಮ್ಸ್ ಆಸ್ಪತ್ರೆ ವೈದ್ಯಾಧಿಕಾರಿಗಳಿಂದ ಬಾಣಂತಿಯರ ಸರಣಿ ಸಾವು ಹಾಗೂ ಸಾವಿಗೆ ಕಾರಣ ಏನು ಅನ್ನೋದರ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಕೆಲ ಸಂತ್ರಸ್ತರು ರಿಮ್ಸ್ ಆಸ್ಪತ್ರೆ ವೈದ್ಯರು, ಸಿಬ್ಬಂದಿಯ ನಿರ್ಲಕ್ಷಗಳು, ಧೋರಣೆ ಬಗ್ಗೆ ಕಿಡಿಕಾರಿದ್ದಾರೆ. ನಂತರ ಜೆಡಿಎಸ್ ನಿಯೋಗ ರಿಮ್ಸ್ ಆಸ್ಪತ್ರೆಯ ಹೆರಿಗೆ ವಾರ್ಡ್​​ಗೆ ಹೋಗಿ ವಾಸ್ತವ ಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು. ಹೆರಿಗೆ ಬಳಿಕ ಚಿಕಿತ್ಸೆ ಪಡೆಯುತ್ತಿರುವ ಬಾಣಂತಿಯರಿಂದ ರಿಮ್ಸ್ ಆಸ್ಪತ್ರೆಯ ವಾಸ್ತವ ಸ್ಥಿತಿ ಗತಿಗಳ ಮಾಹಿತಿ ಪಡೆದರು.

ತಲಾ 25 ಲಕ್ಷ ರೂ. ಪರಿಹಾರಕ್ಕೆ ಆಗ್ರಹ

ನಂತರ ಮಾತನಾಡಿದ ಜೆಡಿಎಸ್ ಶಾಸಕಿ ಕರೆಮ್ಮಾ, ವೈದ್ಯರ ನಿರ್ಲಕ್ಷ ಇದೆ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾಗುತ್ತೆ. ಬಿಜೆಪಿ ಆಗ್ರಹಿಸಿದಂತೆ ತಾವೂ ಕೂಡ ಮೃತ ಬಾಣಂತಿಯರ ಅನಾಥ ಮಕ್ಕಳನ್ನ ಸರ್ಕಾರ ದತ್ತು ತೆಗೆದುಕೊಳ್ಳಬೇಕು. ಸಂತ್ರಸ್ತರ ಕುಟುಂಬಸ್ಥರಿಗೆ ತಲಾ 25 ಲಕ್ಷ ರೂ. ಪರಿಹಾರ ನೀಡಬೇಕು ಅಂತ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ರಾಯಚೂರಿನಲ್ಲಿ ಮೂರೇ ತಿಂಗಳಲ್ಲಿ 11 ಬಾಣಂತಿಯರ ಮರಣ: ಸಿಂಧನೂರು ಬಳಿಕ ರಿಮ್ಸ್ ಆಸ್ಪತ್ರೆಯಲ್ಲೇ ನಾಲ್ಕು ಸಾವು

ಇತ್ತ ರಿಮ್ಸ್ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿ ವಿರುದ್ಧ ನಿರ್ಲಕ್ಷ ಆರೋಪಕ್ಕೆ ರಿಮ್ಸ್ ಆಸ್ಪತ್ರೆ ನಿರ್ದೇಶಕ ರಮೇಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಈಗಾಗಲೇ ಬಾಣಂತಿಯರ ಸಾವಿನ ಬಗ್ಗೆ ಡೆತ್ ಆಡಿಟ್ ಮಾಡಲಾಗುತ್ತಿದೆ. ಘಟನೆಗೆ ಹೆರಿಗೆ ವೇಳೆಯ ಆರೋಗ್ಯದಲ್ಲಾದ ಏರುಪೇರುಗಳೇ ಕಾರಣ. ನಿರ್ಲಕ್ಷ ಕಂಡು ಬಂದಲ್ಲಿ ಕ್ರಮಕೈಗೊಳ್ಳಲಾಗುತ್ತೆ ಅಂತ ತಿಳಿಸಿದ್ದಾರೆ. ಸರ್ಕಾರ ಎಚ್ಚೆತ್ತುಕೊಂಡು ಬಾಣಂತಿಯರ ಸಾವಾಗದಂತೆ ಕಟ್ಟು ನಿಟ್ಟಿನ ಕ್ರಮಗಳನ್ನ ಕೈಗೊಳ್ಳಬೇಕಿದೆ. ಅಲ್ಲದೇ ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.