ಸಿಂಧನೂರು: ಬಾಣಂತಿಯರಿಗೆ ನೀಡಲಾಗಿದ್ದ ಐವಿ ದ್ರಾವಣ ಬಳಕೆಗೆ ಯೋಗ್ಯವಲ್ಲ, ವರದಿ
ರಾಯಚೂರಿನ ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ ನಾಲ್ವರು ಬಾಣಂತಿಯರು ಮೃತಪಟ್ಟಿದ್ದು, ಇದಕ್ಕೆ ಕಾರಣ IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಎಂದು ಶಂಕಿಸಲಾಗಿದೆ. ಬೆಂಗಳೂರು ಮತ್ತು ಹೈದರಾಬಾದ್‌ನ ಪ್ರಯೋಗಾಲಯಗಳ ವರದಿಗಳು ದ್ರಾವಣದಲ್ಲಿನ ಎಂಡೋ ಟಾಕ್ಸಿನ್ ಅಂಶ ಉಪಯೋಗಕ್ಕೆ ಯೋಗ್ಯವಲ್ಲ ಎಂದು ಲ್ಯಾಬ್ಗಳು ವರದಿ ನೀಡಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ರಾಯಚೂರು, ಡಿಸೆಂಬರ್ 28: ಸಿಂಧನೂರು ತಾಲೂಕು ಆಸ್ಪತ್ರೆಯಲ್ಲಿ (Sindhanur Hospital) ನಾಲ್ವರು ಬಾಣಂತಿಯರ ಸಾವಿಗೆ ಕಾರಣವಾಗಿದೆ ಎನ್ನಲಾಗಿರುವ IV ರಿಂಗರ್ ಲ್ಯಾಕ್ಟೇಟ್ ದ್ರಾವಣವನ್ನು ಪರೀಕ್ಷೆಗೆ ಒಳಪಡಿಸಿದ್ದು, ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. IV ರಿಂಗರ್ ಲ್ಯಾಕ್ಟೇಟ್ ದ್ರಾವಣದಲ್ಲಿನ ಎಂಡೋ ಟಾಕ್ಸಿನ್ ಎಂಬ ಅಂಶ ಬಳಕೆಗೆ ಯೋಗ್ಯವಲ್ಲ (ನೆಗೆಟಿವ್) ಅಂತ ಬೆಂಗಳೂರು ಮತ್ತು ಹೈದರಾಬಾದ್‌ನ ಲ್ಯಾಬ್ಗಳ ವರದಿಯಲ್ಲಿ ಬಹಿರಂಗಗೊಂಡಿದೆ.
ರಾಯಚೂರು ಜಿಲ್ಲಾಡಳಿತ ಒಟ್ಟು ಮೂರು ಲ್ಯಾಬ್ಗಳಿಗೆ ತಲಾ 6 IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಸ್ಯಾಂಪಲ್ ಪರೀಕ್ಷೆಗೆ ಕಳುಹಿಸಿತ್ತು. ಬೆಂಗಳೂರಿನ ವೈದ್ಯಕೀಯ ಕಾಲೇಜು ನೀಡಿದ ವರದಿಯಲ್ಲಿ 6 ಸ್ಯಾಂಪಲ್ ಪೈಕಿ 4 ಸ್ಯಾಂಪಲ್ಗಳು ಉಪಯೋಗಕ್ಕೆ ಯೋಗ್ಯವಲ್ಲ, ಎರಡು ಉಪಯೋಗಕ್ಕೆ ಯೋಗ್ಯವಾಗಿವೆ ಎಂದು ಹೇಳಿದೆ. ಇನ್ನು, ಹೈದರಾಬಾದ್‌ನ ವಿಂಪ್ಟಾ ಲ್ಯಾಬ್ ವರದಿಯಲ್ಲಿ 6 ಸ್ಯಾಂಪಲ್ ಪೈಕಿ, ನಾಲ್ಕು ಉಪಯೋಗಕ್ಕೆ ಯೋಗ್ಯವಿದ್ದು, ಎರಡು ಯೋಗ್ಯವಲ್ಲ ಅಂತ ವರದಿಯಲ್ಲಿ ಉಲ್ಲೇಖವಾಗಿದೆ. ಸದ್ಯ, ಸರ್ಕಾರದ ಡ್ರಗ್ ಕಂಟ್ರೋಲ್ ಲ್ಯಾಬ್ನ ವರದಿ ಮಾತ್ರ ಬಾಕಿ ಇದೆ ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ರಾಯಚೂರಿನಲ್ಲಿ ಮತ್ತೋರ್ವ ಬಾಣಂತಿಯ ಸಾವು: ಹೆಚ್ಚಿದ ಆತಂಕ
ಬೆಂಗಳೂರು ಮತ್ತು ಹೈದರಾಬಾದ್‌ನ ಲ್ಯಾಬ್ಗಳು ನೀಡಿದ್ದ ವರದಿಯಲ್ಲಿ ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿದ್ದು ತನಿಖೆ ಮುಂದುವರಿಸಿದೆ. ರಾಯಚೂರು ಜಿಲ್ಲೆಯಲ್ಲಿ ಕಳೆದ 3 ತಿಂಗಳಲ್ಲಿ 10 ಬಾಣಂತಿಯರು ಮೃತಪಟ್ಟಿದ್ದಾರೆ. ಸಿಂಧನೂರು ತಾಲೂಕು ಆಸ್ಪತ್ರೆ ಒಂದರಲ್ಲೇ ನಾಲ್ವರು ಬಾಣಂತಿಯರು ಮೃತಪಟ್ಟಿದ್ದರು.
ಸಿಂಧನೂರು ತಾಲೂಕು ಆಸ್ಪತ್ರೆಗೆ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ನಾಲ್ವರು ಬಾಣಂತಿಯರು ಸಿಸೇರಿಯನ್ ಬಳಿಕ ಮೃತಪಟ್ಟಿದ್ದರು. ರಾಯಚೂರು ಜಿಲ್ಲೆಯವರೇಯಾದ ಮೌಸಂಬಿ ಮಂಡಲ್, ಚನ್ನಮ್ಮ, ಚಂದ್ರಕಲಾ, ರೇಣುಕಮ್ಮ ಮೃತ ಬಾಣಂತಿಯರು. ಈ ನಾಲ್ವರು ಬಾಣಂತಿಯರಿಗೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಕೆಯಾಗಿದ್ದ IVದ್ರಾವಣವೇ ನೀಡಲಾಗಿತ್ತು ಎಂದು ಹೇಳಲಾಗಿತ್ತು.
ತನಿಖೆ ನಡೆಸುತ್ತಿರುವ ಸರ್ಕಾರ
ಬಳ್ಳಾರಿ, ರಾಯಚೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿನ ಬಾಣಂತಿಯರ ಸಾವಿನ ಸಂಖ್ಯೆ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. ಕಳೆದ ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ ಎಷ್ಟು ಬಾಣಂತಿಯರು ಮೃತಪಟ್ಟಿದ್ದಾರೆ? ಇವರ ಸಾವಿಗೆ ಕಾರಣವೇನು? ಎಂಬುವುದರ ಕುರಿತು ಸಮಗ್ರವಾಗಿ ತನಿಖೆ ನಡೆಸುತ್ತಿದ್ದು, ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಿದೆ.
ಬಳ್ಳಾರಿಯಲ್ಲಿ ಐವರ ಬಾಣಂತಿಯರ ಸಾವು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಐವರು ಬಾಣಂತಿಯರ ಸಾವಿಗೆ IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಾರಣ ಎಂದು ತಿಳಿದುಬಂದಿದ್ದು, ಸರ್ಕಾರದ ನಿದ್ದೆಗೆಡಿಸಿದೆ. ಇನ್ನು, ಬಾಣಂತಿಯರ ಸಾವಿಗೆ ಕರ್ನಾಟಕ ಸರ್ಕಾರ ನೇರ ಹೊಣೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. IV ರಿಂಗರ್ ಲ್ಯಾಕ್ಟೇಟ್ ದ್ರಾವಣ ತಯಾರಿಸಿದ ಪಶ್ಚಿಮ ಬಂಗಾಳದ ಕಂಪನಿ ವಿರುದ್ಧ ಕರ್ನಾಟಕ ಸರ್ಕಾರ ಕಾನೂನು ಹೋರಾಟ ನಡೆಸುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ