ರಾಯಚೂರಿನಲ್ಲಿ ಮತ್ತೋರ್ವ ಬಾಣಂತಿಯ ಸಾವು: 3 ತಿಂಗಳಲ್ಲಿ 12 ಮಂದಿ ಮೃತ
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾವನ್ನಪ್ಪಿದ್ದು, ಕಳೆದ ಮೂರು ತಿಂಗಳಲ್ಲಿ ಜಿಲ್ಲೆಯಲ್ಲಿ 12 ಬಾಣಂತಿಯರು ಮೃತಪಟ್ಟಿದ್ದಾರೆ. ಸರಸ್ವತಿ ಎಂಬ 24 ವರ್ಷದ ಬಾಣಂತಿ ಹೆರಿಗೆ ಬಳಿಕ ಆರೋಗ್ಯ ಸಮಸ್ಯೆಗಳಿಂದ ಮೃತಪಟ್ಟಿದ್ದಾರೆ. ಇದರಿಂದಾಗಿ ಆಸ್ಪತ್ರೆಯ ವೈದ್ಯಕೀಯ ಸೌಲಭ್ಯಗಳ ಕುರಿತು ಪ್ರಶ್ನೆಗಳು ಎದ್ದಿವೆ. ಸರ್ಕಾರ ಈ ಸಾವುಗಳ ಕುರಿತು ತನಿಖೆ ನಡೆಸುತ್ತಿದೆ.
ರಾಯಚೂರು, ಜನವರಿ 6: ರಾಯಚೂರಿನ (Raichur) ರಿಮ್ಸ್ (Rims) ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಸರಸ್ವತಿ (24) ಮೃತ ಬಾಣಂತಿ. ಜಿಲ್ಲೆಯಲ್ಲಿ 3 ತಿಂಗಳಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ರಿಮ್ಸ್ ಆಸ್ಪತ್ರೆಯಲ್ಲಿ ಮೃತಪಟ್ಟ ಬಾಣಂತಿಯರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಬಾಣಂತಿ ಸರಸ್ವತಿ ಜನವರಿ 2ರಂದು ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಸರಸ್ವತಿ ಅವರಿಗೆ ಸಿಸೇರಿಯನ್ ಮೂಲಕ ಹೆರಿಗೆ ಮಾಡಲಾಗಿತ್ತು.
ಹೆರಿಗೆ ಬಳಿಕ ಅಧಿಕ ರಕ್ತದೊತ್ತದ, ಇನ್ಫೆಕ್ಷನ್, ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲಿದ ಸರಸ್ವತಿ ಜನವರಿ 5ರಂದು ಕೊನೆಯುಸಿರು ಎಳೆದಿದ್ದಾರೆ. ಸರಸ್ವತಿ 4ನೇ ಮಗುವಿಗೆ ಜನ್ಮನೀಡಿದ್ದರು. ಮಗುವಿಗೆ ವೆಂಟಿಲೇಟರ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಐದು ದಿನದ ಹಿಂದೆಯೂ ಒಂದು ಸಾವಾಗಿತ್ತು
ಹೊಸ ವರ್ಷದ ದಿನವೇ ಮಸೀದಾಪುರ ಗ್ರಾಮದ ಶಿವಲಿಂಗಮ್ಮ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಮಗು ಸಮೇತ ತಾಯಿಯೂ ರಿಮ್ಸ್ನಲ್ಲೇ ಸಾವನ್ನಪ್ಪಿದ್ದರು. ಈಕೆಯ ಪೋಷಕರು ಡಿಸ್ಚಾರ್ಜ್ ಮಾಡಿ ಬೇರೆಡೆ ಕರೆದೊಯ್ಯುತ್ತೇವೆ ಎಂದರೂ ರಿಮ್ಸ್ ಆಸ್ಪತ್ರೆ ವೈದ್ಯರು ಡಿಸ್ಚಾರ್ಜ್ ಮಾಡಿರಲಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಇದೇ ಕಾರಣಕ್ಕೆ ಆಕೆಯ ಸಾವಾಗಿತ್ತು. ಆಕೆಯ ಸಾವಿಗೆ ರಿಮ್ಸ್ ಆಸ್ಪತ್ರೆ ವೈದ್ಯರೇ ಕಾರಣ ಎಂದು ಶಿವಲಿಂಗಮ್ಮ ಕುಟುಂಬಸ್ಥರು ಆರೋಪ ಮಾಡಿದ್ದರು.
ಇದನ್ನೂ ಓದಿ: ಸಿಂಧನೂರು ಬಳಿಕ ರಿಮ್ಸ್ ಆಸ್ಪತ್ರೆಯಲ್ಲೇ ನಾಲ್ಕು ಸಾವು
1 ತಿಂಗಳಲ್ಲಿ ನಾಲ್ವರು ಬಾಣಂತಿಯರ ಸಾವು
ಸಿಂಧನೂರು ತಾಲೂಕು ಆಸ್ಪತ್ರೆಗೆ ಅಕ್ಟೋಬರ್ ತಿಂಗಳಲ್ಲಿ ದಾಖಲಾಗಿದ್ದ ನಾಲ್ವರು ಬಾಣಂತಿಯರು ಸಿಸೇರಿಯನ್ ಬಳಿಕ ಮೃತಪಟ್ಟಿದ್ದರು. ರಾಯಚೂರು ಜಿಲ್ಲೆಯವರೇಯಾದ ಮೌಸಂಬಿ ಮಂಡಲ್, ಚನ್ನಮ್ಮ, ಚಂದ್ರಕಲಾ, ರೇಣುಕಮ್ಮ ಮೃತ ಬಾಣಂತಿಯರು. ಈ ನಾಲ್ವರು ಬಾಣಂತಿಯರಿಗೂ ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಳಕೆಯಾಗಿದ್ದ IVದ್ರಾವಣವೇ ನೀಡಲಾಗಿತ್ತು ಎಂದು ಹೇಳಲಾಗಿದೆ.
ತನಿಖೆ ನಡೆಸುತ್ತಿರುವ ಸರ್ಕಾರ
ಬಳ್ಳಾರಿ, ರಾಯಚೂರು, ಬೆಳಗಾವಿ ಮತ್ತು ಹುಬ್ಬಳ್ಳಿಯಲ್ಲಿನ ಬಾಣಂತಿಯರ ಸಾವಿನ ಸಂಖ್ಯೆ ಬೆಳಕಿಗೆ ಬರುತ್ತಿದ್ದಂತೆ ಆರೋಗ್ಯ ಇಲಾಖೆ ತನಿಖೆ ನಡೆಸುತ್ತಿದೆ. ಕಳೆದ ಮೂರು ತಿಂಗಳಲ್ಲಿ ಕರ್ನಾಟಕದಲ್ಲಿ ಎಷ್ಟು ಬಾಣಂತಿಯರು ಮೃತಪಟ್ಟಿದ್ದಾರೆ? ಇವರ ಸಾವಿಗೆ ಕಾರಣವೇನು? ಎಂಬುವುದರ ಕುರಿತು ಸಮಗ್ರವಾಗಿ ತನಿಖೆ ನಡೆಸುತ್ತಿದ್ದು, ಎಲ್ಲ ಮಾಹಿತಿಯನ್ನು ಕಲೆ ಹಾಕುತ್ತಿದೆ.
ಬಳ್ಳಾರಿಯಲ್ಲಿ ಐವರ ಬಾಣಂತಿಯರ ಸಾವು ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗಿತ್ತು. ಐವರು ಬಾಣಂತಿಯರ ಸಾವಿಗೆ IV ರಿಂಗರ್ ಲ್ಯಾಕ್ಟೇಟ್ ದ್ರಾವಣ ಕಾರಣ ಎಂದು ತಿಳಿದುಬಂದಿದ್ದು, ಸರ್ಕಾರದ ನಿದ್ದೆಗೆಡಿಸಿತ್ತು. ಬಾಣಂತಿಯರ ಸಾವಿಗೆ ಕರ್ನಾಟಕ ಸರ್ಕಾರ ನೇರ ಹೊಣೆ ಎಂದು ವಿಪಕ್ಷಗಳು ಆರೋಪ ಮಾಡುತ್ತಿವೆ. IV ರಿಂಗರ್ ಲ್ಯಾಕ್ಟೇಟ್ ದ್ರಾವಣ ತಯಾರಿಸಿದ ಪಶ್ಚಿಮ ಬಂಗಾಳದ ಕಂಪನಿ ವಿರುದ್ಧ ಕರ್ನಾಟಕ ಸರ್ಕಾರ ಕಾನೂನು ಹೋರಾಟ ನಡೆಸುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ