ರಾಯಚೂರು, ಮೇ.31: ದಲ್ಲಾಳಿಗಳ ಹಾವಳಿ ವಿರುದ್ಧ ಸಿಡಿದೆದ್ದು, ದಲ್ಲಾಳಿಗಳನ್ನ ಮಟ್ಟ ಹಾಕಲು ರೈತನೊಬ್ಬ ಹೊಸ ಹೆಜ್ಜೆಯನ್ನಿಟ್ಟಿದ್ದಾನೆ. ಭೀಕರ ಬರಗಾಲಕ್ಕೆ (Drought) ಈ ಬಾರಿ ರೈತರು ಕಂಗಾಲಾಗಿದ್ದಾರೆ. ಈ ಮಧ್ಯೆಯೂ ಬಿಸಿಲು ನಾಡು ರಾಯಚೂರಿನ (Raichur) ರೈತನೊಬ್ಬ ಭರ್ಜರಿ ಮಾವು ಬೆಳೆದಿದ್ದಲ್ಲದೇ, ದಲ್ಲಾಳಿಗಳ ಹಾವಳಿ ಮಟ್ಟಹಾಕಲು ಖುದ್ದು ತಾನೇ ಆನ್ಲೈನ್ ಮಾರ್ಕೇಟಿಂಗ್ ಹಾಗೂ ಡೋರ್ ಡೆಲಿವರಿ ಮಾಡಿ ಲಕ್ಷಾಂತರ ರೂ ಲಾಭ ಪಡೆದಿದ್ದಾನೆ.
ರಾಯಚೂರು ತಾಲ್ಲೂಕಿನ ಯಾಪಲದಿನ್ನಿ ಗ್ರಾಮದ ರೈತನ ಸಾಧನೆ ವಿಶೇಷವಾಗಿದ್ದು, ಸ್ಪೂರ್ತಿದಾಯಕವಾಗಿದೆ. ಡಿಪ್ಲೋಮಾ ಪದವಿ ಮುಗಿಸಿ ಕಂಪೆನಿಗಳಿಗೆ, ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗದೇ ಕೃಷಿಯತ್ತ ಮುಖ ಮಾಡಿದ್ದಾನೆ. ಈ ಬಾರಿಯ ಭೀಕರ ಬರಗಾಲದ ಮಧ್ಯೆಯೂ ಒಳ್ಳೆಯ ಮಾವು ಬೆಳಿದಿದ್ದಾನೆ. ತನ್ನ ಎರಡು ಎಕರೆ ಜಮೀನಿನಲ್ಲಿ ಸುಮಾರು 1 ಲಕ್ಷ ಖರ್ಚು ಮಾಡಿ 200 ಮಾವಿನ ಗಿಡಗಳನ್ನ ನೆಟ್ಟು ತೋಟ ಮಾಡಿಕೊಂಡಿದ್ದಾನೆ.
ಮಲ್ಲಿಕಾ, ದೊಡ್ಡ ರಸಲ್, ದಸೀರಾ, ಪಿಕಲ್ ಮ್ಯಾಂಗೋ ಸೇರಿ ನಾಲ್ಕು ತಳಿಯ ಮಾವಿನ ಗಿಡಿಗಳನ್ನ ಬೆಳೆದು ಭರ್ಜರಿ ಫಸಲು ಪಡೆದಿದ್ದಾನೆ. ಕಳೆದ ಎರಡು ವರ್ಷ ದಲ್ಲಾಳಿಗಳು, ಮಧ್ಯ ವರ್ತಿಗಳ ಹಾವಳಿಗೆ ರೈತ ಆಂಜನೇಯ ತುತ್ತಾಗಿದ್ದ. ಇಲ್ಲಿ ತೋಟಕ್ಕೆ ಬರೊ ದಲ್ಲಾಳಿಗಳು ಅದ್ಭುತ ರುಚಿ ಇರೊ ಹಣ್ಣುಗಳನ್ನ ಕೆಜಿಗೆ 40-50 ರೂ ಗೆ ಖರೀದಿ ಮಾಡಿ, ಪಟ್ಟಣಗಳು, ನಗರಗಳಲ್ಲಿ ಕೆಜಿಗೆ 100-150 ರೂಪಾಯಿಗೆ ಮಾರಾಟ ಮಾಡ್ತಿದ್ರು. ಮಾರ್ಕೆಟ್ನಲ್ಲಿ ತಾನು ಬೆಳೆದ ಮಲ್ಲಿಕಾ, ದೊಡ್ಡ ರಸಲ್, ದಸೀರಾ, ಪಿಕಲ್ ಮ್ಯಾಂಗೋಗೆ ಒಳ್ಳೆ ಡಿಮ್ಯಾಂಡ್ ಇದ್ರೂ ಅದರ ಲಾಭ ರೈತ ಆಂಜನೇಯನಿಗೆ ಸೇರ್ತಿರ್ಲಿಲ್ಲ. ಬದಲಾಗಿ ದಲ್ಲಾಳಿಗಳು ಲಾಭ ಪಡೆಯುತ್ತಿದ್ರು. ಇದರಿಂದ ಬೇಸತ್ತ ರೈತ ಆಂಜನೇಯ ಈ ಬಾರಿ ಖುದ್ದು ತಾನೇ ಆನ್ಲೈನ್ ಮಾರ್ಕೇಟಿಂಗ್ ಹಾಗೂ ಡೋರ್ ಡೆಲಿವರಿ ಮಾಡುತ್ತಿದ್ದಾನೆ.
ಇದನ್ನೂ ಓದಿ: ಬೈಕ್ ಮೂಲಕ ಎಡೆಕುಂಟೆ ಹೊಡೆದ ಕೊಪ್ಪಳದ ರೈತ, ಜೀವನಾಡಿಯಾದ ದ್ವಿಚಕ್ರ ವಾಹನ
ರೈತ ಆಂಜನೇಯ ಆನ್ಲೈನ್ ಮಾರ್ಕೇಟಿಂಗ್ ಜೊತೆ ತನಗೆ ಫೋನ್ ಮಾಡಿ ಆರ್ಡರ್ ಮಾಡಿದವರಿಗೆ ಖುದ್ದು ತಾನೇ ಮನೆ ಬಾಗಿಲಿಗೆ ಹೋಗಿ ಹಣ್ಣು ತಲುಪಿಸಿ ಬರ್ತಿದ್ದಾನೆ. ಇಂತಿಷ್ಟು ಖರೀದಿ ಮಾಡಲೇ ಬೇಕು ಅಂತೇನಿಲ್ಲ. ಒಂದು ಕೆಜಿ ಆರ್ಡರ್ ಮಾಡಿದ್ರೂ ಹೋಗಿ ಕೊಟ್ಟು ಬರ್ತಿದ್ದಾನೆ. ಎಲ್ಲಾ ನಾಲ್ಕು ತಳಿಯ ಮಾವಿನ ಹಣ್ಣುಗಳಿಗೆ ಕೆಜಿಗೆ 130 ರೂಪಾಯಿ. ಗ್ರಾಹಕರೇ ತೋಟಕ್ಕೆ ಬಂದ್ರೆ 100 ರೂಗೆ ಕೆಜಿ ಹಣ್ಣು ಕೊಡ್ತಾನೆ. ಕಾರ್ಗೊ, ಪಾರ್ಸೆಲ್, ಬಸ್ಗಳ ಮೂಲಕ ಹೊರ ರಾಜ್ಯ, ದೊಡ್ಡ ಪಟ್ಟಣಗಳಿಗೂ ಈಗಾಗಲೇ ಸಪ್ಲೈ ಮಾಡಿದ್ದಾನೆ. ಸಿಂಗಪೂರ್, ಹೈದ್ರಾಬಾದ್, ಕೊಲ್ಕತ್ತಾಗೂ ಮಾವಿನ ಹಣ್ಣನ್ನ ಕಳುಹಿಸಿದ್ದಾನೆ. ಹೀಗೆ ಎರಡೇ ತಿಂಗಳಲ್ಲಿ ಆಂಜನೇಯ 1800 ಕೆಜಿ ಮಾವಿನ ಹಣ್ಣುಗಳನ್ನ ಮಾರಾಟ ಮಾಡಿ ಸುಮಾರು 3.5 ಲಕ್ಷ ಲಾಭ ಪಡೆದಿದ್ದಾನೆ.
ಸಮಗ್ರ ಕೃಷಿ ಪದ್ದತಿಯನ್ನ ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಆ ಪದ್ದತಿ ಅನುಸರಿಸುತ್ತಾ ಸದ್ಯ ಸಕ್ಸಸ್ ಆಗಿದ್ದಾನೆ. ಈತ ತಾನಷ್ಟೇ ಅಲ್ಲ ತಮ್ಮೂರಿನ ಮತ್ತೊಬ್ಬ ರೈತ ವೆಂಕಟರೆಡ್ಡಿ ಅನ್ನೋರಿಗೂ ತನ್ನ ಸಮಗ್ರ ಕೃಷಿ ಪದ್ದತಿ ಹೇಳಿ ಕೊಟ್ಟು ಆನ್ ಲೈನ್ ಮಾರ್ಕೇಟಿಂಗ್ ಹಾಗೂ ಡೋರ್ ಡೆಲಿವರಿ ಹೇಗೆ ಮಾಡೋದು ಎಂಬ ಬಗ್ಗೆ ತಿಳಿಸಿಕೊಟ್ಟಿದ್ದಾನೆ. ಆ ಮೂಲಕ ವೆಂಕಟರೆಡ್ಡಿ ಅನ್ನೋ ರೈತ ಕೂಡ ತನ್ನ ಮೂರು ಎಕರೆ ಪ್ರದೇಶದಲ್ಲಿ ಒಳ್ಳೆ ಮಾವು ಬೆಳೆದು ಸುಮಾರು 5 ಲಕ್ಷ ಲಾಭ ಪಡೆದಿದ್ದಾರೆ.
ನಿತ್ಯ ದಲ್ಲಾಳಿಗಳಿಂದಲೇ ರೈತರು ನಷ್ಟವನ್ನ ಅನುಭವಿಸ್ತಿದ್ದಾರೆ ಅನ್ನೊ ಆರೋಪ ಇದೆ. ಇದರ ಮಧ್ಯೆ ದಲ್ಲಾಳಿಗಳ ಹಾವಳಿಗೆ ರೈತ ಆಂಜನೇಯ ಮಟ್ಟ ಹಾಕಿ ತಾನೇ ತನ್ನ ಸ್ವಂತವಾಗಿ ಮಾರ್ಕೆಂಟಿಗ್ ಮಾಡಿಕೊಂಡು ಬೇರೆ ರೈತರನ್ನ ಜೊತೆಗೂಡಿಸಿಕೊಂಡು ಹೋಗ್ತಿರೋದು ಒಳ್ಳೆಯ ಬೆಳವಣಿಗೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ