ಅರ್ಜಿ ಹಾಕಿದರೂ ಗೃಹಲಕ್ಷ್ಮಿ ಹಣ ಬರಲಿಲ್ಲ, ಮಗ ಜೀತಕ್ಕೆ ಇದ್ದ: ರಾಷ್ಟ್ರಭಕ್ತಿ ಮೆರೆದ ಬಾಲಕನ ಹೆತ್ತಮ್ಮ ಹೇಳಿಕೆ
ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದ ಸಂತೋಷ್ ಎಂಬ ಚಿಂದಿ ಆಯುವ ಬಾಲಕ ರಾಷ್ಟ್ರಗೀತೆ ಕೇಳಿದ ತಕ್ಷಣ ಚಿಂದಿ ಆಯುವ ಕೆಲಸ ನಿಲ್ಲಿಸಿ ಗೌರವ ಸಲ್ಲಿಸಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ಬಾಲಕನ ಬಗ್ಗೆ ಆತನ ತಾಯಿ ಶಿವಮ್ಮ ‘ಟಿವಿ9’ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಏನದು? ಇಲ್ಲಿದೆ ವಿಡಿಯೋ.
ರಾಯಚೂರು, ಮೇ 30: ಚಿಂದಿ ಆಯುತ್ತಿರುವಾಗ ಮೈದಾನವೊಂದರಲ್ಲಿ ರಾಷ್ಟ್ರಗೀತೆ (National Anthem) ಕೇಳಿ ಹಠಾತ್ ಕೆಲಸ ನಿಲ್ಲಿಸಿ ರಾಷ್ಟ್ರಗೀತೆಗೆ ಗೌರವ ಸಲ್ಲಿಸಿ ವೈರಲ್ ಆದ ಬಾಲಕ ಸಂತೋಷ್ನ (Santosh) ನಿಜ ವೃತ್ತಾಂತ ಇದೀಗ ಬಯಲಾಗಿದೆ. ಸಂತೋಷ್ ಕುರಿತು ಆತನ ತಾಯಿ ಶಿವಮ್ಮ ‘ಟಿವಿ9’ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ರಾಯಚೂರು (Raichur) ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದ ಸಂತೋಷ್ ಎಂಬ ಬಾಲಕನ ರಾಷ್ಟ್ರಪ್ರೇಮದ ವಿಡಿಯೋ ಬುಧವಾರ ವೈರಲ್ ಆಗಿತ್ತು.
‘ಮಾವನ ಬಳಿ ಜೀತಕ್ಕಿದ್ದ ಸಂತೋಷ್’
ಬಾಲಕ ಸಂತೋಷ್ ಹಾಗೂ ಆತನ ತಾಯಿ ಶಿವಮ್ಮ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಮಸರಕಲ್ ಗ್ರಾಮದ ವಾಸಿಗಳು. ಮನೆ ಮಠವಿಲ್ಲದೇ ತಾಯಿ ಶಿವಮ್ಮ ಹಾಗೂ ಮಗ ಸಂತೋಷ್ ರಾಯಚೂರು ತಾಲ್ಲೂಕಿನ ದೇವಸುಗೂರು ಗ್ರಾಮದ ಬೀದಿ ಬದಿಯಲ್ಲಿ ವಾಸ ಮಾಡುತ್ತಿದ್ದಾರೆ. ಮಗ ಸಂತೋಷ್ನನ್ನು ಆತನ ಮಾವ ಹೊಡೆದು, ಬಡಿದು 50 ಸಾವಿರ ರೂಪಾಯಿಗೆ ಜೀತಕ್ಕೆ ಇಟ್ಟಿದ್ದರು ಎಂದು ಶಿವಮ್ಮ ‘ಟಿವಿ9’ಗೆ ತಿಳಿಸಿದ್ದಾರೆ.
ಕಡು ಬಡತನದಲ್ಲಿದ್ದರೂ ಐದನೇ ತರಗತಿ ವರೆಗೂ ಸಂತೋಷ್ ಶಾಲೆಗೆ ತೆರಳಿದ್ದಾನೆ. ನಂತರ ಅಲ್ಲಿ ಹೊಡೆಯುತ್ತಾರೆ ಎಂದು ಶಾಲೆ ಬಿಟ್ಟಿದ್ದಾನೆ. ಬಳಿಕ ಆತನ ಮಾವನ ಬಳಿ 50 ಸಾವಿರ ರೂಪಾಯಿ ಜೀತಕ್ಕೆ ಇದ್ದ. ಅಲ್ಲಿ ಕುರಿ ಕಾಯುವುದು ಆತನ ಕೆಲಸವಾಗಿತ್ತು. ನಂತರ ಅಲ್ಲಿ ಸರಿಯಾಗುತ್ತಿಲ್ಲ ಎಂದು ಒಂದು ರೂಪಾಯಿಯೂ ತೆಗೆದುಕೊಳ್ಳದೆ ವಾಪಸ್ ಬಂದಿದ್ದಾನೆ ಎಂದು ಶಿವಮ್ಮ ತಿಳಿಸಿದ್ದಾರೆ.
ಇದನ್ನೂ ಓದಿ: ಮೈನವಿರೇಳುತ್ತದೆ ನಮ್ಮ ರಾಯಚೂರಿನ ಈ ಬಾಲಕನ ರಾಷ್ಟ್ರಭಕ್ತಿಯನ್ನು ನೋಡಿದರೆ! ವಿಡಿಯೋ ನೋಡಿ
ಇದೀಗ ತಾಯಿ ಮಗನ ಜೀವನ ರಸ್ತೆ ಪಕ್ಕದಲ್ಲೇ ಸಾಗುತ್ತಿದೆ. ಅಡುಗೆ, ಊಟ, ಉಪಚಾರ, ನಿದ್ದೆ ಎಲ್ಲವೂ ರಸ್ತೆ ಬದಿಯಲ್ಲೇ ಆಗುತ್ತಿದೆ. ಜೀವನಕ್ಕಾಗಿ ಹಗಲು ರಾತ್ರಿ ಸಂತೋಷ್ ಚಿಂದಿ ಆಯುತ್ತಾನೆ. ಶಿವಮ್ಮ ಹಾವು ಆಡಿಸುತ್ತಾ ಜನರನ್ನು ರಂಜಿಸಿ ತುಸು ಹಣ ಸಂಪಾದನೆ ಮಾಡುತ್ತಾರೆ. ಇದೀಗ ಸಂತೋಷ್ ಶಾಲೆಗೆ ಹೋಗುವ ಆಸೆ ವ್ಯಕ್ತಪಡಿಸಿ, ಸಹಾಯಕ್ಕೆ ಅಂಗಲಾಚಿದ್ದಾನೆ.
ರಾಜ್ಯ ಸರ್ಕಾರದ ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿದರೂ ಹಣ ಬಂದಿಲ್ಲ. ಎಲ್ಲ ದಾಖಲೆಗಳಿದ್ದರೂ ಹಣ ಕೊಡುತ್ತಿಲ್ಲ ಎಂದು ಶಿವಮ್ಮ ಅಲವತ್ತುಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ