ರಾಯಚೂರು, ಜೂ.02: ಕಳೆದ ಮೇ 22 ನೇ ತಾರಿಕು, ರಾಯಚೂರು(Raichur) ನಗರದಲ್ಲಿರುವ ಪೊಲೀಸ್ ಕ್ವಾಟರ್ಸ್ನಲ್ಲೇ ಕಳ್ಳತನವಾಗಿತ್ತು. ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಹೆಡ್ ಕಾನ್ಸ್ಟೇಬಲ್ (Head Constable) ಮಹಾದೇವಿ ಎನ್ನುವವರ ಮನೆಯಲ್ಲಿ ಆಗಂತುಕರು ಕೈ ಚಳಕ ತೋರಿಸಿದ್ದರು. ಮನೆಯಲ್ಲಿದ್ದ ಸುಮಾರು 10 ಲಕ್ಷ ರೂಪಾಯಿ ಹಣ ಲೂಟಿ ಮಾಡಲಾಗಿದೆ ಎಂದು ಹೆಡ್ ಕಾನ್ಸ್ಟೇಬಲ್ ಮಹಾದೇವಿ ಅವರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಜನನಿಬಿಡ ಪ್ರದೇಶ, ನೂರಾರು ಪೊಲೀಸ್ ಸಿಬ್ಬಂದಿ ವಾಸಿಸುವ ಕ್ವಾಟರ್ಸ್ನಲ್ಲೇ ಕಳ್ಳತನವೆಂದರೆ ಎಂತಹ ಕ್ರಿಮಿನಲ್ಗಳು ಇರಬೇಕು ಎಂದು ತನಿಖೆ ಶುರುಮಾಡಲಾಗಿತ್ತು. ಆ ಬಳಿಕ ತಾಂತ್ರಿಕ ಮಾಹಿತಿ ಆಧಾರದಲ್ಲಿ ತನಿಖೆ ನಡೆಸಿದಾಗ ಅಸಲಿ ಸತ್ಯ ಬಯಲಾಗಿದೆ. ಹೆಡ್ ಕಾನ್ಸ್ಟೇಬಲ್ ಮಹಾದೇವಿ ಅವರು ತಮ್ಮ ಫ್ಲಾಟ್ ಮಾರಾಟ ಮಾಡಿ ಆ ಹಣವನ್ನ ಮನೆಯಲ್ಲಿಟ್ಟಿದ್ದರು. ಆ ಬಗ್ಗೆ ತಿಳಿದವರೆ ಕೃತ್ಯ ಎಸಗಿರುವ ಶಂಕೆ ಕೂಡ ಇತ್ತು. ಇವೆಲ್ಲ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸರು ವಿಶ್ವನಾಥ್, ಗೋವಿಂದ ಹಾಗೂ ಮಹೇಶ್ ಎಂಬ ಮೂವರು ಆರೋಪಿಗಳನ್ನ ಬಂಧಿಸಿ ಸುಮಾರು 8 ಲಕ್ಷ ನಗದು ಹಣವನ್ನ ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ:ಬೆಂಗಳೂರು: ಸೈಕಲ್ನಲ್ಲಿ ಓಡಾಡುತ್ತ ಮನೆಗಳ್ಳತನ, ಬಂಧಿತನಿಂದ 1 ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ
ಬಳಿಕ ವಿಚಾರಣೆ ನಡೆಸಿದಾಗ ಈ ಆರೋಪಿಗಳು ಹೆಡ್ ಕಾನ್ಸ್ಟೇಬಲ್ ಮಹಾದೇವಿ ಅವರ ಮನೆ ಎದುರು ನಡೆಯುತ್ತಿರುವ ಪೊಲೀಸ್ ವಸತಿ ನಿಲಯಗಳ ಹೊಸ ಕಟ್ಟಡದ ಕೆಲಸ ಮಾಡುವವರು ಎಂದು ತಿಳಿದಿದೆ. ಹೀಗಾಗಿ ಮೂವರು ಆರೋಪಿಗಳು ಮಹಾದೇವಿ ಅವ್ರಿಗೆ ಪರಿಚಯವಾಗಿತ್ತು. ಪಾಪ ಬಡ ಹುಡುಗ್ರು ಎಂದು ಉಪಹಾರ, ಟೀ, ಕಾಫಿ, ಊಟ ಕೊಡುತ್ತಿದ್ದರು. ನಿತ್ಯ ಒಂದಲ್ಲ ಒಂದು ರೀತಿ ಮಹಾದೇವಿ ಇವ್ರಿಗೆ ಸಹಾಯ ಮಾಡುತ್ತಿದ್ದರು. ಈ ಮಧ್ಯೆ ಅವರ ಮನೆಯಲ್ಲಿ ಹಣವಿರುವ ಮಾಹಿತಿಯನ್ನ ಆರೋಪಿಗಳು ಪಡೆದು ಕನ್ನ ಹಾಕಿದ್ದಾರೆ.
ಮೇಡಂ ಮನೆಯಲ್ಲಿ ಯಾರೂ ಇಲ್ಲ ಎಂದರೂ ಅವರು ಸಾಕಿರುವ ಸೋನಿ, ಮೆಸ್ಸಿ ಎನ್ನುವ ಎರಡು ನಾಯಿಗಳು ಇರುತ್ತವೆ. ಅಪರಿಚಿತರು ಬಂದ್ರೆ ಅವೇ ಸುಳಿವು ಕೊಡುತ್ತವೆ. ಆದ್ರೆ, ಈ ಆರೋಪಿಗಳು ನಿತ್ಯ ಮನೆ ಬಳಿ ಬಂದು ಹೋಗ್ತಿದ್ದರಿಂದ ನಾಯಿಗಳು ಏನು ಮಾಡಿರ್ಲಿಲ್ಲ. ಆದರೂ ಬೀಗ ಒಡೆಯೋ ಟೈಂನಲ್ಲಿ ನಾಯಿಗಳು ಬೊಗಳಿದ್ದು, ಆಗ ಎರಡು ನಾಯಿಗಳಿಗೂ ಹೊಡೆದು ಮನೆಯೊಳಗೆ ಹೋಗಿದ್ದ ಆರೋಪಿಗಳು ಮನೆಯಲ್ಲಿದ್ದ ಲಕ್ಷ-ಲಕ್ಷ ನಗದನ್ನ ದೋಚಿ ಎಸ್ಕೇಪ್ ಆಗಿದ್ದರು ಎನ್ನುವ ಸತ್ಯ ಬಯಲಾಗಿದೆ.
ಅದೆನೆ ಇರಲಿ, ಉಂಡ ಮನೆಗೆ ಕನ್ನ ಹಾಕಿದ ಖದೀಮರಿಗೆ ತಕ್ಕ ಶಿಕ್ಷೆ ಆಗಬೇಕು. ಅಲ್ಲದೇ ಪರಿಚಯಸ್ಥರು ಎಂದು ಮನೆಯೊಳಗೆ ಬಿಟ್ಟುಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣವೇ ಉದಾಹರಣೆಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Sun, 2 June 24