ಜ್ಯೋತಿಷಿ ಭವಿಷ್ಯಕ್ಕೆ ಹೆದರಿ ಟೆಕ್ಕಿ ಆತ್ಮಹತ್ಯೆ? ಹಸೆಮಣೆ ಏರಬೇಕಿದ್ದವಳ ದಾರುಣ ಅಂತ್ಯ
ಬಾಗಲಗುಂಟೆಯ ಎಂಇಐ ಲೇಔಟ್‌ನಲ್ಲಿ ಪ್ರೀತಿಸಿದ ಹುಡುಗನೊಂದಿಗೆ ಮದುವೆಯಾಗಬೇಕಿದ್ದ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಜ್ಯೋತಿಷಿಯೊಬ್ಬರು ಅಲ್ಪಾಯುಷಿ ಎಂದು ಹೇಳಿದ್ದರಿಂದ ಹೆದರಿ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಶಂಕಿಸಲಾಗಿದೆ. ಯುವತಿ ರೂಮಿನ ಬಾಗಿಲು ತೆಗೆಯದ ಹಿನ್ನೆಲೆ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ಆಕೆ ನೇಣುಬಿಗಿದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ನೆಲಮಂಗಲ, ಫೆಬ್ರವರಿ 28: ಇಷ್ಟಪಟ್ಟ ಹುಡುಗನ ಜೊತೆ ಹಸೆಮಣೆ ಏರಬೇಕಿದ್ದ ಯುವತಿ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರು ಆತಂಕಕಾರಿ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿ ಎಂಇಐ ಲೇಔಟ್‌ನಲ್ಲಿ ನಡೆದಿದೆ. ವಿದ್ಯಾಜ್ಯೋತಿ (29) ಮೃತಳಾಗಿದ್ದು, ಕೆಲ ದಿನಗಳ ಹಿಂದೆ ಈಕೆ ಅಲ್ಪಾಯುಷಿ ಎಂದು ಜ್ಯೋತಿಷಿಯೋರ್ವರು ಹೇಳಿದ್ದರಂತೆ. ಇದೇ ಕಾರಣಕ್ಕೆ ಹೆದರಿ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ.
ವಿದ್ಯಾಜ್ಯೋತಿ ಅಲ್ಪಾಯುಷಿ ಎಂದಿದ್ದ ಜ್ಯೋತಿಷಿ, ಇದಕ್ಕಾಗಿ 9 ದಿನಗಳ ಪೂಜೆ ಮಾಡುವಂತೆ ತಾಕೀತು ಮಾಡಿದ್ದರು. 9ನೇ ದಿನ ದೇವರಿಗೆ ತಾಳಿ ಕೊಡುವಂತೆ ತಿಳಿಸಿದ್ದರು. ಈ ಹಿನ್ನೆಲೆ ಮಾರಮ್ಮ ದೇವರಿಗೆ ತಾಳಿ ಕೊಡಲು ಕುಟುಂಬ ಸಿದ್ಧತೆ ನಡೆಸಿತ್ತು. ಊಟದ ನಂತರ ಯುವತಿ ರೂಮ್ ಸೇರಿದ್ದು, ಖಾಸಗಿ ಕಂಪನಿ ಉದ್ಯೋಗಿಯಾಗಿದ್ದ ಈಕೆ ವರ್ಕ್ ಫ್ರಾಂ ಹೋಮ್ ಮಾಡುತ್ತಿದ್ದಳು. ಹೀಗಾಗಿ ಆಕೆ ಕೆಲಸ ಮಾಡುತ್ತಿರಬಹುದೆಂದು ಮನೆಯವರು ಭಾವಿಸಿದ್ದರು. ಸಂಜೆ ತಾಯಿ ಕರೆದರೂ ಆಕೆ ಹೊರಬಂದಿರಲಿಲ್ಲ. ಬಳಿಕ 8 ಗಂಟೆ ವೇಳೆಗೆ ದೇವಸ್ಥಾನಕ್ಕೆ ತೆರಳಬೇಕಿದ್ದ ಹಿನ್ನೆಲೆ ವಿದ್ಯಾಜ್ಯೋತಿಯನ್ನು ತಾಯಿ ಮತ್ತೆ ಕರೆದಿದ್ದಾರೆ. ಈ ವೇಳೆಯೂ ಆಕೆ ರೂಮಿನ ಬಾಗಿಲು ತೆಗೆಯದ ಹಿನ್ನೆಲೆ ಅನುಮಾನಗೊಂಡು ಕಿಟಕಿಯಲ್ಲಿ ನೋಡಿದಾಗ ಆಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಬ್ರೇಕ್ ಫೇಲ್ ಆಗಿ ರಸ್ತೆಯಲ್ಲಿ ಅಡ್ಡಾದಿಡ್ಡಿ ನುಗ್ಗಿದ ಲಾರಿ; ಸಿಕ್ಕ ಸಿಕ್ಕ ವಾಹನಕ್ಕೆಲ್ಲ ಡಿಕ್ಕಿ
ಮೃತ ವಿದ್ಯಾಜ್ಯೋತಿಯನ್ನು ಆಕೆಯ ಪೋಷಕರು ಅವಳ ಇಷ್ಟದಂತೆ ಬೆಳೆಸಿದ್ದರು. ಕೊಡಗು ಮೂಲದ ಯುವಕನನ್ನ ಈಕೆ ಪ್ರೀತಿಸಿದ್ದಳು ಎನ್ನಲಾಗಿದ್ದು, ವಿದ್ಯಾ ಇಷ್ಟದಂತೆ ಎರಡೂಮನೆಯವರು ಮದುವೆಗೆ ಕೂಡ ಒಪ್ಪಿದ್ದರು. ಆದರೆ ಹಸೆಮಣೆ ಏರುವ ಮುನ್ನವೇ ಈಕೆ ದುಡುಕಿನ ನಿರ್ಧಾರ ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ವಿಕ್ಟೋರಿಯಾ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗಾಗಿ ರವಾನೆ ಮಾಡಲಾಗಿದೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:40 am, Sat, 28 February 26
