ರಾಯಚೂರು, ಆಗಸ್ಟ್ 29: ರಾಯಚೂರು ತಾಲ್ಲೂಕಿನ ಯದ್ಲಾಪುರ ಗ್ರಾಮದಲ್ಲಿ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕಗಳ ಹೊಗೆಯಿಂದ ಅಕ್ಕಪಕ್ಕದ ಜನ ಕಂಗಾಲಾಗುವಂತಾಗಿದೆ. ರಾಯಚೂರು ತಾಲ್ಲೂಕಿನ ಶಕ್ತಿನಗರ ಬಳಿ ಇರುವ ಆರ್ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಪೂರೈಸುವ ಕೇಂದ್ರ. ಕಲ್ಲಿದ್ದಲು ಮೂಲಕ ಇಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಈ ವೇಳೆ ಇಲ್ಲಿನ ಘಟಕಗಳ ಚಿಮಣಿಗಳಿಂದ ದೂಳು ಮಿಶ್ರಿತ ಹೊಗೆ ಹೊರ ಸೂಸುತ್ತದೆ. ಈ ಹೊಗೆ ಮಳೆಯ ರೀತಿ ಅಕ್ಕ ಪಕ್ಕ ಬಂದು ಬೀಳತ್ತದೆ. ಈ ಹಾರುವ ಬೂದಿಗೂ ಬಂಗಾರ ಬೆಲೆ ಇದೆ! ಟೆಂಡರ್ ಮೂಲಕ ಈ ಬೂದಿಯಲ್ಲಿ ವಿವಿಧ ಫ್ಯಾಕ್ಟರಿಗಳಿಗೆ ರವಾನೆ ಮಾಡಲಾಗುತ್ತದೆ. ಆದರೆ, ಅಕ್ಕ ಪಕ್ಕದ ಗ್ರಾಮಗಳಲ್ಲಿ ಬಂದು ಬೀಳುವ ಹೊಗೆಯೊಂದ ಯದ್ಲಾಪುರ, ವಡ್ಲೂರು ಸೇರಿ ವಿವಿಧ ಗ್ರಾಮಗಳ ಜನ ಅಕ್ಷರಶಃ ನರಕ ಅನುಭವಿಸುತ್ತಿದ್ದಾರೆ.
ಆರ್ಟಿಪಿಎಸ್ ಘಟಕದಿಂದ ಹೊರ ಸೂಸುವ ಹೊಗೆ ಇಲ್ಲಿನ ಗ್ರಾಮಸ್ಥರನ್ನು ದಿಕ್ಕೆಡುವಂತೆ ಮಾಡಿದೆ. ಈ ಹೊಗೆ ಮನೆಗಳು ಮೇಲೆ, ಒಳಗೆ ಬಂದು ಬೀಳತ್ತದೆ. ಪಾತ್ರೆ ಪಗಡೆಗಳು, ನೀರಲ್ಲೂ ಹೊಗೆ ಆವರಿಸುತ್ತದೆ. ಮನೆ ಹೊರಗಡೆಯಲ್ಲಿನ ವಾಹನಗಳು, ರಸ್ತೆಗಳಲ್ಲೂ ಹಾರುವ ಬೂದಿ ಬಂದು ಬೀಳತ್ತದೆ. ನಿತ್ಯ ಇಲ್ಲಿನ ಜನರಿಗೆ ಇದೇ ದೂಳಲ್ಲೇ ಓಡಾಡುವ ದುಸ್ಥಿತಿ ಇದೆ. ನಿತ್ಯ ಬರೀ ಸ್ವಚ್ಛತೆಯನ್ನೇ ಮಾಡಬೇಕಿರೋದು ದುರಂತ.
ಆರ್ಟಿಪಿಎಸ್ ಘಟಕದ ದೂಳುಮಿಶ್ರಿತ ಹೊಗೆ ಜನರ ಮೇಲೂ ಬೀಳುತ್ತಿರುವುದು
ಇದಿಷ್ಟೇ ಅಲ್ಲ ಇಲ್ಲಿನ ವೃದ್ಧರು, ಮಕ್ಕಳು ಧೂಳಿನಿಂದ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗೆ ವರ್ಷಗಳ ಕಾಲ ಇದೇ ವಾತಾವರಣದಲ್ಲಿ ವಾಸವಿರುವುದರಿಂದ ಇಲ್ಲಿನ ಜನರಿಗೆ ಅಸ್ತಮಾ, ಹೃದ್ರೋಗ ಸೇರಿ ಇತರೆ ರೋಗ-ರುಜನೆಗಳಿಗೆ ತುತ್ತಾಗ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳೀಯ ಹುಲಿಗೆಮ್ಮಾ ಎಂಬವರು ಕೂಡ ಈ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಪೆನ್ಸಿಲ್ನಲ್ಲಿ ಮೂಡಿಬಂದ ಬಾಲ ಕೃಷ್ಣ; ಇಲ್ಲಿವೆ ಫೋಟೋಸ್
ಈ ಬಗ್ಗೆ ಸ್ಥಳೀಯರು ಸಾಕಷ್ಟು ಬಾರಿ ಆರ್ಟಿಪಿಎಸ್ ವಿರುದ್ಧ ಹೋರಾಟ ನಡೆಸಿದ್ದರೂ ಕ್ರಮವಾಗಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಇಲ್ಲಿನ ಜನರ ಪರ ಕೆಲಸ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ