Reporter‘s Diary : ‘ಪುಸ್ತಕಗಳ ಮಧ್ಯೆ ಸಿಕ್ಕ ಆ ಸ್ಟ್ಯಾಂಪ್​ಸೈಝ್ ಫೋಟೋ ಸಂದೀಪನದ್ದೇ ಆಗಿರಲಿ’

|

Updated on: Apr 23, 2022 | 10:41 AM

Borewell Incident : ರಾಯಚೂರು ಜಿಲ್ಲೆಯ ನೀರಮಾನ್ವಿಯ ಕೊಳವೆಬಾವಿಯಲ್ಲಿ ಬಿದ್ದ ಬಾಲಕ ಸಂದೀಪ ಇಹಲೋಕ ತ್ಯಜಿಸಿ ಇಂದಿಗೆ ಹದಿನೈದು ವರ್ಷ. ಈ ದುರ್ಘಟನೆಯನ್ನು ವರದಿ ಮಾಡಲು ಹೋಗಿದ್ದ ನರಸಿಂಹಮೂರ್ತಿ ಪ್ಯಾಟಿ ನೆನಪಿನ ಸುರುಳಿಯನ್ನು ಬಿಚ್ಚಿದ್ದಾರೆ.

Reporter‘s Diary : ‘ಪುಸ್ತಕಗಳ ಮಧ್ಯೆ ಸಿಕ್ಕ ಆ ಸ್ಟ್ಯಾಂಪ್​ಸೈಝ್ ಫೋಟೋ ಸಂದೀಪನದ್ದೇ ಆಗಿರಲಿ’
Follow us on

Reporter‘s Diary : ಪ್ರತಿವರ್ಷ ಏಪ್ರಿಲ್ ಬರುತ್ತಿದ್ದಂತೆಯೇ ಎಲ್ಲರೂ ಏಪ್ರಿಲ್ ಫೂಲ್ ಬಗ್ಗೆ ಮಾತನಾಡುತ್ತಾರೆ. ಯಾರೋ ಫೂಲ್ ಮಾಡುತ್ತಾರೆ, ಮತ್ಯಾರೋ ಫೂಲ್ ಆಗುತ್ತಾರೆ. ಆದರೆ ನನಗಂತೂ ಕಳೆದ ಒಂದೂವರೆ ದಶಕದಿಂದ ಏಪ್ರಿಲ್ ಬರುತ್ತಿದ್ದಂತೆಯೇ ಸಂದೀಪ ಅನ್ನೋ ಬಾಲಕನ ಮುದ್ದು ಮುಖ ನೆನಪಾಗತೊಡಗುತ್ತದೆ. ಅದು  2007ರ ಏಪ್ರಿಲ್ 23 ರ ಸಂಜೆ. ಬೆಂಗಳೂರು ಟಿವಿ9 ಕಚೇರಿಯಿಂದ ಕರೆ ಬಂತು. ಕೂಡಲೇ ರಾಯಚೂರಿನ ನೀರಮಾನ್ವಿಗೆ ಹೋಗುವಂತೆ ಸೂಚನೆ. ಅಲ್ಲಿ ಕೊಳವೆಬಾವಿಯಲ್ಲಿ ಸಂದೀಪ ಅನ್ನೋ ಬಾಲಕ ಬಿದ್ದಿದ್ದ. ಅದನ್ನು ವರದಿ ಮಾಡಲು ರಾತ್ರಿಯೇ ಕೊಪ್ಪಳದಿಂದ ಬಸ್ ಏರಿ ಹೊರಟೆ. ಬಸ್ಸಿನಲ್ಲಿರುವಾಗಲೇ ಫೋನ್ ಮೂಲಕ ಕ್ಯಾಮೆರಾಮನ್ ಸದಾನಂದ ಜತೆಗೆ ಮಾತನಾಡಿ ಸಂಪೂರ್ಣ ಮಾಹಿತಿ ಪಡೆದಿದ್ದೆ. ಮಧ್ಯಾಹ್ನ ಘಟನೆ ಸಂಭವಿಸಿದ್ದಾಗಿನಿಂದ ಹಿಡಿದು ಇದುವರೆಗೂ ಏನೆಲ್ಲಾ ನಡೆದಿದೆ ಅನ್ನೋದನ್ನು ವಿವರವಾಗಿ ಹೇಳಿದ್ದರು. ಮಾನ್ವಿ ಮುಟ್ಟುತ್ತಲೇ ನನ್ನನ್ನು ಕರೆದೊಯ್ಯಲು ಬೈಕ್​ನೊಂದಿಗೆ ಸ್ಥಳೀಯ ಹುಡುಗನೊಬ್ಬ ಅಲ್ಲಿಗೆ ಬಂದಿದ್ದ. ಮುಂದೆ ಏನೆಲ್ಲ ನಡೆಯಿತು ಎಂಬುದನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಡಲು ಇಲ್ಲಿ ಪ್ರಯತ್ನಿಸಿದ್ದೇನೆ.
ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಹಿರಿಯ ವರದಿಗಾರ, ಧಾರವಾಡ

 

(ಭಾಗ 1) 

ಅಲ್ಲಿಂದ ಹತ್ತು ಕಿ.ಮೀ. ಪಯಣ. ಅದಾಗಲೇ ಭಾರೀ ಗಾತ್ರದ ಜೆಸಿಬಿಗಳು ಕೆಲಸ ಶುರು ಮಾಡಿದ್ದವು. ಬೋರ್​ವೆಲ್​ನ  ಸುತ್ತಲೂ ಅದಾಗಲೇ ಅಗಾಧ ಪ್ರಮಾಣದ ಗುಂಡಿಯನ್ನು ತೋಡಲಾಗಿತ್ತು. ಅಲ್ಲಿದ್ದ ಪತ್ರಿಕೆಯ ಕೆಲ ವರದಿಗಾರರು ನಡೆದ ಘಟನೆಯನ್ನು ಮತ್ತೊಮ್ಮೆ ಹೇಳಿದರು. ಬಾಲಕನ ಫೋಟೋ ಏನಾದರೂ ಇದೆಯಾ ಅಂತಾ ಕೇಳಿದೆ. ಯಾರ ಬಳಿಯೂ ಇರಲಿಲ್ಲ. ಕೂಡಲೇ ಸದಾನಂದನನ್ನು ಕರೆದುಕೊಂಡು ಬಾಲಕನ ಮನೆಗೆ ಹೋದೆ. ಏಕೆಂದರೆ ಬಾಲಕನ ಭಾವಚಿತ್ರವೇ ನಮಗೆ ಅತಿ ಮುಖ್ಯವಾಗಿತ್ತು. ಸಂದೀಪನ ಮನೆಗೆ ಹೋಗುತ್ತಲೇ ಮಂಚದ ಮೇಲೆ ಕುಳಿತಿದ್ದ ಆತನ ತಂದೆ ರೋದಿಸುತ್ತಿದ್ದ. ಒಳಗೆ ಹೋಗುತ್ತಲೇ ನನ್ನನ್ನು ತಬ್ಬಿ ಅಳತೊಡಗಿದ, ಸಮಾಧಾನ ಹೇಳಿದೆ. ಸಂದೀಪನ ಫೋಟೋ ಇದೆಯಾ ಅಂತಾ ಕೇಳಿದೆ. ಎರಡೂ ಕೈಯಿಂದ ಸನ್ನೆ ಮಾಡಿ, ತಲೆ ಅಲ್ಲಾಡಿಸಿದ. ಹುಡುಕಾಡಿದರೆ ಸಿಗಬಹುದೇನೋ ಅನ್ನುವಂತೆ ಸಂದೀಪನ ಪುಸ್ತಕದ ಕಪಾಟಿನತ್ತ ನೋಡಿದ. ಆ ಮನೆಯಲ್ಲಿ ಸಂದೀಪನ ಫೋಟೋ ಹುಡುಕೋದು ಅಷ್ಟು ಸುಲಭದ ಮಾತಾಗಿರಲಿಲ್ಲ. ಆದರೂ ಪಟ್ಟುಬಿಡದೇ ಮನೆಯಲ್ಲಿ ಇರುವ ಎಲ್ಲ ಪುಸ್ತಕಗಳನ್ನು ಕಿತ್ತಿಕಿತ್ತಿ ಆ ಒಂದು ಫೋಟೋಕ್ಕಾಗಿ ಒಂದು ಗಂಟೆ ಹುಡುಕಾಟ ನಡೆಸಿದೆವು. ಕೊನೆಗೂ ಫೋಟೋ ಸಿಗದೇ ಇದ್ದಾಗ ಚಿಂತೆಯಾಯಿತು. ಹಾಗಂತ ನಾವು ಯಾವುದೇ ಕಾರಣಕ್ಕೂ ಫೋಟೋ ಸಿಗದೇ ಅಲ್ಲಿಂದ ಮರಳುವಂತಿರಲಿಲ್ಲ. ಏಕೆಂದರೆ ಮರುದಿನದಿಂದ ಇಪ್ಪತ್ನಾಲ್ಕು ಗಂಟೆಯೂ ಅದೇ ಸುದ್ದಿಯನ್ನು ಹೈಪ್ ಮಾಡಲು ನಿರ್ಧರಿಸಿಯಾಗಿತ್ತು.

ಕಚೇರಿಯ ಇನ್ಪುಟ್​ನಿಂದ ನಿರಂತರವಾಗಿ ಫೋನ್​ ಕರೆಗಳು. ಪ್ರೊಮೋ ಸೇರಿದಂತೆ ಎಲ್ಲ ವರದಿಗೂ ಸಂದೀಪನ ಫೋಟೋ ಅತಿ ಮುಖ್ಯವಾಗಿತ್ತು. ಮನೆಯಲ್ಲಿ ಫೋಟೋ ಸಿಗದೇ ಇದ್ದರೆ ಕೊನೆಗೆ ಶಾಲೆಯಲ್ಲಾದರೂ ಫೋಟೋ ಸಿಕ್ಕೇ ಸಿಗುತ್ತೆ ಅನ್ನೋದು ಗೊತ್ತಿತ್ತು. ಆದರೆ ವೇಳೆ ಶಾಲೆಗಳಿಗೆ ಬೇಸಿಗೆ ರಜೆ. ಶಿಕ್ಷಕರನ್ನು ಹುಡುಕಿ, ಫೋಟೋ ಪಡೆಯೋದು ಆಗಿನ ದಿನಗಳಲ್ಲಿ ಅಷ್ಟು ಸುಲಭವಾಗಿರಲಿಲ್ಲ. ಇದೆಲ್ಲವನ್ನು ಯೋಚಿಸುತ್ತಾ ಒಂದು ಬಾರಿ ಮೇಲ್ಗಡೆ ನೋಡಿದೆ. ಸೆಲ್ಫ್​ನಲ್ಲಿ ಕೆಲವು ಪುಸ್ತಕಗಳು ಕಣ್ಣಿಗೆ ಬಿದ್ದವು. ಸ್ಟೂಲ್ ಇಟ್ಟುಕೊಂಡು ಅದನ್ನು ತೆಗೆದುಕೊಂಡು ತೆರೆದರೆ, ಅಲ್ಲಿ ಸ್ಟ್ಯಾಂಪ್ ಸೈಝ್​ನ ಒಂದು ಫೋಟೋ ಸಿಕ್ಕಿತು. ಅದು ಸಂದೀಪನ ಫೋಟೋ ಆಗಿರಲಿ ಅಂತಾ ಮನಸ್ಸು ಬಯಸುತ್ತಿತ್ತು. ಅದನ್ನು ಸಂದೀಪನ ತಂದೆಗೆ ತೋರಿಸಿದೆ. ಅದನ್ನು ನೋಡುತ್ತಲೇ ಆತನ ದುಃಖ ಉಮ್ಮಳಿಸಿ ಬಂದುಬಿಟ್ಟಿತು. ಫೋಟೋ ಕಸಿದುಕೊಂಡವನೇ ಕಣ್ಣಿಗೆ ಒತ್ತಿಕೊಂಡು ಭೋರಾಡಿ ಅಳತೊಡಗಿದ.

ಇದನ್ನೂ ಓದಿ : New Book : ಅಚ್ಚಿಗೂ ಮೊದಲು : ಪ್ಯಾಟಿಯವರ ಪ್ರಬಂಧಗಳು ಸದ್ಯದಲ್ಲೇ ನಿಮ್ಮ ಓದಿಗೆ

ಇವನೇ ಸ್ವಾಮೀ… ನನ್ ಮಗಾ ಅಂತಾ ಗಟ್ಟಿಯಾಗಿ ನನ್ನನ್ನು ತಬ್ಬಿಕೊಂಡ. ಆತನನ್ನು ನನ್ನ ಕೈಲಾದಷ್ಟು ಮಟ್ಟಿಗೆ ಸಮಾಧಾನಪಡಿಸಿದೆ. ಫೋಟೋ ಸಿಕ್ಕಿದ್ದರಿಂದ ದೊಡ್ಡದೊಂದು ಚಿಂತೆಗೆ ವಿರಾಮ ಬಿದ್ದಿತ್ತು. ಕೂಡಲೇ ಫೋಟೋದ ವೀಡಿಯೋ ಮಾಡಿ, ಆ ಫೋಟೋ ಯಾರಿಗೂ ಸಿಗದೇ ಇರಲಿ ಅಂತಾ ನನ್ನ ಕಿಸೆಯಲ್ಲಿಟ್ಟುಕೊಂಡು, ನಾಳೆ ಮರಳಿಸೋದಾಗಿ ಹೇಳಿ ಹೊರಬಂದೆ. ಹಾಗೂ ಹೀಗೂ ಕಷ್ಟಪಟ್ಟು ವೀಡಿಯೋ ಅಪ್ಲೋಡ್ ಮಾಡಿದೆ. ಅಲ್ಲಿಗೆ ದೊಡ್ಡದೊಂದು ಕೆಲಸ ಮುಗಿದಂತಾಗಿತ್ತು. ಅಲ್ಲದೇ ಮೊದಲ ಬಾರಿಗೆ ಸಂದೀಪನ ಫೋಟೋವನ್ನು ರಾಜ್ಯದ ಜನರು ನೋಡುವಂತಾಗಿತ್ತು. ಚಾನೆಲ್​ನಲ್ಲಿ ನಿರಂತರವಾಗಿ ಆರದಿರಲಿ ಸಂ’ದೀಪ’ ಅಂತಾ ವರದಿ ಬಿತ್ತರವಾಗತೊಡಗಿತು.

ಇತ್ತ ಹೊಲದಲ್ಲಿ ಎರಡೆರಡು ಜೆಸಿಬಿಗಳು ನಿರಂತರವಾಗಿ ಗರ್ಜಿಸುತ್ತಲೇ ಇದ್ದವು. ಕ್ಷಣಕ್ಷಣದ ಸುದ್ದಿಯನ್ನು ಮೊಬೈಲ್ ಮೂಲಕವೇ ಅಪ್ಡೇಡ್ ಮಾಡಲಾಗುತ್ತಿತ್ತು. ಎರಡು ಗಂಟೆ ಸುಮಾರಿಗೆ ಹಿಂದಿ ಚಾನೆಲ್​ವೊಂದರ ಒಬಿ (ಔಟ್ ಡೋರ್ ಬ್ರಾಡ್ಕಾಸ್ಟಿಂಗ್) ವಾಹನ ಸ್ಥಳಕ್ಕೆ ಬಂದೇ ಬಿಟ್ಟಿತು. ಅದು ಬಂದ ಸುದ್ದಿಯನ್ನು ಕಚೇರಿಗೆ ಮುಟ್ಟಿಸಲಾಗಿತ್ತು. ಏಕೆಂದರೆ ಕೆಲವೇ ವರ್ಷಗಳ ಹಿಂದೆ ಉತ್ತರ ಪ್ರದೇಶದಲ್ಲಿ ಇಂಥದ್ದೇ ಘಟನೆಯೊಂದು ನಡೆದಿತ್ತು. ಪ್ರಿನ್ಸ್ ಅನ್ನೋ ಬಾಲಕನನ್ನು ಜೀವಂತವಾಗಿ ಹೊರಗೆ ತೆಗೆಯಲಾಗಿತ್ತು. ಅಂಥದ್ದೇ ಕಾರ್ಯಾಚರಣೆಯನ್ನು ಇಲ್ಲಿಯೂ ಆರಂಭಿಸಲಾಗಿತ್ತು. ಆ ಕಾರ್ಯಾಚರಣೆಯ ನೇರಪ್ರಸಾರವನ್ನು ದೇಶದ ಎಲ್ಲ ನ್ಯೂಸ್ ಚಾನೆಲ್​ಗಳು ನಿರಂತರವಾಗಿ ಮಾಡಿದ್ದವು. ಹೀಗಾಗಿ ಅದೇ ರೀತಿಯಲ್ಲಿ ಈ ಸುದ್ದಿಯನ್ನು ಕೂಡ ಮಾಡಲು ಅನೇಕ ಚಾನೆಲ್ ಗಳು ನಿರ್ಧರಿಸಿದ್ದವು.

ಆದರೆ ನೇರಪ್ರಸಾರ ಮಾಡಲು ಮುಖ್ಯವಾಗಿ ಬೇಕಾಗಿದ್ದು ಒಬಿ ವ್ಯಾನ್. ಅದಾಗಲೇ ಹೈದ್ರಾಬಾದ್​ನಿಂದ ಹಿಂದಿ ಚಾನೆಲ್​ನ ಒಬಿ ವ್ಯಾನ್ ಬಂದಿತ್ತು. ಆದರೆ ನಮ್ಮ ಬಳಿ ಮಾತ್ರ ಏನೂ ಇರಲೇ ಇಲ್ಲ. ನಾವು ಎಷ್ಟೊತ್ತಿದ್ದರೂ ಲ್ಯಾಪ್​ಟಾಪ್ ಮೂಲಕವೇ ವಿಡಿಯೋ ಕಳಿಸಬೇಕಿತ್ತು. ಆಗಿನ ಟೆಕ್ನಾಲಜಿ ಪ್ರಕಾರ ಐದು ಸೆಕೆಂಡುಗಳ ವೀಡಿಯೋ ಕಳಿಸಲು ಸುಮಾರು ಒಂದು ಗಂಟೆ ಸಮಯ ಬೇಕಾಗಿತ್ತು. ಇಂಥ ವೇಳೆಯಲ್ಲಿ ಮೊಬೈಲ್ ಬಳಸಿಕೊಂಡೇ ಈ ಸುದ್ದಿಯನ್ನು ಪ್ರಸಾರ ಮಾಡಲು ನಿರ್ಧರಿಸಲಾಯಿತು. ಈಗಿನ ಹಾಗೆ ಆಗ ಆ್ಯಂಡ್ರಾಯಿಡ್ ಫೋನ್ ಇರಲಿಲ್ಲ. ಇದ್ದರೂ ವಾಟ್ಸಾಪ್, ಫೇಸ್ಬುಕ್ ಇರಲೇ ಇಲ್ಲ. ಹೀಗಾಗಿ ಫೋನೋ ಮೂಲಕವೇ ಈ ಸುದ್ದಿಯನ್ನು ತುಂಬಾನೇ ವಿಭಿನ್ನವಾಗಿ ನೀಡಲು ಕಚೇರಿಯ ಹಿರಿಯರು ನಿರ್ಧರಿಸಿದ್ದರು. ಇದೇ ಕಾರಣಕ್ಕೆ ನನಗೆ ನಿರಂತರವಾಗಿ ಫೋನೋ ಬರತೊಡಗಿದವು.

ಭಾಗ 2 : Reporter‘s Diary : ‘ಪುಸ್ತಕಗಳ ಮಧ್ಯೆ ಸಿಕ್ಕ ಆ ಸ್ಟ್ಯಾಂಪ್​ಸೈಝ್ ಫೋಟೋ ಸಂದೀಪನದ್ದೇ ಆಗಿರಲಿ’

ಈ ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/reporters-diary

ಗಮನಿಸಿ : ಇಂದಿನಿಂದ ಶುರುವಾಗುವ ‘ರಿಪೋರ್ಟರ್ಸ್ ಡೈರಿ’ ಪ್ರತೀ ಪ್ರತೀ ಶನಿವಾರಕ್ಕೊಮ್ಮೆ ಪ್ರಕಟವಾಗುತ್ತದೆ. ಟಿವಿ9 ವರದಿಗಾರರು, ತಾಂತ್ರಿಕ ವರ್ಗದವರು ಇಲ್ಲಿ ತಮ್ಮ ವರದಿಗಳನ್ನು ಹಂಚಿಕೊಳ್ಳುತ್ತಾರೆ.  ಪ್ರತಿಕ್ರಿಯೆಗಾಗಿ : tv9kannadadigital@gmail.com

Published On - 8:09 am, Sat, 23 April 22