
ರಾಯಚೂರು, (ಜುಲೈ 18): ಜಿಲ್ಲೆಯ ಮಸ್ಕಿ (Maski) ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ ಮತ್ತು ಆಂಜನೇಯ ಸ್ವಾಮಿ ದೇವಾಲಯ (Anjaneya Temple) ಸುತ್ತಲೂ ನಡೆದಿರುವ ಉತ್ಖನನದಲ್ಲಿ (Excavation) ಮಾನವನ ನೆಲೆಗೆ ಸಂಬಂಧಿಸಿದ ಸುಮಾರು 4000 ವರ್ಷಗಳ ಹಿಂದಿನ ವಸ್ತುಗಳು ಪತ್ತೆಯಾಗಿದೆ. ಮೌರ್ಯ ಸಾಮ್ರಾಜ್ಯದ (Mauryan Empire) ಚಕ್ರವರ್ತಿ ಅಶೋಕನ ಶಾಸನ (Emperor Ashoka Legislation) ಅವಿಷ್ಕಾರದ ಮೂಲಕ ರಾಯಚೂರು ಜಿಲ್ಲೆ ಖ್ಯಾತಿ ಪಡೆದುಕೊಂಡಿತ್ತು. ಇದೀಗ ಇದೇ ಮಸ್ಕಿಯಲ್ಲಿ ನಾಲ್ಕು ಸಾವಿರ ವರ್ಷಗಳ ಹಿಂದೆಯೇ ಬೆಟ್ಟದ ಪ್ರದೇಶದಲ್ಲಿ ಜನವಸತಿ ಇತ್ತು ಎನ್ನುವುದರ ಕರುಹುಗಳು ಪತ್ತೆಯಾಗಿದೆ. ಮೂಲಕ ಮಸ್ಕಿ ಇತಿಹಾಸವನ್ನು ಸಾವಿರಾರು ವರ್ಷಗಳ ಹಿಂದಕ್ಕೆ ಕರೆದುಕೊಂಡು ಹೋಗಿದೆ.
ಅಮೆರಿಕಾ, ಕೆನಡಾ ಹಾಗೂ ಭಾರತದ 20 ಜನ ಸಂಶೋಧಕರ ತಂಡ ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಯಲು ಆಂಜನೇಯ ದೇವಸ್ಥಾನ ಸೇರಿ ತಾಲೂಕಿನ ಹಲವೆಡೆ ಉತ್ಖನನ ನಡೆಸಿದ್ದು, ಈ ವೇಳೆ 4000 ವರ್ಷಗಳಷ್ಟು ಹಳೆಯದಾದ ಮಾನವನ ವಸಾಹತು ಪ್ರದೇಶ ಇತ್ತು ಎಂಬುವುದಕ್ಕೆ ಪುರಾವೆಗಳು ಪತ್ತೆಯಾಗಿದೆ. ಉತ್ಖನನದ ವೇಳೆ ವಿವಿಧ ಕಲಾಕೃತಿಗಳು ಸೇರಿದಂತೆ ಕೆಲವು ಉಪಕರಣಗಳು ಪತ್ತೆಯಾಗಿವೆ. ಆ ಮೂಲಕ ಒಂದು ಅಭಿವೃದ್ಧಿ ಹೊಂದುತ್ತಿದ್ದ ವಸಾಹತು ಇಲ್ಲಿ ಇತ್ತು ಎಂಬುವುದರ ಸುಳಿವು ಸಂಶೋಧಕರಿಗೆ ಸಿಕ್ಕಿದೆ.
ಮಸ್ಕಿ ಪಟ್ಟಣದ ಬೆಟ್ಟದ ಪ್ರದೇಶದಲ್ಲಿ ಒಟ್ಟು 271 ಸ್ಥಳಗಳನ್ನು ಗುರುತಿಸಿ ಉತ್ಖನನ ನಡೆಸಲಾಗಿದ್ದು, 11 ರಿಂದ 14ನೇ ಶತಮಾನದವರೆಗಿನ ಸಾಮಾನ್ಯ ಜನರ ಜೀವನ ಮಟ್ಟ, ಆಹಾರ ಪದ್ಧತಿ ಹೇಗಿತ್ತು ಎಂಬುದರ ಬಗ್ಗೆ ಅಧ್ಯಯನ ಮಾಡಲಾಗಿದೆ. ಈ ವೇಳೆ ಆಗಿನ ಜನ ಬಳಸುತ್ತಿದ್ದ ಪದಾರ್ಥಗಳು, ವಸ್ತುಗಳು, ಮನೆಯ ಆಕಾರ, ಮಣ್ಣು ಮತ್ತು ಕಲ್ಲಿನಿಂದ ಕಟ್ಟಿದ ಮನೆಗಳು, ಮಣ್ಣಿನ ಪಾತ್ರೆಗಳು, ಆ ಕಾಲದ ಜನ ಮಡಿಕೆಯಲ್ಲಿಟ್ಟಿದ್ದ ದವಸ-ಧಾನ್ಯಗಳು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಭಾರತದ ದೆಹಲಿಯ ಎನ್ಸಿಆರ್ನ ಶಿವ್ ನಾಡರ್, ಅಮೆರಿಕ ಮೂಲದ ಸ್ಟ್ಯಾನ್ ಫೋರ್ಡ್ ವಿವಿಯ ಪ್ರೊಫೆಸರ್ ಡಾ ಆಂಡ್ರ್ಯೂ ಎಂ ಬಾಯರ್, ಕೆನಡಾದ ಮೆಕ್ಗಿಲ್ ವಿವಿಯ ಡಾ ಪೀಟರ್ ಜಿ ಜೋಹಾನ್ಸೆನ್ ಅವರ ನೇತೃತ್ವದಲ್ಲಿ ಉತ್ಖನನ ನಡೆಸಲಾಗಿದೆ. ಕಳೆದ ಮೂರು ತಿಂಗಳಿನಿಂದ ಈ ತಂಡವೂ ಮಸ್ಕಿಯಲ್ಲಿ ಸಂಶೋಧನೆ ನಡೆಸಿದ್ದು, ಈ ಹುಡುಕಾಟದಲ್ಲಿ ನಾಗರಿಕತೆಯ ಚಿಹ್ನೆಗಳನ್ನು ಪತ್ತೆ ಮಾಡುವ ಕಾರ್ಯವನ್ನು ಮಾಡಿದ್ದಾರೆ.
ಸಂಶೋಧಕರ ಈ ತಂಡವೂ ಕಾರ್ಯಾಚರಣೆ ನಡೆಸುವ ಮುನ್ನ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ಎಎಸ್ಐ) ಅನುಮತಿಯನ್ನು ಪಡೆದುಕೊಂಡಿದ್ದು, ಕ್ರಿಪೂ 11 ಮತ್ತು 14ನೇ ಶತಮಾನಗಳಲ್ಲಿ ಮಾನವರು ಇಲ್ಲಿ ವಾಸಿಸುತ್ತಿದ್ದರು ಎಂಬುವುದನ್ನು ದೃಢಿಪಡಸುವ ಪುರಾವೆಗಳನ್ನು ಪತ್ತೆ ಮಾಡಿದ್ದಾರೆ. ಹಾಗೇ ಆ ಕಾಲದಲ್ಲಿ ಮನುಷ್ಯರ ಜೀವನ ಮಟ್ಟ ಉತ್ತಮವಾಗಿತ್ತು ಎನ್ನುವುದು ಸಹ ಕಂಡುಬಂದಿದ್ದು, ಸಂಶೋಧನೆ ಇನ್ನೂ ಮುಂದುವರೆದಿದೆ.
Published On - 10:18 pm, Fri, 18 July 25