ಒಂದೇ ದಿನ 8 ಮಕ್ಕಳ ಮೇಲೆ ಬೀದಿ ನಾಯಿ ದಾಳಿ; ಚಿಕಿತ್ಸೆ ಫಲಿಸದೆ 4 ವರ್ಷದ ಬಾಲಕಿ ಸಾವು, ಉಳಿದವರಲ್ಲಿ ಆತಂಕ

| Updated By: ಆಯೇಷಾ ಬಾನು

Updated on: May 21, 2024 | 11:03 AM

ಕಳೆದ 15 ದಿನಗಳ ಹಿಂದೆ ರಾಯಚೂರಿನ ಗ್ರಾಮವೊಂದರಲ್ಲಿ ಬೀದಿ ನಾಯಿ ಒಂದೇ ದಿನ 8 ಮಕ್ಕಳ ಮೇಲೆ ದಾಳಿ ಮಾಡಿತ್ತು. ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಪೈಕಿ 4 ವರ್ಷದ ಬಾಲಕಿ ಏಕಾಏಕಿ ಮೃತಪಟ್ಟಿದ್ದು ಉಳಿದ ಮಕ್ಕಳ ಪೋಷಕರಲ್ಲಿ ಆತಂಕ ಉಂಟಾಗಿದೆ.

ಒಂದೇ ದಿನ 8 ಮಕ್ಕಳ ಮೇಲೆ ಬೀದಿ ನಾಯಿ ದಾಳಿ; ಚಿಕಿತ್ಸೆ ಫಲಿಸದೆ 4 ವರ್ಷದ ಬಾಲಕಿ ಸಾವು, ಉಳಿದವರಲ್ಲಿ ಆತಂಕ
ನಾಯಿ ಕಚ್ಚಿ ಬಾಲಕಿ ಸಾವು
Follow us on

ರಾಯಚೂರು, ಮೇ.21: ಜಿಲ್ಲೆಯಲ್ಲಿ ಬೀದಿ ನಾಯಿ ಕಚ್ಚಿ ನಾಲ್ಕು ವರ್ಷದ ಬಾಲಕಿ ಮೃತಪಟ್ಟ ಘಟನೆ ನಡೆದಿದೆ (Dog Attack). 15 ದಿನದ ಹಿಂದೆ ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕಿ ಲಾವಣ್ಯ(4) ಮೃತಪಟ್ಟಿದ್ದಾಳೆ. ರಾಯಚೂರು ತಾಲೂಕಿನ ಕೊರವಿಹಾಳ ಗ್ರಾಮದಲ್ಲಿ ಕಳೆದ 15 ದಿನಗಳ ಹಿಂದೆ ಒಂದೇ ದಿನ ಏಳು ಮಕ್ಕಳಿಗೆ ಬೀದಿ ನಾಯಿ ಕಚ್ಚಿತ್ತು. ಮನೆ ಬಳಿ ಆಟವಾಡುತ್ತಿದ್ದ ಮಕ್ಕಳ ಮೇಲೆ ಏಕಾಏಕಿ ನಾಯಿ ದಾಳಿ ಮಾಡಿತ್ತು. ದಾಳಿಗೊಳಗಾದವರ ಪೈಕಿ ಕೀರಲಿಂಗ ಎಂಬುವವರ 4 ವರ್ಷದ ಪುತ್ರಿ ಲಾವಣ್ಯ ಮೃತಪಟ್ಟಿದ್ದಾಳೆ.

ಮೃತ ಲಾವಣ್ಯಳ ಕತ್ತಿನ ಹಿಂಭಾಗಕ್ಕೆ ಬೀದಿ ನಾಯಿ ಕ್ರೂರವಾಗಿ ಕಚ್ಚಿತ್ತು. ನಾಯಿ ದಾಳಿಯಿಂದ ತೀವ್ರ ರಕ್ತಸ್ರಾವಕ್ಕೊಳಗಾಗಿದ್ದ ಲಾವಣ್ಯಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು, ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಏಕಾಏಕಿ ಸಾವು ಸಂಭವಿಸಿದೆ. ಈ ಹಿನ್ನೆಲೆ ನಾಯಿ ಕಡಿತಕ್ಕೆ ಒಳಗಾದ ಉಳಿದ ಮಕ್ಕಳ ಪೋಷಕರಲ್ಲಿ ಆತಂಕ ಮೂಡಿದೆ. ಘಟನೆ ಬಳಿಕ ಗ್ರಾಮಸ್ಥರು ಬೀದಿ ನಾಯಿಯನ್ನು ಕೊಂದು ಹಾಕಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಇತ್ತ ಬೀದಿ ನಾಯಿಯಿಂದ ಅವಾಂತರ ಸೃಷ್ಟಿಯಾದರೂ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಗಾಯಾಳು ಮಕ್ಕಳಿಗೆ ಪರಿಹಾರ, ಚಿಕಿತ್ಸಾ ವೆಚ್ಚ ಭರಿಸದೇ ಸಗಮಕುಂಟಾ ಪಮಚಾಯಿತಿ ನಿರ್ಲಕ್ಷ್ಯ ತೋರಿದೆ. ಜನಪ್ರತಿನಿಧಿಗಳು,ಅಧಿಕಾರಿಗಳು ಮೃತ ಲಾವಣ್ಯ ಕುಟುಂಬಕ್ಕೆ ಪರಿಹಾರ ನೀಡಿಲ್ಲ, ಸೌಜನ್ಯಕ್ಕೆ ಸಾಂತ್ವನ ಕೂಡ ಹೇಳಲು ಬಂದಿಲ್ಲ ಎಂದು ಪಂಚಾಯಿತಿ, ಅಧಿಕಾರಿಗಳು, ಜನಪ್ರತಿನಿಧಿಗಳ ವಿರುದ್ಧ ಸಂತ್ರಸ್ತ ಕುಟುಂಬಗಳು ಆಕ್ರೋಶ ಹೊರ ಹಾಕಿವೆ.

ಇದನ್ನೂ ಓದಿ: ಈ ವಾರವೂ ತರಕಾರಿಗಳ‌ ಬೆಲೆ ಏರಿಕೆ: ಮೆಣಸಿನಕಾಯಿ, ಬೀನ್ಸ್​ ದರ ಗಗನಕ್ಕೆ!

ಬೀದಿ ನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕಿ ಸಾವು ಕೇಸ್ ಸಂಬಂಧ ಸಗಮಕುಂಟಾ ಗ್ರಾ.ಪಂ. ಪಿಡಿಒ ಕರಿಯಪ್ಪ ಪ್ರತಿಕ್ರಿಯೆ ನೀಡಿದ್ದು ಗ್ರಾಮಕ್ಕೆ ಭೇಟಿ ನೀಡಿ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ. ಮೃತ ಬಾಲಕಿ ಕುಟುಂಬದವರನ್ನು ಭೇಟಿಯಾಗಿ ಮಾಹಿತಿ ಪಡೆಯುವೆ ಎಂದಿದ್ದಾರೆ.

ಟಿಸಿ ಕೊಡದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

ಬೈಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ವರ್ಗಾವಣೆ ಪತ್ರ ಕೊಡದಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಡುಪಿ ಜಿಲ್ಲೆಯ ಬೈಂದೂರು ಪಟ್ಟಣದಲ್ಲಿ ಘಟನೆ ನಡೆದಿದ್ದು, ನಿತಿನ್ ಮೃತಪಟ್ಟ ದುರ್ದೈವಿಯಾಗಿದ್ದು, ಈತ SSLC ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ನಂತೆ. ಪಿಯುಸಿ ಸೇರ್ಪಡೆಯಾಗಲು ಟಿಸಿ ಪಡೆಯಲು ಶಾಲೆಗೆ ಬಂದಿದ್ದಾನೆ. ಆಗ ಮುಖ್ಯೋಪಾಧ್ಯಾಯ ಸುರೇಶ್ ಭಟ್ ಬೈದಿದ್ದಾರೆ ಎಂದು ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:43 am, Tue, 21 May 24