ಕಲುಷಿತ ನೀರು ಕುಡಿದು ಮೂವರು ಸಾವು ಪ್ರಕರಣ: ನಗರಸಭೆ ವಿರುದ್ಧ ಇಂದು ರಾಯಚೂರು ಬಂದ್​ಗೆ ಕರೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jun 06, 2022 | 8:51 AM

ರಾಯಚೂರು ನಗರದಲ್ಲಿ ಕಲುಷಿತ ನೀರು ಸರಬರಾಜು ಇಂದ ಮೂವರು ಸಾವನ್ನಪ್ಪಿದ್ದರು. ಸರಣಿ ದುರಂತವಾದ್ರೂ ನಗರಸಭೆ ಕ್ರಮಕೈಗೊಂಡಿಲ್ಲ. ಈ ಹಿನ್ನೆಲೆ ನಗರಸಭೆ ವೈಫಲ್ಯ ‌ಖಂಡಿಸಿ ರಾಯಚೂರು ‌ನಗರ ಇಂದು ಬಂದ್​ಗೆ ಕರೆ ನೀಡಿದೆ.

ಕಲುಷಿತ ನೀರು ಕುಡಿದು ಮೂವರು ಸಾವು ಪ್ರಕರಣ: ನಗರಸಭೆ ವಿರುದ್ಧ ಇಂದು ರಾಯಚೂರು ಬಂದ್​ಗೆ ಕರೆ
ರಾಯಚೂರು ನಗರಸಭೆ
Follow us on

ರಾಯಚೂರು: ನಗರದಲ್ಲಿ ಕಲುಷಿತ ನೀರು ಕುಡಿದು ಮೂವರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ನಿರ್ಲಕ್ಷ್ಯದ ವಿರುದ್ಧ ನಿವಾಸಿಗಳು ಆಕ್ರೋಶಗೊಂಡಿದ್ದು, ಇಂದು ರಾಯಚೂರು ಬಂದ್​ಗೆ ನಾಗರಿಕ ಹೋರಾಟ ವೇದಿಕೆ ಕರೆ ನೀಡಿದೆ. ಅಸ್ವಸ್ಥರಿಗೆ ಚಿಕಿತ್ಸಾ ವೆಚ್ಚ ಭರಿಸಲು ಆಗ್ರಹಿಸಿ ಇಂದು ಬಂದ್​ಗೆ ಕರೆ ನೀಡಿದ್ದು, ಕಲುಷಿತ ನೀರು ಸೇವಿಸಿ ಮಲ್ಲಮ್ಮ, ಅಬ್ದುಲ್, ನೂರ್‌ ಮೃತಪಟ್ಟಿದ್ರು. ಸರಣಿ ದುರಂತದಿಂತ ನೂರಾರು ಜನ ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿದರೂ ನಗರಸಭೆ ಡೋಂಟ್​ಕೇರ್ ಎಂದಿದೆ.​ ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಿ, ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನೀಡುವಂತೆ ಒತ್ತಾಯ ಮಾಡಲಾಗಿದೆ.

ರಾಯಚೂರು ನಗರದ ಜನರೇ ನೀವು ಎಂಥ ನೀರು ಕುಡಿಯುತ್ತಿದ್ದಿರಿ ಗೊತ್ತಾ..?

ರಾಂಪುರ ಗ್ರಾಮದ ಬಳಿ ಇರುವ ಶುದ್ಧ ಕುಡಿಯುವ ನೀರಿನ ಘಟಕವನ್ನು 16 ವರ್ಷಗಳಿಂದ ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ವಹಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಘಟಕ ಸ್ವಚ್ಛಗೊಳಿಸುವುದು ಕಡ್ಡಾಯ. ಆದರೆ, ನೀರಿನ ಘಟಕದಲ್ಲಿ ಸ್ವಚ್ಛತಾ ಕಾರ್ಯ ನಡೆಸಿಲ್ಲ. ವಾಟರ್ ಕ್ವಾಲಿಟಿ ಟೆಸ್ಟ್ ವೇಳೆ ಅಧಿಕಾರಿಗಳ ನಿರ್ಲಕ್ಷ್ಯತನ ಬೆಳಕಿಗೆ ಬಂದಿದ್ದು, ಅಧಿಕಾರಿಗಳು 50ಕ್ಕೂ ಹೆಚ್ಚು ಕಡೆ ನೀರಿನ ಸ್ಯಾಂಪಲ್ಸ್ ಕಲೆ ಹಾಕಿದ್ದರು. 20ಕ್ಕೂ ಹೆಚ್ಚು ಕಡೆ ಕುಡಿಯಲು ಯೋಗ್ಯವಲ್ಲದ ನೀರು ಅಂತ ವರದಿ ಬಂದಿದ್ದು, ಇದೇ ಕಾರಣಕ್ಕೆ ವಾಂತಿ-ಭೇದಿ ಸೇರಿ ವಿವಿಧ ಸಮಸ್ಯೆಗಳು ಉಲ್ಬಣವಾಗಿವೆ. ಟ್ಯಾಂಕ್​ನಲ್ಲಿ ಓರ್ವ ವ್ಯಕ್ತಿ ಮುಳುಗುವ ಎತ್ತರದಷ್ಟು ಮಣ್ಣು ಶೇಖರಣೆಯಾಗಿದೆ.

ಇದನ್ನೂ ಓದಿ; Cancer v/s Diabetes: ಕ್ಯಾನ್ಸರ್ ರೋಗಿಗಳಲ್ಲಿ ಹೆಚ್ಚುತ್ತಿದೆ ಮಧುಮೇಹ: ಅಧ್ಯಯನ

15 ದಿನಗಳಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿದ್ದರೂ ಇನ್ನೂ ಮುಗಿದಿಲ್ಲ. ಸೆಕೆಂಡ್ ಲೆವಲ್ ಫಿಲ್ಟರೇಶನ್​ನಲ್ಲಿ ಮಣ್ಣು ಶೇಖರಣೆಯಾಗಿದ್ದು, ವಾಟರ್ ಫಿಲ್ಟರೇಶನ್​ಗೆ ಕೆಮಿಕಲ್ಸ್ ಬಳಸದೆ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ರಾಯಚೂರು ತಾಲೂಕಿನ ಡಿ.ರಾಂಪುರ ಗ್ರಾಮದ ಬಳಿಯಿರುವ ಕೆರೆಯಿಂದ ಘಟಕಕ್ಕೆ ನೀರು ಪೂರೈಸಲಾಗುತ್ತಿದ್ದು, ಕೆರೆ ಗಬ್ಬೆದ್ದು ದುರ್ವಾಸನೆ ಬರುತ್ತಿದೆ ಎಂದು ಆರೋಪ ಮಾಡಲಾಗಿದೆ. 16 ವರ್ಷಗಳಿಂದ ದುರಸ್ತಿ ಅನುದಾನದಲ್ಲಿ ಅವ್ಯವಹಾರ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ಸೂಕ್ತ ತನಿಖೆ ನಡೆಸುವಂತೆ ಸಾರ್ವಜನಿಕರ ಆಗ್ರಹಿಸಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಹಣವಿಲ್ಲದೇ ಜನ ಕಂಗಾಲು:

ಕಲುಷಿತ ನೀರು ಸೇವಿಸಿ ಸಾಕಷ್ಟು ಬಡ ಕುಟುಂಬದ ಜನ ಖಾಸಗಿ ಆಸ್ಪತ್ರೆಗೆ ಹಣ ಕಟ್ಟಲಾಗದೇ ಕಂಗಾಲಾಗಿದ್ದಾರೆ. ಕಲುಷಿತ ನೀರಿನಿಂದ ಮೂತ್ರಪಿಂಡಕ್ಕೂ ಹಾನಿಯಾಗುತ್ತಿರುವ ಹಿನ್ನೆಲೆ ನಿತ್ಯ 20-30 ಸಾವಿರ ರೂ.ವರೆಗೆ ಆಸ್ಪತ್ರೆ ಖರ್ಚಾಗುತ್ತಿದೆ. 4 ಜನರ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಡಯಾಲಿಸಿಸ್ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸರಿಯಿಲ್ಲ ಅನ್ನೋ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆ ಮನೆಯಲ್ಲೇ ಹೋಮ್ ಐಸೋಲೇಶನ್ ಆಗಿ ಚಿಕಿತ್ಸೆ ಮಾಡಲಾಗುತ್ತಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.