ರಾಯಚೂರು ಅ.08: ಲಿಂಗಸೂರು (Lingasuru) ತಾಲ್ಲೂಕಿನ ದೇವರಭೂಪೂರ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥ ಎಂಬ ಕಾರಣಕ್ಕೆ ಹೆತ್ತವರೇ ಮಗನನ್ನ ಗೃಹ ಬಂಧನದಲ್ಲಿರಿಸಿದ್ದರು. ಈ ಸುದ್ದಿ ಟವಿ9 ಡಿಜಿಟಲ್ನಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು (Health Department Officers) ಮತ್ತು ಪೊಲೀಸರು ಎಚ್ಚೆತ್ತುಕೊಂಡು ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಆರೋಗ್ಯ ಅಧಿಕಾರಿಗಳು ಮಾನಸಿಕ ಅಸ್ವಸ್ಥ ಹನುಮಂತನ ಆರೋಗ್ಯ ಸ್ಥಿತಿ-ಗತಿ ಬಗ್ಗೆ ಮಾಹಿತಿ ಕಲೆ ಹಾಕಿ, ಆತನ ಕೇಸ್ ಹಿಸ್ಟರಿ ಪಡೆದು ರಾಯಚೂರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಅವಶ್ಯಕತೆ ಇದ್ದರೆ ರಿಮ್ಸ್ನಿಂದ ಧಾರವಾಡದ ಮಾನಸಿಕ ರೋಗಿಗಳ ಆಸ್ಪತ್ರೆಗೆ ಹನುಮಂತನನ್ನು ರವಾನಿಸಲು ವೈದ್ಯರು ಚಿಂತನೆ ನಡೆಸಿದ್ದಾರೆ.
ಲಿಂಗಸುಗೂರು ತಾಲ್ಲೂಕಿನ ದೇವರಭೂಪೂರ ಗ್ರಾಮದಲ್ಲಿ ವಾಸವಾಗಿರುವ ರಂಗಪ್ಪ ಹಾಗೂ ನೀಲಮ್ಮ ದಂಪತಿಯ ಹಿರಿಯ ಮಗ ಹನುಮಂತ (28) ಪಿಯುಸಿವರೆಗೂ ಓದಿದ್ದಾನೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದ್ದಿದ್ದರಿಂದ ಮುಂದೆ ಓದಲು ಸಾಧ್ಯವಾಗಲಿಲ್ಲ. ಹೀಗಾಗಿ ಬೇರೆಯವರ ಹೊಲಕ್ಕೆ ದುಡಿಯಲು ಹೋಗುತ್ತಿದ್ದನು.
ಹೀಗೆ ಒಂದು ದಿನ ಹೊಲಕ್ಕೆ ದುಡಿಯಲು ಹೋದಾಗ ಮರದ ಮೇಲಿಂದ ಬಿದ್ದು, ತಲೆಗೆ ಪೆಟ್ಟಾಗಿದೆ. ಇದರಿಂದ ಆತ ಮಾನಸಿಕ ಅಸ್ವಸ್ಥನಂತೆ ವರ್ತಿಸಲು ಆರಂಭಿಸಿದ್ದಾನೆ. ಕಲ್ಲು, ಗಾಜು, ಕಟ್ಟಿಗೆ ತಿನ್ನಲು ಆರಂಭಿಸಿದ್ದಾರೆ. ಅಲ್ಲದೆ ಸಾಕು ಪ್ರಾಣಿಗಳ ಕತ್ತು ಸೀಳಿ ಹತ್ಯೆಗೈಯಲು ಆರಂಭಿಸಿದ್ದಾನೆ. ಇಷ್ಟೇ ಅಲ್ಲದೆ ಗ್ರಾಮಸ್ಥರ ಮೇಲೆ ಹಲ್ಲೆಗೆ ಮುಂದಾಗುತ್ತಿದ್ದನು. ಈ ಬಗ್ಗೆ ಗ್ರಾಮಸ್ಥರು ಹನುಮಂತನ ಪೋಷಕರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ರಾಯಚೂರಿನಲ್ಲಿ ಪೋಷಕರಿಂದಲೇ 28 ವರ್ಷದ ಮಗನ ಗೃಹ ಬಂಧನ! ಹೆತ್ತವರ ಕಣ್ಣೀರ ಕಥೆ
ಈ ಹಿನ್ನೆಲೆಯಲ್ಲಿ ಪೋಷಕರು ಹನುಮಂತನ ಕೈಕಾಲುಗಳಿಗೆ ಸರಪಳಿ ಕಟ್ಟಿ ಕಳೆದ ಎಂಟು ವರ್ಷಗಳಿಂದ ಗೃಹ ಬಂಧನದಲ್ಲಿರಿಸಿದ್ದರು. ಹನುಮಂತ ಕೋಣೆಯೊಳಗೆ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದನು. ಈ ಬಗ್ಗೆ ರಾಯಚೂರು ಟಿವಿ9 ಡಿಜಿಟಲ್ ಜಿಲ್ಲಾ ವರದಿಗಾರರು ತಿಳಿದು ವರದಿ ಮಾಡಿದ್ದಾರೆ. ವರದಿ ಪ್ರಕಟವಾಗುತ್ತಿದ್ದಂತೆ ಜಿಲ್ಲಾ ಆರೋಗ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ