ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ರಾಯಚೂರಿನಲ್ಲಿ 4 ಕೋಟಿ ರೂಪಾಯಿ ರಹಸ್ಯ ಭೇದಿಸಿದ ಇಡಿ

| Updated By: Ganapathi Sharma

Updated on: Jul 13, 2024 | 2:19 PM

ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ ರಾಜ್ಯ ಸರ್ಕಾರವನ್ನು ಪೇಚಿಗೆ ಸಿಲುಕಿಸಿದ್ದು, ಇದೀಗ ಮಾಜಿ ಸಚಿವ ನಾಗೇಂದ್ರರ ಬಂಧನವಾಗುತ್ತಿದ್ದಂತೆಯೇ ಚರ್ಚೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಈ ಮಧ್ಯೆ, ತನಿಖೆಯ ಅಖಾಡಕ್ಕೆ ಇಳಿದಿರುವ ಜಾರಿ ನಿರ್ದೇಶನಾಲಯ, ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದಲ್ಲಿ ರಾಯಚೂರಿನಲ್ಲಿ ಭಾರಿ ಅಕ್ರಮ ನಡೆದಿರುವುದನ್ನು ಬಯಲಿಗೆಳೆದಿದೆ. ಆ ಕುರಿತ ಮಾಹಿತಿ ಇಲ್ಲಿದೆ.

ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣ: ರಾಯಚೂರಿನಲ್ಲಿ 4 ಕೋಟಿ ರೂಪಾಯಿ ರಹಸ್ಯ ಭೇದಿಸಿದ ಇಡಿ
ಜಾರಿ ನಿರ್ದೇಶನಾಲಯ
Image Credit source: PTI
Follow us on

ರಾಯಚೂರು, ಜುಲೈ 13: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ರಾಯಚೂರಿನಲ್ಲಿ ಮಹತ್ವದ ದಾಖಲೆ ಕಲೆ ಹಾಕಿದ್ದಾರೆ. ಸುಮಾರು 4 ಕೋಟಿ ರೂಪಾಯಿ ಹಣದ ರಹಸ್ಯ ಭೇದಿಸಿದ್ದಾರೆ. ಕಾಂಗ್ರೆಸ್ ಶಾಸಕ, ನಿಗದಮ ಅಧ್ಯಕ್ಷ ಬಸನಗೌಡ ದದ್ದಲ್ ಸಂಬಂಧಿ ಕಾರ್ತಿಕ್ ಮೂಲಕ ಸುಮಾರು 4 ಕೋಟಿ ರೂಪಾಯಿ ವ್ಯವಹಾರ ನಡೆದಿರುವುದನ್ನು ಇಡಿ ಪತ್ತೆ ಮಾಡಿದೆ.

ರಾಯಚೂರು ತಾಲೂಕಿನ ಆಸ್ಕಿಹಾಳ ಗ್ರಾಮದಲ್ಲಿ ದದ್ದಲ್ ಸಂಬಂಧಿ ಕಾರ್ತಿಕ್ ಎಂಬಾತ ಲಕ್ಷ್ಮೀದೇವಿ ಎಂಬ ಮಹಿಳೆಯಿಂದ 4 ಕೋಟಿ ರೂಪಾಯಿ ಕೊಟ್ಟು ಜಮೀನು ಖರೀದಿ ಮಾಡಿದ್ದ. ಕಾರ್ತಿಕ್, ಆಂಜನೇಯ ಎಂಬುವರ ಹೆಸರಿನಲ್ಲಿ ಜಮೀನು ನೋಂದಣಿಯಾಗಿದೆ. ಲಕ್ಷ್ಮೀದೇವಿಗೆ 25 ಲಕ್ಷ ಮೊತ್ತದ 3 ಚೆಕ್​ಗಳನ್ನು ಕಾರ್ತಿಕ್, ಆಂಜನೇಯ ನೀಡಿದ್ದರು. ಉಳಿದ ಹಣವನ್ನ ನಗದು ರೂಪದಲ್ಲಿ ನೀಡಲಾಗಿತ್ತು ಎನ್ನಲಾಗಿದೆ. ಇದೀಗ ಲಕ್ಷ್ಮೀದೇವಿಗೆ ಸಂಕಷ್ಟ ಎದುರಾಗಿದೆ.

ಗೃಹ ಪ್ರವೇಶ ದಿನವೇ ಇಡಿ ಶಾಕ್

ಜಮೀನು ಮಾರಿದ್ದ ಲಕ್ಷ್ಮೀದೇವಿ ಹೊಸ ಮನೆ ಖರೀದಿಸಿದ್ದರು. ಅದರ ಗೃಹ ಪ್ರವೇಶ ದಿನವೇ ಇಡಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಮನೆ ಖರೀದಿಸಲು ಹಣ ಬಂದಿರುವುದು ಹೇಗೆ ಎಂದು ಇಡಿ ಪ್ರಶ್ನೆ ಮಾಡಿದೆ. ಜತೆಗೆ, ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟು ತೆರಳಿದೆ.

ಈ ಮಧ್ಯೆ, ಭೂಮಿ ಖರೀದಿ ಬಗ್ಗೆ ಪ್ರತಿಕ್ರಿಯಿಸಿರುವ ರಾಯಚೂರು ಜೆಡಿಎಸ್ ಜಿಲ್ಲಾಧ್ಯಕ್ಷ ವಿರೂಪಾಕ್ಷ, ನೋಂದಣಿ ಇಲಾಖೆ ದರ ಕೇವಲ 23 ಲಕ್ಷ ರೂಪಾಯಿ ಇದೆ. ಆದರೆ, ಮಾರ್ಕೆಟ್ ದರ ಬೇರೆಯೇ ಇರುತ್ತದೆ. ಇದರಲ್ಲಿ ಎಸ್‌ಟಿ ಹಣವನ್ನ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ: ಶಾಸಕ ಬಸನಗೌಡ‌ ದದ್ದಲ್ ಅಜ್ಞಾತ ಸ್ಥಳಕ್ಕೆ

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಶಾಸಕ ಬಸನಗೌಡ ದದ್ದಲ್‌ಗೂ ಬಂಧನ ಭೀತಿ ಎದುರಾಗಿದೆ. ಹೀಗಾಗಿ ದದ್ದಲ್‌ ಅಜ್ಞಾತವಾಗಿದ್ದಾರೆ. ಶುಕ್ರವಾರ ಎಸ್ಐಟಿ ವಿಚಾರಣೆ ಎದುರಿಸಿದ್ದ ದದ್ದಲ್‌, ತಮ್ಮನ್ನ ಬಂಧಿಸುವಂತೆ ಕೇಳಿಕೊಂಡಿದ್ದರು ಎನ್ನಲಾಗಿತ್ತು. ಇಡಿ ಬಂಧನದಿಂದ ತಪ್ಪಿಸಿಕೊಳ್ಳಲು ಎಸ್ಐಟಿ ಅಧಿಕಾರಿಗಳಿಗೆ ಬಂಧಿಸುವಂತೆ ದುಂಬಾಲು ಬಿದ್ದಿದ್ದರು ಎನ್ನಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ದದ್ದಲ್ ಎಲ್ಲೂ ತಪ್ಪಿಸಿಕೊಂಡು ಹೋಗಿಲ್ಲ. ಅವರು ಇಲ್ಲೇ ಓಡಾಡಿಕೊಂಡು ಇದ್ದಾರೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ