ರಾಯಚೂರು: ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಡಾ.ಶರಣಪ್ರಕಾಶ್ ಪಾಟೀಲ್ (Dr. Sharana Prakash Patil) ಅವರನ್ನು ನೇಮಿಸಿರುವುದಕ್ಕೆ ವಿವಿಧ ಸಂಘಟನೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಕೂಡಲೇ ಉಸ್ತುವಾರಿ ಸಚಿವರನ್ನು ಬದಲಾಯಿಸದಿದ್ದರೆ ಗೋ ಬ್ಯಾಕ್ ಚಳವಳಿ ನಡೆಸುವುದಾಗಿ ಏಮ್ಸ್ (AIMS) ಹೋರಾಟ ಸಮಿತಿ, ಕರವೇ ಸೇರಿದಂತೆ ಐದು ಸಂಘಟನೆಗಳು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ.
ಏಮ್ಸ್ ಕಲಬುರಗಿಗೆ ಬೇಕೆಂದು ಇತ್ತೀಚೆಗೆ ಶರಣಪ್ರಕಾಶ್ ಅವರು ಹೇಳಿಕೆ ನೀಡುವ ಮೂಲಕ ರಾಯಚೂರಿನ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಶರಣಪ್ರಕಾಶ್ ಅವನನ್ನು ರಾಯಚೂರಿನ ಜಿಲ್ಲಾ ಉಸ್ತುವಾರಿಗಳನ್ನಾಗಿ ನೇಮಕ ಮಾಡಿರುವುದಕ್ಕೆ ವಿವಿಧ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿವೆ.
ಇದನ್ನೂ ಓದಿ: District In-Charge Ministers List: ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ ರಿಲೀಸ್: ನಿಮ್ಮ ಜಿಲ್ಲೆ ಉಸ್ತುವಾರಿ ಯಾರು?
ಉಸ್ತುವಾರಿಗಳ ಬದಲಾವಣೆ ಮಾಡುವಂತೆ ಆಗ್ರಹಿಸಿ ರಾಯಚೂರಿನ ಅಂಬೇಡ್ಕರ್ ಸರ್ಕಲ್‌ನಲ್ಲಿ ವಿವಿಧ ಸಂಘಟನೆಗಳು ಧರಣಿ ನಡೆಸಿದ್ದು, ಉಸ್ತುವಾರಿ ಸಚಿವರ ಬ್ಯಾನರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲೆಗೆ ಏಮ್ಸ್‌ಗಾಗಿ ಕಳೆದ 393 ದಿನಗಳಿಂದ ಹೋರಾಟ ನಡೆಸುತ್ತಿದ್ದೇವೆ. ಆದರೆ ಡಾ.ಶರಣಪ್ರಕಾಶ್ ನಮ್ಮ ಹೋರಾಟದ ವಿರುದ್ಧ ಹೇಳಿಕೆ ನೀಡಿದ್ದಾರೆ. ಇಂತಹ ಸಚಿವರು ನಮ್ಮ ಜಿಲ್ಲೆಗೆ ಬೇಡವೆಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಕೂಡಲೇ ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸುವಂತೆ ಪ್ರತಿಭಟನಾಕಾರರು ಆಗ್ರಹ ಮಾಡಿದ್ದು, ಇಲ್ಲವಾದಲ್ಲಿ ಗೋ ಬ್ಯಾಕ್ ಚಳವಳಿ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರ ಸಂಘಟನೆಗಳ ಎಚ್ಚರಿಕೆಗೆ ಜಗ್ಗುತ್ತಾ? ಉಸ್ತುವಾರಿ ಸಚಿವರನ್ನು ಬದಲಾಯಿಸುತ್ತಾ? ಅಥವಾ ಶರಣಪ್ರಕಾಶ್ ಅವರನ್ನೇ ಮುಂದುವರಿಸುತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ