
ಮೈಸೂರು: ಐತಿಹಾಸಿಕ ಮೈಸೂರು ಅರಮನೆಗೆ(Mysuru Palace) ಹೊಂದಿಕೊಂಡಿರುವ ಕೋಟೆ ಮಾರಮ್ಮ ದೇಗುಲದ ಹಿಂಭಾಗದ ಗೋಡೆ ಕುಸಿದಿದೆ. ಕೋಟೆ ಮಾರಮ್ಮ ದೇಗುಲ ಹಾಗೂ ಜಯಮಾರ್ತಾಂಡ ದ್ವಾರದ ಮಧ್ಯದಲ್ಲಿ ಬರುವ ಕೋಟೆಯ ಗೋಡೆ ಕುಸಿದು ಬಿದ್ದಿದೆ. ಅಂದಿನ ಅರಸರ ಕಾಲದಲ್ಲಿ ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು, ಅರಮನೆಯ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ಕೋಟೆಯ ಗೋಡೆ ಕುಸಿದಿದೆ. ಸದ್ಯ ಕುಸಿದಿರುವ ಭಾಗಕ್ಕೆ ಟಾರ್ಪಾಲ್ ಹೊದಿಸಲಾಗಿದೆ. ನೂರಕ್ಕೂ ಹೆಚ್ಚು ಹಳೆಯ ಕಾಲದ ಕಲ್ಲುಗಳು ನೆಲಕ್ಕೆ ಉರುಳಿವೆ.
ಪಾವಗಡದ ಸೋಲಾರ್ ಪಾರ್ಕ್ ಜಲಾವೃತ
ಕಳೆದ ಮೂರು ದಿನದ ಹಿಂದೆ ಸುರಿದಿದ್ದ ಭಾರಿ ಮಳೆಗೆ ಪಾವಗಡ ತಾಲೂಕಿನ ತಿರುಮಣಿಯಲ್ಲಿರುವ ಸೋಲಾರ್ ಪಾರ್ಕ್ ಜಲಾವೃತಗೊಂಡಿದೆ. ಕ್ಯಾದಗಾನಕೆರೆ ಕೋಡಿ ನೀರು ಬಂದು ಅವಾಂತರ ಸೃಷ್ಟಿಯಾಗಿದೆ. ಸುಮಾರು 2050 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗುವ ಪ್ಲಾಂಟ್ಗಳು ಮುಳುಗಿದ್ದು ನೀರು ತುಂಬಿದ ಪ್ಲಾಂಟ್ ನಲ್ಲಿ ಕಾರ್ಮಿಕರು ಈಜಾಡಿದ್ದಾರೆ.
ಶವಗಾರಕ್ಕೆ ನುಗ್ಗಿದ ಮಳೆ ನೀರು
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನಲ್ಲಿ ನಿರಂತರ ಮಳೆಯಾದ ಹಿನ್ನೆಲೆ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಮಳೆ ನೀರು ನುಗ್ಗಿದೆ. ಮಳೆ ನೀರಿನ ನಡುವೆಯೇ ಪೋಸ್ಟ್ಮಾರ್ಟಂ ನಡೆಸುವ ಸ್ಥಿತಿ ಎದುರಾಗಿದೆ. ಸಮಸ್ಯೆ ಬಗೆಹರಿಸುತ್ತಿಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: Karnataka Rain: ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಇನ್ನೆರಡು ದಿನ ವರುಣನ ಆರ್ಭಟ; ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆಯ ಮಳೆ
ಹಳ್ಳದಲ್ಲಿ ಕೊಚ್ಚಿ ಹೋಗಿ ಜಾನುವಾರುಗಳ ಸಾವು
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದ ಬಳಿ ಸೂಳೆಕೆರೆ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಐದು ಜಾನುವಾರುಗಳು ಮೃತಪಟ್ಟಿವೆ. ಜಾನುವಾರುಗಳ ಮೈ ತೊಳೆಯುವಾಗ ದುರ್ಘಟನೆ ಸಂಭವಿಸಿದೆ. ಬೆಳ್ಳೂಡಿ ಗ್ರಾಮದ ಗಂಗಪ್ಳರ ಸಿದ್ದಪ್ಪ ಎಂಬುವರಿಗೆ ಸೇರಿದ ಎರಡು ಎತ್ತುಗಳು, ಒಂದು ಹಸು, ಒಂದು ಹೆಣ್ಣು ಕರು ಹಾಗೂ ಒಂದು ಹೋರಿ ಮೃತಪಟ್ಟಿದೆ.
ಒಂದೂವರೆ ಕಿಲೋ ಮೀಟರ್ ದೂರ ಜಾನುವಾರುಗಳು ಕೊಚ್ಚಿಕೊಂಡು ಹೋಗಿದ್ದು ಅಗ್ನಿ ಶಾಮಕ ದಳದ ಸಿಬ್ಬಂದಿ ಆರು ಜಾನುವಾರುಗಳಲ್ಲಿ ಒಂದು ಹೋರಿ ರಕ್ಷಣೆ ಮಾಡಿದ್ದಾರೆ. ಹಾಗೂ ಐದು ಜಾನುವಾರುಗಳು ಮೃತಪಟ್ಟಿವೆ. ಸ್ಥಳಕ್ಕೆ ಪಶುವೈದ್ಯ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಮನೆ ಗೋಡೆ ಕುಸಿದು ಬಿದ್ದು ವೃದ್ಧ ಸಾವು.
ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಮನೆ ಗೋಡೆ ಕುಸಿದು ಬಿದ್ದು ವೃದ್ಧ ಮೃತಪಟ್ಟಿರುವ ಘಟನೆ ನಡೆದಿದೆ. 68 ವರ್ಷದ ಹನುಮಂತಪ್ಪ ಹರಿಜನ ಮೃತ ವೃದ್ಧ. ಮಳೆಯಿಂದ ನೆನೆದು ಗೋಡೆ ಕುಸಿದು ಬಿದ್ದಿದ್ದರಿಂದ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ನಿನ್ನೆ ರಾತ್ರಿ ಮನೆ ಕುಸಿದು ಬಿದ್ದು ಹನುಮಂತಪ್ಪ ಗಂಭೀರವಾಗಿ ಗಾಯಗೊಂಡಿದ್ದರು. ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ ನಾಲ್ಕೈದು ಜನರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಂಸಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published On - 1:16 pm, Tue, 18 October 22