
ಬೆಂಗಳೂರು, ಸೆಪ್ಟೆಂಬರ್ 28: ಕರ್ನಾಟಕದ ಹಲವೆಡೆ ವರುಣ (rain) ಅಬ್ಬರಿಸುತ್ತಿದ್ದಾನೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಗೆ ಜನರ ಬದುಕೇ ಕೊಚ್ಚಿ ಹೋಗುತ್ತಿದೆ. ಹೀಗಾಗಿ ಕಲಬುರಗಿ, ವಿಜಯಪುರ, ಯಾದಗಿರಿ, ಬೀದರ್ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸಲು ತುರ್ತು ಕ್ರಮಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ (Siddaramaiah) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೃಷ್ಣ ಮತ್ತು ಭೀಮ ನದಿ ತೀರದಲ್ಲಿ ಪ್ರವಾಹ ಪರಿಸ್ಥಿತಿ ನಿಭಾಯಿಸುವಂತೆ ಕಲಬುರಗಿ, ವಿಜಯಪುರ, ಯಾದಗಿರಿ ಸೇರಿದಂತೆ ಬೀದರ್ ಜಿಲ್ಲೆಗಳಲ್ಲಿ ಅಗತ್ಯ ತುರ್ತು ಕ್ರಮಕ್ಕೆ ನಾಲ್ಕೂ ಜಿಲ್ಲೆಗಳ ಡಿಸಿ, ಸಿಇಒ ಮತ್ತು ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ.
ಇದನ್ನೂ ಓದಿ: ಬೀದರ್ನಲ್ಲಿ ಭಾರಿ ಮಳೆಗೆ ವ್ಯಾಪಕ ಬೆಳೆ ಹಾನಿ: ಪರಿಶೀಲನೆಗೆ ಪ್ರವಾಹದ ನೀರಿಗೆ ಇಳಿದೇ ಬಿಟ್ಟ ಶಾಸಕ ಶರಣು ಸಲಗರ!
ಡಿಸಿ ಮತ್ತು ಜಿಲ್ಲಾ ಸಿಇಒಗಳು ಪ್ರವಾಹ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ತುರ್ತು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ತಕ್ಷಣ ಜಿಲ್ಲೆಗೆ ಭೇಟಿ ನೀಡಬೇಕು. ಪರಿಸ್ಥಿತಿ ಅವಲೋಕಿಸಿ ಅಗತ್ಯ ಕ್ರಮಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆಗಳನ್ನು ನೀಡಬೇಕು ಎಂದಿದ್ದಾರೆ.
ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗಳು, ಜಲ ಸಂಪನ್ಮೂಲ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿಗಳು ಸ್ಥಳಕ್ಕೆ ಭೇಟಿ ನೀಡಬೇಕು. ಮಾನವ ಮತ್ತು ರಾಸುಗಳ, ಜಾನವಾರುಗಳ ಪ್ರಾಣ ಹಾನಿ ಆಗದಂತೆ ಎಚ್ಚರಿಕಾ ಕ್ರಮ ಕೈಗೊಳ್ಳಬೇಕು. ಸಂತ್ರಸ್ಥರಿಗೆ ಆಹಾರ ಕೇಂದ್ರಗಳು, ಜಾನವಾರುಗಳಿಗೆ ಅಗತ್ಯ ಮೇವಿನ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮಳೆ ಅಬ್ಬರ: ಮನೆಗಳಿಗೆ ನುಗ್ಗಿದ ನೀರು, ಗೋಡೆ ಕುಸಿದು ಅವಾಂತರ, ಇಲ್ಲಿವೆ ಫೋಟೋಸ್
ಇನ್ನು ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಸಮಸ್ಯೆ ಉಂಟಾಗಿದೆ. ಕೃಷ್ಣ ನದಿಗೆ ಮಹಾರಾಷ್ಟ್ರದ ಉಜನಿ ಹಾಗೂ ನೀರ ಡ್ಯಾಂನಿಂದ ಹೆಚ್ಚಿನ ಪ್ರಮಾಣದ ನೀರು ಹೊರಕ್ಕೆ ಬಿಡಲಾಗಿದೆ. ಇದರಿಂದಾಗಿ ಭೀಮಾ ನದಿ ತೀರದಲ್ಲಿ ಹಾಗೂ ಬೆಣ್ಣೆತೋರಾದಲ್ಲಿ ಪ್ರವಾಹದ ಪರಿಸ್ಥಿತಿ ಉದ್ಭವಿಸಿರುವ ಕಾರಣ ಪರಿಸ್ಥಿತಿಯ ಮೇಲೆ ತೀವ್ರ ನಿಗಾವಹಿಸಿ. ಅಗತ್ಯ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ಕೈಗೊಳ್ಳುವಂತೆ ಕಂದಾಯ ಸಚಿವ ಕೃಷ್ಣಬೈರೇಗೌಡ ಮತ್ತು ಸಿಎಸ್ ಶಾಲಿನಿ ರಜನೀಶ್ ಹಾಗೂ ಕಲಬುರಗಿ ಡಿಸಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಸೂಚನೆ ನೀಡಿದ್ದಾರೆ.
ವರದಿ: ಈರಣ್ಣ ಬಸವ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.