ಜಾತಿಗಣತಿಯಲ್ಲಿ ಭಾಗವಹಿಸದಿರುವುದು ಉತ್ತಮ: ಹಿರಿಯ ನ್ಯಾಯವಾದಿ ಬಿವಿ ಆಚಾರ್ಯ ಹೀಗೆ ಹೇಳಿದ್ದೇಕೆ?
ಕರ್ನಾಟಕದಲ್ಲಿ ನಡೆಯುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉರುಫ್ ಜಾತಿ ಗಣತಿ ಅನಗತ್ಯ. ಇದರಲ್ಲಿ ಭಾಗವಹಿಸಿದರೆ ವೈಯಕ್ತಿಕ ಮಾಹಿತಿ ದುರುಪಯೋಗವಾಗುವ ಅಪಾಯವಿದೆ. ಹೈಕೋರ್ಟ್ ಆದೇಶದಂತೆ ಇದು ಐಚ್ಛಿಕ. ಆದ್ದರಿಂದ, ಜಾತಿ ಗಣತಿಯಲ್ಲಿ ಭಾಗವಹಿಸದೆ ಇರುವುದು ಉತ್ತಮ ಎಂದು ಹಿರಿಯ ನ್ಯಾಯವಾದಿ ಬಿವಿ ಆಚಾರ್ಯ ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 28: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉರುಫ್ ಜಾತಿ ಗಣತಿಯಲ್ಲಿ (caste survey) ಭಾಗವಹಿಸುವುದು ಅನಗತ್ಯ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಸಹಾಯವಾಗುವುದಿಲ್ಲ. ಆದ್ದರಿಂದ ಜಾತಿಗಣತಿಯಲ್ಲಿ ಭಾಗವಹಿಸದೆ ಇರುವುದು ಸೂಕ್ತ. ಒಂದು ವೇಳೆ ಭಾಗವಹಿಸಿದರೆ, ವೈಯಕ್ತಿಕ ಮಾಹಿತಿಯ ದುರುಪಯೋಗ ಪಡಿಸಿಕೊಳ್ಳುವ ಅಪಾಯವಿದೆ ಎಂದು ಹಿರಿಯ ನ್ಯಾಯವಾದಿ ಬಿ.ವಿ ಆಚಾರ್ಯ (B.V. Acharya) ಅವರು ಹೇಳಿದ್ದಾರೆ. ಆ ಮೂಲಕ ಜಾತಿ ಗಣತಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಬಿವಿ ಆಚಾರ್ಯ ಹೇಳಿದ್ದಿಷ್ಟು
ಜಾತಿ ಗಣತಿಯಲ್ಲಿ ಭಾಗವಹಿಸುವ ವಿಚಾರವಾಗಿ ಹಿರಿಯ ನ್ಯಾಯವಾದಿ ಬಿವಿ ಆಚಾರ್ಯ ಹೇಳಿಕೆ ನೀಡಿದ್ದು, ಪ್ರಸ್ತುತ ರಾಜ್ಯ ಸರ್ಕಾರದ ಜಾತಿಗಣತಿಯ ಪ್ರಮುಖ ಉದ್ದೇಶವು ಹಿಂದುಳಿದ ಜಾತಿಯ ಹೆಸರುಗಳ ಪಟ್ಟಿಯ ಸಂಪೂರ್ಣತೆ. ಹಾಗಾಗಿ ಗಣತಿಯಲ್ಲಿ ಹೆಸರನ್ನು ಸೇರಿಸುವ ಅಥವಾ ತೆಗೆದುಹಾಕುವ ಮೂಲಕ ಹಿಂದುಳಿದ ಜಾತಿಯ ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಜಾತಿಗಣತಿ ವೇಳೆ ಮಾಹಿತಿ ನೀಡೋದು ಕಡ್ಡಾಯವಲ್ಲ: ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರ ಸ್ಪಷ್ಟನೆ
ಇದು ಯಾವುದೇ ರೀತಿಯಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಸಂಬಂಧಿಸಿಲ್ಲ ಅಥವಾ ಸಹಾಯವಾಗುವುದಿಲ್ಲ. ನಾವು ಭಾಗವಹಿಸಲು ಆಯ್ಕೆ ಮಾಡಿಕೊಂಡರೆ, ನಮ್ಮ ಆದಾಯ, ಆಧಾರ್ ಇತ್ಯಾದಿ ಹಲವಾರು ವೈಯಕ್ತಿಕ ಮಾಹಿತಿಯನ್ನು (60 ಪ್ರಶ್ನೆಗಳನ್ನು ಒಳಗೊಂಡ) ನೀಡಬೇಕಾಗುತ್ತದೆ ಅದು ಅನಗತ್ಯ ಮತ್ತು ಬ್ರಾಹ್ಮಣ ಸಮುದಾಯಕ್ಕೆ ಉಪಯೋಗವಾಗುವುದಿಲ್ಲ. ಆದ್ದರಿಂದ, ಜಾತಿ ಗಣತಿಯಲ್ಲಿ ಭಾಗವಹಿಸದಿರಲು ಆಯ್ಕೆ ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಜಾತಿಗಣತಿ ಸಭೆ:ಈವರೆಗೆ ಎಷ್ಟು ಸಮೀಕ್ಷೆಯಾಗಿದೆ? ಒಟ್ಟು ಎಷ್ಟು ಆಗ್ಬೇಕು? ಇಲ್ಲಿದೆ ವಿವರ
ಒಂದು ವೇಳೆ ಭಾಗವಹಿಸಿದರೆ, ವೈಯಕ್ತಿಕ ಮಾಹಿತಿ ದುರುಪಯೋಗ ಪಡಿಸಿಕೊಳ್ಳುವ ಅಪಾಯವಿದೆ ಎಂಬುವುದು ನನ್ನ ಮತ್ತು ಇತರ ಕಾನೂನು ತಜ್ಞರ ಅಭಿಪ್ರಾಯ. ಹೈಕೋರ್ಟ್ ಸ್ಪಷ್ಟವಾಗಿ ಹೇಳುವಂತೆ ಇದು ಐಚ್ಛಿಕ ಮತ್ತು ಬಂಧಮುಕ್ತ, ಯಾರನ್ನೂ ಭಾಗವಹಿಸಲು ಒತ್ತಾಯಿಸಲಾಗುವುದಿಲ್ಲ ಎಂದು ಬಿವಿ ಆಚಾರ್ಯ ತಿಳಿಸಿದ್ದಾರೆ.
ಜಾತಿಗಣತಿಗೆ ಕಾಂಗ್ರೆಸ್ ನಾಯಕರ ಬೆಂಬಲ
ಇನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಒಂದು ಕಡೆ ವಿರೋಧ ವ್ಯಕ್ತವಾದರೆ, ಇನ್ನೊಂದೆಡೆ ಕಾಂಗ್ರೆಸ್ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಹಿಂದುಳಿದ ವರ್ಗಗಳ ಸಚಿವರು, ಲೋಕಸಭಾ ಸದಸ್ಯರು, ವಿಧಾನಸಭೆಯ ಸದಸ್ಯರು, ವಿಧಾನಪರಿಷತ್ತಿನ ಸದಸ್ಯರು ಹಾಗೂ ಹಿರಿಯ ನಾಯಕರ ಸಭೆಯಲ್ಲಿ ತೆಗೆದುಕೊಂಡ ನಿರ್ಣಯದಂತೆ ವಿಭಾಗವಾರು ಸಮಿತಿಯನ್ನು ರಚನೆ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:48 pm, Sun, 28 September 25








