ಜಾತಿ ಗಣತಿ: ಸಿಎಂಗೆ ಸಿ.ಟಿ. ರವಿ ಬರೆದ ಬಹಿರಂಗ ಪತ್ರದಲ್ಲೇನಿದೆ?
ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗ್ತಿರೋ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರಿಗೆ ಸಿ.ಟಿ.ರವಿ ಬಹಿರಂಗ ಪತ್ರ ಬರೆದಿದ್ದಾರೆ. ಗಣತಿದಾರರು ಎದುರಿಸುತ್ತಿರುವ ಸಮಸ್ಯೆಗ ಬಗ್ಗೆ ಪತ್ರದಲ್ಲಿ ಉಲ್ಲೆಖಿಸಲಾಗಿದ್ದು, ಸರ್ಕಾರ ಏನು ಮಾಡಬೇಕಿತ್ತು ಮತ್ತು ಈಗ ಏನು ಮಾಡಬಹುದೆಂಬ ಹಲವು ವಿಚಾರಗಳ ಬಗ್ಗೆ ಗಮನ ಸೆಳೆದಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 27: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗ್ತಿರೋ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ವಿಚಾರವಾಗಿ ಸಿಎಂ ಸಿದ್ದರಾಮಯ್ಯನವರಿಗೆ (Siddaramaiah) ವಿಧಾನ ಪರಿಷತ್ ಬಿಜೆಪಿ ಸದ್ಯ ಸಿ.ಟಿ. ರವಿ (C.T. Ravi) ಬಹಿರಂಗ ಪತ್ರ ಬರೆದಿದ್ದಾರೆ. ಸಮೀಕ್ಷೆಯ ವೇಳೆ ಎದುರಾಗುತ್ತಿರುವ ಸವಾಲುಗಳ ಬಗ್ಗೆ ಪ್ರಸ್ತಾಪಿಸಿರುವ ಅವರು, ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಸಿಎಂಗೆ ಬರೆಯಲಾದ ಪತ್ರದಲ್ಲಿ ಏನಿದೆ?
ಈಗಾಗಲೇ ಹೆಚ್ಚುವರಿ ಜವಾಬ್ದಾರಿಯಿಂದ ಬಳಲಿರುವ ಶಿಕ್ಷಕರು ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಿಂದಾಗಿ ಇನ್ನಷ್ಟು ಸವಾಲುಗಳನ್ನ ಎದುರಿಸುತ್ತಿದ್ದಾರೆ. ಕೆಲವೆಡೆ ಗಣತಿದಾರರಿಗೆ ಸ್ಥಳ ನಿಯುಕ್ತಿ ಸೇರಿದಂತೆ ಸಮೀಕ್ಷೆಯ ಮಾಹಿತಿ ಸಂಗ್ರಹಕ್ಕೆ ನೀಡಿರುವ ಅಪ್ಲಿಕೇಷನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಗುಡ್ಡಗಾಡು ಪ್ರದೇಶಗಳಲ್ಲಿ ನೆಟ್ವರ್ಕ್ ಸರಿಯಾಗಿ ಸಿಗದ ಕಾರಣ ಸಮಸ್ಯೆ ಆಗುತ್ತಿದೆ. ಸಮೀಕ್ಷೆಗೆ ಪೂರ್ವ ತಯಾರಿ ಮತ್ತು ತಾಂತ್ರಿಕ ವ್ಯವಸ್ಥೆ ರೂಪಿಸುವಲ್ಲಿ ವಿಫಲವಾದ ಶಂಕೆ ವ್ಯಕ್ತವಾಗ್ತಿದ್ದು, ಪ್ರಾಯೋಗಿಕವಾಗಿ ಟ್ರಯಲ್ ನಡೆಸಿಯೇ ಸಮೀಕ್ಷೆಕಾರ್ಯ ವಿಸ್ತರಿಸಬೇಕಿತ್ತು ಎಂದು ಸಿ.ಟಿ. ರವಿ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಬೆಂಗಳೂರು-ಮುಂಬೈ ಸೂಪರ್ ಫಾಸ್ಟ್ ರೈಲು ಘೋಷಣೆ: ಕರ್ನಾಟಕ ಜನತೆಗೆ ಗುಡ್ ನ್ಯೂಸ್ ಕೊಟ್ಟ ತೇಜಸ್ವಿ ಸೂರ್ಯ
ಸಮೀಕ್ಷೆಯಲ್ಲಿ ಮನೆಗಳ ನಿಖರವಾದ ಸರಣಿ ಜೋಡಣೆ ಮಾಡದಿರುವುದು ಗಣತಿದಾರರಿಗೆ ಸಮಸ್ಯೆಯಾಗ್ತಿದೆ. ಒಂದೇ ಮನೆಯನ್ನ ಎರಡು ಬಾರಿ ದಾಖಲು ಮಾಡುವ ಪರಿಸ್ಥಿತಿಯೂ ಇದ್ದು, ಕೆಲವೊಮ್ಮೆ ಮನೆಗಳು ಗಣತಿಯಿಂದ ತಪ್ಪಿ ಹೋಗುವ ಸಾಧ್ಯತೆಯೂ ಇದೆ. ಮನೆ ಗುರುತಿಸಲು ನೀಡಲಾಗಿರುವ ಯು.ಎಚ್.ಐ.ಡಿ. ಸಂಖ್ಯೆಯ ಮೂಲಕ ಮಾಹಿತಿ ಹುಡುಕುವಲ್ಲಿಯೂ ತಾಂತ್ರಿಕ ದೋಷ ಕಂಡುಬರುತ್ತಿದೆ. ಇದು ಗಣತಿದಾರರ ಸಮಯ ಮತ್ತು ಶ್ರಮದ ವ್ಯರ್ಥಕ್ಕೆ ಕಾರಣವಾಗಿದೆ. ಗಣತಿದಾರರು ಹಾಗೂ ಸಮೀಕ್ಷೆಯ ಮಾಹಿತಿದಾರರಿಗೆ ನೀಡಲಾಗುವ OTP ಸರಿಯಾಗಿ ಬಾರದೇ ಇರುವುದರಿಂದ ಪ್ರಕ್ರಿಯೆಗೆ ಸಮಸ್ಯೆ ಆಗುತ್ತಿದೆ. ಆಧಾರ್ ದೃಢೀಕರಣಕ್ಕೂ ಇದೇ ಸಮಸ್ಯೆ ಆಗುತ್ತಿದೆ ಎಂಬ ವಿಷಯವನ್ನೂ ಪತ್ರದಲ್ಲಿ ಸಿ.ಟಿ. ರವಿ ಉಲ್ಲೇಖಿಸಿದ್ದಾರೆ.
ಇನ್ನು ಪ್ರತಿಯೊಂದು ಮನೆಯ ಸಮೀಕ್ಷೆಗೆ 60 ಪ್ರಶ್ನೆಗಳನ್ನ ಕಡ್ಡಾಯಗೊಳಿಸಿರುವುದು ಗಣತಿದಾರರ ಮೇಲೆ ಹೊರೆಯಾಗಿ ಮಾರ್ಪಟ್ಟಿದೆ. ಮಾಹಿತಿದಾರರಿಗೂ ಬೇಸರ ತರಿಸುತ್ತಿದೆ. ಸಮೀಕ್ಷೆಗೆ ಸಂಬಂಧಿಸಿ ಮನೆಗಳ ವಿಳಾಸ ಪಟ್ಟಿ ನೀಡದ ಕಾರಣ ಮತ್ತು ಸದಸ್ಯರ ಹೆಸರು ಸೇರ್ಪಡೆ, ತೆಗೆದುಹಾಕುವ ಆಯ್ಕೆಯ ಕೊರತೆ ಇರೋದು ಗೊಂದಲ ಹೆಚ್ಚಿಸಿದೆ. ಗಣತಿದಾರರ ಕೆಲಸವನ್ನ ಅವರ ಕಾರ್ಯಸ್ಥಳಕ್ಕಿಂತ ದೂರದ ಪ್ರದೇಶಗಳಿಗೆ ಹಂಚಿರೋದು ಕೂಡ ಸಮಸ್ಯೆಯಾಗಿದೆ ಎಂದು ಪತ್ರದಲ್ಲಿ ಗಮನ ಸೆಳೆಯಲಾಗಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಮಾಹಿತಿ ತುಂಬಿದ ಬಳಿಕವೂ ‘Upload Not Successful’ ಎಂದು ತೋರಿಸುತ್ತಿರೋದು ಗಣತಿದಾರರ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ ಒಂದೇ ದಿನ ಹಲವು ಗಂಟೆಗಳ ಕಾಲ ಮೊಬೈಲ್ ಬಳಸಿ ಮಾಹಿತಿ ದಾಖಲಿಸುವುದು ಶಿಕ್ಷಕರ ಕಣ್ಣಿನ ತೊಂದರೆ ಹಾಗೂ ಮಾನಸಿಕ ಒತ್ತಡಕ್ಕೆ ಕಾರಣವಾಗ್ತಿದೆ. ದೈಹಿಕ ನ್ಯೂನ್ಯತೆ ಹೊಂದಿರುವ ಮತ್ತು ಅನಾರೋಗ್ಯ ಪೀಡಿತ ಶಿಕ್ಷಕರಿಗೆ ಇದು ಕಷ್ಟವಾಗಿ ಮಾರ್ಪಟ್ಟಿದೆ. ಒಬ್ಬಂಟಿ ಮಹಿಳಾ ಶಿಕ್ಷಕರು ಸಮೀಕ್ಷೆಗೆ ತೆರಳುವಾಗ ಅವರ ಸುರಕ್ಷತೆಯ ಪ್ರಶ್ನೆಯೂ ಉದ್ಭವಿಸಿದೆ ಎಂದು ಸಿ.ಟಿ. ರವಿ ಆರೋಪಿಸಿದ್ದಾರೆ.
ಸಿ.ಟಿ.ರವಿ ಆಗ್ರಹವೇನು?
ಸಮೀಕ್ಷೆಯ ಉದ್ದೇಶ ಏನೇ ಇದ್ದರೂ ಅದರ ಕಾರ್ಯವಿಧಾನದಲ್ಲಿರುವ ದೋಷಗಳು ಗಣತಿದಾರರನ್ನ ಹತಾಶೆಗೊಳಿಸುತ್ತಿವೆ. ಹೀಗಾಗಿ ಪ್ರತಿದಿನದ ಸಮೀಕ್ಷಾ ಕೆಲಸಕ್ಕೆ ಗಣತಿದಾರರು ಮಿತಿಗೆ ಆಗ್ರಹಿಸಿದ್ದು, ದಿನಕ್ಕೆ 8-10 ಮನೆಗಳ ಸಮೀಕ್ಷೆಯ ಗುರಿಯನ್ನಷ್ಟೇ ಅವರಿಗೆ ನೀಡಬೇಕಿದೆ. ಆನ್ ಲೈನ್ ಬದಲು ಪ್ರಶ್ನಾವಳಿಯನ್ನ ಕೈಯಾರೆ ಭರ್ತಿಮಾಡುವ ಅವಕಾಶವನ್ನ ಸರ್ಕಾರ ಕಲ್ಪಿಸಬೇಕು. ಮಾನ್ಯ ಮುಖ್ಯಮಂತ್ರಿಗಳೇ ಗಣತಿದಾರರಿಗೆ ಮತ್ತು ಅವರ ಮೇಲಿನ ಅಧಿಕಾರಿಗಳಿಗೆ ಗಣತಿ ಪೂರ್ತಿಗೊಳಿಸಲು ಬೆದರಿಕೆ ಮಾತ್ರ ಹಾಕಲಾಗ್ತಿದೆ. ಆದರೆ ಅವರ ಸಮಸ್ಯೆ ಕೇಳಿ ಪರಿಹರಿಸುವ ಕೆಲಸ ಆಗುತ್ತಿಲ್ಲ. ಹೀಗಾಗಿ ಆ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಬಹಿರಂಗ ಪತ್ರದಲ್ಲಿ ಸಿ.ಟಿ. ರವಿ ಆಗ್ರಹಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 1:33 pm, Sat, 27 September 25




