ವಿಜಯಪುರ, ಏ.12: ಬಿಸಿಲಿನ ಬೇಗೆಗೆ ಬಸವಳಿದ ರಾಜ್ಯದ ಜನತೆಗೆ ವರುಣದೇವ(Rain) ತಂಪೆರೆದಿದ್ದಾನೆ. ಇಂದು(ಏ.12) ಸಮುದ್ರ ಮಟ್ಟದಿಂದ ಸುಳಿಗಾಳಿ ಹಿನ್ನಲೆ ಬಾಗಲಕೋಟೆ, ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ಗದಗ, ಹಾವೇರಿ ಹಾಗೂ ಶಿವಮೊಗ್ಗ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿತ್ತು. ಅದರಂತೆ ಈ ಕೆಳಗಿನ ಜಿಲ್ಲೆಗಳಲ್ಲಿ ಮಳೆಯಾಗಿದೆ.
ವಿಜಯಪುರ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಳೆಯಾಗಿದ್ದು, ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ಸಿಡಿಲು ಬಡಿದು ಓರ್ವ ಮಹಿಳೆ ಅಸುನಿಗಿದ್ದಾರೆ. ತಾಂಬಾ ಗ್ರಾಮದ ನಿವಾಸಿ ಭಾರತಿ ಕೆಂಗನಾಳ(40) ಮೃತ ರ್ದುದೈವಿ. ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಈ ಕುರಿತು ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ನಿನ್ನೆಯಷ್ಟೇ ತಾಲೂಕಿನಲ್ಲಿ 16 ವರ್ಷದ ಬಾಲಕ ಸಿಡಿಲು ಬಡಿದು ಕೊನೆಯುಸಿರೆಳೆದಿದ್ದ. ಇದರ ಬೆನ್ನಲ್ಲೆ ಇದೀಗ ಮತ್ತೊಂದು ದುರಂತ ಸಂಭವಿಸಿದೆ.
ಇದನ್ನೂ ಓದಿ:ದಾವಣಗೆರೆ, ವಿಜಯಪುರ ಮತ್ತು ಬೆಳಗಾವಿ ನಂತರ ಮಲೆನಾಡು ಚಿಕ್ಕಮಗಳೂರಲ್ಲೂ ಮಳೆ! ಜನರಲ್ಲಿ ಹರ್ಷೋಲ್ಲಾಸ
ಧಾರವಾಡ: ಮಳೆ ಅಬ್ಬರಕ್ಕೆ 10 ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಜಿಲ್ಲೆಯ ಕಲಘಟಗಿ ತಾಲೂಕಿನ ಸುಳಿಕಟ್ಟಿಯಲ್ಲಿ ನಡೆದಿದೆ. ಶಿರಸಿ ಕಾವಲವಾಡ ಮಧ್ಯೆ ಇರುವ ಮೇನ್ ವಿದ್ಯುತ್ ಲೈನ್ ಕಂಬಗಳು ಇದಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.
ದಾವಣಗೆರೆ: ಜಿಲ್ಲೆಯ ಜನ ಅಕ್ಷರಶಃ ಬಿಸಿಲಿನ ಬೇಗೆಗೆ ತತ್ತರಿಸಿದ್ದರು. ಇಂದು ದಿಢೀರ್ ವರುಣನ ಆಗಮನಕ್ಕೆ ಜನ ಸಂತಸದಲ್ಲಿ ತೇಲಿದ್ದಾರೆ. ಹೌದು, ತಾಲೂಕಿನ ಹೆಬ್ಬಾಳ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಿರುಗಾಳಿ ಸಹಿತ ಮಳೆ ಆಗಿದ್ದು, ಗಾಳಿಗೆ ಮನೆಯ ಹೆಂಚುಗಳು ಹಾರಿ ಹೋಗಿವೆ. ಬಿಸಿಲ ದಗೆಯಿಂದ ಕಂಗೆಟ್ಟಿದ್ದ ರೈತರಲ್ಲಿ, ಸುರಿದ ಅಲ್ಪ ಸ್ವಲ್ಪಮಳೆಗೆ ಮುಖದಲ್ಲಿಮಂದಹಾಸ ಮೂಡಿದೆ.
ಇದನ್ನೂ ಓದಿ:ದಾವಣಗೆರೆಯಲ್ಲಿ ಜೋರುಗಾಳಿ ಸಹಿತ ಮಳೆ, ಸುಡು ಬಿಸಿಲಿನಿಂದ ಕಂಗೆಟ್ಟಿದ್ದ ಜನ ಕೊಂಚ ನಿರಾಳ
ಬೆಳಗಾವಿ: ಕುಂದಾನಗರಿ ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ. ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು ಸಹಿತ ಸುರಿದ ಮಳೆ ಸುರಿದಿದ್ದು, ನಗರದ ಭೋವಿ ಗಲ್ಲಿಯಲ್ಲಿ ಮಳೆ ನೀರು ಮಳಿಗೆಗಳಿಗೆ ನುಗ್ಗಿದೆ. ಇದರಿಂದ ಮಳೆ ನೀರು ಮಳಿಗೆಗಳ ಒಳಗೆ ಹೋಗದಂತೆ ತಡೆಯಲು ಹರಸಾಹಸ ಪಡುವಂತಾಗಿದೆ. ಇನ್ನು ದಿಢೀರ್ ಮಳೆಯಿಂದ ವಾಹನ ಸವಾರರು ಕಂಗಾಲಾಗಿದ್ದಾರೆ.
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ತಾಲೂಕಿನ ಖಾಂಡ್ಯ, ಸಂಗಮೇಶ್ವರ ಪೇಟೆ, ಜೇನುಗದ್ದೆ, ಶಿರಗೋಳ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಶಿರಗೋಳದಲ್ಲಿ ರಸ್ತೆಗೆ ಬೃಹತ್ ಅರಳಿ ಮರ ಬಿದ್ದಿದೆ. ಗಾಳಿಸಹಿತ ಭಾರಿ ಮಳೆ ಹಿನ್ನೆಲೆ ಕೆಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತವಾಗಿದೆ. ಜೊತೆಗೆ ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿಯೂ ಮಳೆಯ ಆರ್ಭಟ ಜೋರಾಗಿದ್ದು, ತೀರ್ಥಹಳ್ಳಿ ತಾಲೂಕಿನ ಹಲವೆಡೆಯಲ್ಲಿ ಕಳೆದ ಅರ್ಧ ಗಂಟೆಯಿಂದ ತೀರ್ಥಹಳ್ಳಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ.
ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣ ಸೇರಿ ತಾಲೂಕಿನ ಹಲವೆಡೆ ಮಳೆಯಾಗಿದ್ದು, ಬೇಸಿಗೆ ಬಿಸಿಲಿನಿಂದ ಬಸವಳದಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ.ಅರ್ದಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಇಳೆ ತಂಪಾಗಿದೆ. ಇತ್ತ ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲೂ ಸತತ ಹದಿನೈದು ನಿಮಿಷ ಧಾರಾಕಾರ ಮಳೆ ಸುರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ