ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ವಿವಿಧೆಡೆ ಮಳೆ ಆರ್ಭಟ: ಉರುಳಿದ ಮರಗಳು, ವಿದ್ಯುತ್ ಕಡಿತ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 01, 2022 | 10:46 AM

ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಆರ್ಭಟಿಸಿದೆ. ಆದರೆ ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದ್ದು ಬಿಸಿಗಾಳಿ ಬೀಸುವ ಆತಂಕ ಎದುರಾಗಿದೆ.

ಮೈಸೂರು, ಮಂಡ್ಯ, ತುಮಕೂರು ಸೇರಿದಂತೆ ವಿವಿಧೆಡೆ ಮಳೆ ಆರ್ಭಟ: ಉರುಳಿದ ಮರಗಳು, ವಿದ್ಯುತ್ ಕಡಿತ
ಶ್ರೀರಂಗಪಟ್ಟಣದಲ್ಲಿ ಉರುಳಿರುವ ವಿದ್ಯುತ್ ಕಂಬಗಳು
Follow us on

ಬೆಂಗಳೂರು: ಸಾಂಸ್ಕೃತಿಕ ನಗರಿ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆ ಆರ್ಭಟಿಸಿದೆ. ಆದರೆ ರಾಜ್ಯದ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿದಿದ್ದು ಬಿಸಿಗಾಳಿ ಬೀಸುವ ಆತಂಕ ಎದುರಾಗಿದೆ. ಬೆಂಗಳೂರು ಸೇರಿದಂತೆ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಕೊಡಗಿನಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಬೆಂಗಳೂರು ನಗರ, ಕೋಲಾರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಕೂಡ ಮಳೆಯ ಮುನ್ಸೂಚನೆ ನೀಡಲಾಗಿದೆ.

ಮಳೆಗೆ ಸಂಬಂಧಿಸಿದ ಇನ್ನಷ್ಟು ಮಾಹಿತಿ ಇಲ್ಲಿ ಕ್ಲಿಕ್ ಮಾಡಿ

ಜನಜೀವನ ತತ್ತರ

ಮೈಸೂರು: ಗುಡುಗು, ಸಿಡಿಲು ಸಹಿತ ಸುರಿದ ಮಳೆಗೆ ಮೈಸೂರು ಜನರು ತತ್ತರಿಸಿದ್ದಾರೆ. ನಿನ್ನೆ (ಏಪ್ರಿಲ್ 30) ರಾತ್ರಿ ಸುರಿದ ಧಾರಾಕಾರ ಮಳೆ ಮಳೆ ಮತ್ತು ಗಾಳಿಯಿಂದ ಗಾಯತ್ರಿ ಥಿಯೇಟರ್ ಬಳಿ ಬೃಹತ್ ಮರವೊಂದು ನೆಲಕ್ಕುರುಳಿತು. ಚಾಮರಾಜ ಜೋಡಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಮರ ಬಿದ್ದ ರಭಸಕ್ಕೆ ಕಾರೊಂದು ಜಖಂ ಆದರೆ, ವಿದ್ಯುತ್ ಕಂಬ ಮುರಿದುಬಿತ್ತು. ಪಾಲಿಕೆ ಸಿಬ್ಬಂದಿಯು ಮುಂಜಾನೆಯಿಂದಲೇ ಮರವನ್ನು ತೆರವುಗೊಳಿಸುವ ಕಾರ್ಯ ಆರಂಭಿಸಿದರು. ಪ್ರಸ್ತುತ ಚಾಮರಾಜ ಜೋಡಿ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

ಸುಮಾರು 150 ವರ್ಷ ಹಳೆಯದಾದ ಮರ ಉರುಳಿ ಬೀಳಲು ಪಾಲಿಕೆ ಅಧಿಕಾರಿಗಳೇ ಕಾರಣ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ಮರದ ಬುಡದ ಬಳಿಯೇ ಮೋರಿ ಕಾಮಗಾರಿ ನಡೆಸಿದರು. ಈ ಕಾಮಗಾರಿಯ ವೇಳೆ ಬೇರುಗಳಿಗೆ ಹಾನಿಯಾಯಿತು. ಕಾಮಗಾರಿ ಮಾಡುವಾಗಲೇ ಅನಾಹುತವಾಗುವ ಅಪಾಯದ ಬಗ್ಗೆ ಜನರು ತಿಳಿಸಿದ್ದರು. ಆದರೂ ಜನರ ಮಾತು ಕೇಳದೆ ಅಧಿಕಾರಿಗಳು ಕಾಮಗಾರಿ ನಿರ್ವಹಿಸಿದ್ದರು. ಅನಾಹುತಕ್ಕೆ ಕಾರಣದಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಜನರು ಒತ್ತಾಯಿಸಿದರು.

ಶ್ರೀರಂಗಪಟ್ಟಣ: ನೆಲಕ್ಕುರುಳಿದ ವಿದ್ಯುತ್ ಕಂಬ

ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಪಂಪ್​ಹೌಸ್​ ರಸ್ತೆಯಲ್ಲಿ ನಡೆದಿದೆ. ವಿದ್ಯುತ್ ಕಂಬದ ಮೇಲೆ ಮರವೊಂದು ಉರುಳಿ ಬಿದ್ದ ಪರಿಣಾಮ ತಂತಿಗಳೊಂದಿಗೆ ಬೆಸೆದುಕೊಂಡಿದ್ದ ಹಲವು ಕಂಬಗಳು ಉರುಳಿದವು. ಅದೃಷ್ಟಾವಶಾತ್ ಘಟನೆಯಲ್ಲಿ ಯಾರಿಗೂ ಜೀವಹಾನಿಯಾಗಿಲ್ಲ. ಆದಷ್ಟು ಬೇಗ ವಿದ್ಯುತ್​ ಕಂಬಗಳನ್ನು ಸರಿಪಡಿಸಬೇಕು ಎಂದು ಸ್ಥಳೀಯರ ಆಗ್ರಹಿಸಿದ್ದಾರೆ.

ಈ ವೇಳೆ ಬಸ್ ಮೇಲೆಯೂ ವಿದ್ಯುತ್ ತಂತಿಯೊಂದು ತುಂಡಾಗಿ ಬಿದ್ದಿತ್ತು. ಈ ವೇಳೆ ಬಸ್​ನಲ್ಲಿ 9 ಪ್ರಯಾಣಿಕರಿದ್ದರು. ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಲಿಲ್ಲ. ತಕ್ಷಣ ಪ್ರಯಾಣಿಕರು ಬಸ್​ನಿಂದ ಕೆಳಗೆ ಇಳಿದರು. ತಂತಿ ತುಂಡಾಗುವ ಮೊದಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತೆ ಆಗಿದೆ.

ಕೊರಟಗೆರೆ ತಾಲ್ಲೂಕಿನಲ್ಲಿ ಧರೆಗುರುಳಿದ ಮರಗಳು

ತುಮಕೂರು ಜಿಲ್ಲೆಯ ಕೊರಟಗೆರೆ ಮತ್ತು ಮಧುಗಿರಿ ತಾಲ್ಲೂಕಿನ ಹಲವೆಡೆ ತಡರಾತ್ರಿ ಧಾರಾಕಾರ ಮಳೆಯಾಗಿದೆ. ಬಿರುಗಾಳಿ ಸಹಿತ ಮಳೆಯಿಂದಾಗಿ ಹತ್ತಾರು ಮರಗಳು ಧರೆಗುರುಳಿದವು. ಗೊಡ್ರಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ 15 ಮನೆಗಳಿಗೆ ಹಾನಿಯಾಗಿದೆ. ಬಿರುಗಾಳಿಗೆ ಹಲವು ಮನೆಗಳ ಚಾವಣಿಗಳು ಹಾರಿಹೋಗಿದ್ದರೆ, ಮರಗಳು ಬಿದ್ದು ಹಲವು ಮನೆಗಳು ಜಖಂಗೊಂಡಿವೆ.

ಇದನ್ನೂ ಓದಿ: Karnataka Weather Today: ಕರಾವಳಿಯಲ್ಲಿ ಇಂದು ಗುಡುಗು ಸಹಿತ ಮಳೆ; ಉತ್ತರ ಕರ್ನಾಟಕದಲ್ಲಿ ತೀವ್ರ ಬಿಸಿ ಗಾಳಿಯ ಎಚ್ಚರಿಕೆ

ಇದನ್ನೂ ಓದಿ: Karnataka Rain: ಮೇ 1ರವರೆಗೆ ಕರ್ನಾಟಕದಲ್ಲಿ ಮಳೆ ಸಾಧ್ಯತೆ; ಹಲವು ರಾಜ್ಯಗಳಲ್ಲಿ ಉಷ್ಣ ಅಲೆಯ ಆತಂಕ