ಕಾವೇರಿ ಜಲಾನಯನ ಪ್ರದೇಶದ ತಾಲೂಕುಗಳಲ್ಲಿ ಭಾರಿ ಮಳೆ ಕೊರತೆ; ಇಲ್ಲಿದೆ ವಿವರ

Rain Deficit in Cauvery dependent taluks of Karnataka; ಅಂಕಿಅಂಶಗಳ ಪ್ರಕಾರ, ಕೊಡಗು ಜಿಲ್ಲೆಯ ಎರಡು ತಾಲ್ಲೂಕುಗಳು ಸೇರಿದಂತೆ ರಾಜ್ಯದ ನಾಲ್ಕು ತಾಲ್ಲೂಕುಗಳಲ್ಲಿ ಜೂನ್ 1 ಮತ್ತು ಸೆಪ್ಟೆಂಬರ್ 27 ರ ನಡುವೆ ಶೇ 50 ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ.

ಕಾವೇರಿ ಜಲಾನಯನ ಪ್ರದೇಶದ ತಾಲೂಕುಗಳಲ್ಲಿ ಭಾರಿ ಮಳೆ ಕೊರತೆ; ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ

Updated on: Sep 28, 2023 | 4:24 PM

ಮೈಸೂರು, ಸೆಪ್ಟೆಂಬರ್ 28: ತಮಿಳುನಾಡಿಗೆ ಕಾವೇರಿ ನೀರು (Cauvery Water) ಬಿಡುವುದನ್ನು ವಿರೋಧಿಸಿ ಕರ್ನಾಟಕದ ಹಲವೆಡೆ ಪ್ರತಿಭಟನೆಗಳು ತೀವ್ರಗೊಂಡಿದ್ದು, ಶುಕ್ರವಾರ ಕರ್ನಾಟಕ ಬಂದ್​ಗೆ (Karnataka Bandh) ವಿವಿಧ ಸಂಘಟನೆಗಳು ಕರೆ ನೀಡಿವೆ. ಈ ಮಧ್ಯೆ, ಕಾವೇರಿ ಹಾಗೂ ಅದರ ಉಪನದಿಗಳನ್ನು ಅವಲಂಬಿಸಿರುವ ಜಿಲ್ಲೆಗಳು ತೀವ್ರ ಮಳೆ ಕೊರತೆ ಎದುರಿಸುತ್ತಿವುದು ಅಂಕಿಅಂಶಗಳಿಂದ ತಿಳಿದುಬಂದಿದೆ. ನೈಋತ್ಯ ಮಾನ್ಸೂನ್ ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಇದ್ದು, ಈ ಜಿಲ್ಲೆಗಳು ಶೇ 35 ಕ್ಕಿಂತ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವುದು ತಿಳಿದುಬಂದಿದೆ.

ಅಂಕಿಅಂಶಗಳ ಪ್ರಕಾರ, ಕೊಡಗು ಜಿಲ್ಲೆಯ ಎರಡು ತಾಲ್ಲೂಕುಗಳು ಸೇರಿದಂತೆ ರಾಜ್ಯದ ನಾಲ್ಕು ತಾಲ್ಲೂಕುಗಳಲ್ಲಿ ಜೂನ್ 1 ಮತ್ತು ಸೆಪ್ಟೆಂಬರ್ 27 ರ ನಡುವೆ ಶೇ 50 ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ. ಇದೇ ವೇಳೆ, ರಾಜ್ಯ ಕೃಷಿ ಇಲಾಖೆ ಅಧಿಕಾರಿಗಳು ಹಂಚಿಕೊಂಡಿರುವ ಸೆಪ್ಟೆಂಬರ್ 22 ರವರೆಗಿನ ಅಂಕಿಅಂಶಗಳು, ಬರಗಾಲದ ನಡುವೆಯೂ ಬಿತ್ತನೆ ಚಟುವಟಿಕೆಗಳು ಉತ್ತಮವಾಗಿವೆ ಎಂಬುದನ್ನು ಸೂಚಿಸಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಂಕಿಅಂಶಗಳ ಪ್ರಕಾರ, ಜೂನ್ 1 ಮತ್ತು ಸೆಪ್ಟೆಂಬರ್ 27 ರ ನಡುವೆ ಕೊಡಗಿನಲ್ಲಿ ಶೇ -42 ಮಳೆ ದಾಖಲಾಗಿದೆ. ಇದು ಬಳ್ಳಾರಿ (ಶೇ -48) ಜಿಲ್ಲೆಯ ನಂತರ ಅತಿಹೆಚ್ಚು ಮಳೆ ಕೊರತೆ ದಾಖಲಿಸಿದ ಜಿಲ್ಲೆಯಾಗಿದೆ. ವಿರಾಜಪೇಟೆ ತಾಲ್ಲೂಕು (-59%) ಮತ್ತು ಪೊನ್ನಂಪೇಟೆ (-50%) ಕೊಡಗಿನಲ್ಲಿ ಹೆಚ್ಚು ಮಳೆ ಕೊರತೆ ಎದುರಿಸುತ್ತಿರುವ ತಾಲ್ಲೂಕುಗಳಾಗಿವೆ. ಇವುಗಳಿಗಿಂತಲೂ ಹೆಚ್ಚು ಮಳೆ ಕೊರತೆಯನ್ನು ಬಳ್ಳಾರಿ ಜಿಲ್ಲೆಯ ಬಳ್ಳಾರಿ ಮತ್ತು ಸಂಡೂರು ತಾಲ್ಲೂಕುಗಳು ಎದುರಿಸುತ್ತಿವೆ. ಕಾವೇರಿಯ ಉಪನದಿ ಹೇಮಾವತಿ ಹರಿಯುವ ಚಿಕ್ಕಮಗಳೂರಿನ ಮೂಡಿಗೆರೆ ಜಿಲ್ಲೆಯಲ್ಲಿ ಶೇ -30 ಮಳೆ ದಾಖಲಾಗಿದೆ.

ಇದನ್ನೂ ಓದಿ: Karnataka Bandh: ನಾಳೆ ಕರ್ನಾಟಕ ಬಂದ್ ವೇಳೆ ಏನಿರುತ್ತೆ? ಏನಿಲ್ಲ? ಇಲ್ಲಿದೆ ವಿವರ

ಮಲೆನಾಡು ಜಿಲ್ಲೆಗಳಾದ ಕೊಡಗು (-42%), ಚಿಕ್ಕಮಗಳೂರು (-39%), ಮತ್ತು ಶಿವಮೊಗ್ಗ (-38%), ಮುಂಗಾರು ಅವಧಿಯಲ್ಲಿ ತೀವ್ರ ಮಳೆ ಕೊರತೆ ಎದುರಿಸಿವೆ. ಕಾವೇರಿ ಮತ್ತು ಅದರ ಉಪನದಿಗಳ ನೀರನ್ನು ಅವಲಂಬಿಸಿರುವ ಜಿಲ್ಲೆಗಳು, ಅಂದರೆ, ಹಾಸನ (-28%), ಮೈಸೂರು (-23%), ಮಂಡ್ಯ (-18%), ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ -17% ಮಳೆ ಕೊರತೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಂಕಿಅಂಶಗಳನ್ನು ಉಲ್ಲೇಖಿಸಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ರಾಜ್ಯ ಕೃಷಿ ಇಲಾಖೆಯ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 22 ರವರೆಗೆ, ನೈಋತ್ಯ ಮುಂಗಾರು ಅವಧಿಯಲ್ಲಿ ಶೇ 89ರ ಬಿತ್ತನೆ ಗುರಿ ಸಾಧಿಸಲಾಗಿದೆ. ಇದು ಶೇ 91ರ ನೀರಾವರಿ ಕೃಷಿ ಭೂಮಿಯನ್ನು ಒಳಗೊಂಡಿದೆ. ಹಾಸನದಲ್ಲಿ ಶೇ 98, ಶಿವಮೊಗ್ಗ ಶೇ 92, ಚಿಕ್ಕಮಗಳೂರು ಶೇ 84, ಮೈಸೂರು ಶೇ 80, ಮಂಡ್ಯ ಶೇ 78, ಚಾಮರಾಜನಗರ ಶೇ 72, ಕೊಡಗಿನಲ್ಲಿ ಶೇ 69ರಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ ಎಂದು ವರದಿ ತಿಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us