ಕೊಡಗು: ರಾಜ್ಯದಲ್ಲಿ ಹಲವೆಡೆ ಭಾರಿ ಮಳೆ (Heavy Rain) ಮುಂದುವರಿದಿದ್ದು, ಜನ ಜೀವನ ಅಸ್ತವ್ಯಸ್ಥವಾಗಿದೆ. ಕೊಡಗಿನಾದ್ಯಂತ ಧಾರಕಾರ ಮಳೆ ಸುರಿಯುತ್ತಿರುವ ಹಿನ್ನೆಲೆ ಇಂದು ಕೂಡಾ ಶಾಲಾ- ಕಾಲೇಜುಗಳಿಗೆ (Schools And Colleges) ರಜೆ ಘೋಷಣೆ ಮಾಡಲಾಗಿದೆ. ರಜೆ ಘೋಷಿಸಿ ಡಿಸಿ ಡಾ ಬಿಸಿ ಸತೀಶ್ ಆದೇಶ ಹೊರಡಿಸಿದ್ದಾರೆ. ಇನ್ನು ಮಡಿಕೇರಿ ತಾಲೂಕಿನ ಕೊಯನಾಡು ಬಳಿ ಪಯಸ್ವಿನಿ ನದಿಗೆ ಕಟ್ಟಲಾಗಿರುವ ಕಿಂಡಿ ಅಣೆಕಟ್ಟಿನ ತಡೆಗೋಡೆಗೆ ಹಾನಿಯಾಗಿದ್ದು, ತಡೆಗೋಡೆ ಕುಸಿದು ಬೀಳುವ ಆತಂಕ ಶುರುವಾಗಿದೆ.
ಉಡುಪಿಯಲ್ಲಿ ಇಂದು ಭಾರಿ ಮಳೆಯಾಗುವ ಎಚ್ಚರಿಕೆಯಿದ್ದು, ಜಿಲ್ಲೆಯಾದ್ಯಂತ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಜೊತೆಗೆ ಜಿಲ್ಲಾಡಳಿತ ಈಗಾಗಲೇ ಶಾಲಾ-ಕಾಲೇಜಿಗೆ ರಜೆ ನೀಡಿದೆ. ಜಿಲ್ಲೆಯಲ್ಲಿ ಕಳೆದ 1 ವಾರದಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ.
ಗುಡ್ಡ ಕುಸಿತ:
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಕಾರವಾರ ನಗರ ಹೊರವಲಯದ ಬಿಣಗಾ ಬಳಿ ಗೋವಾ-ಮಹಾರಾಷ್ಟ್ರ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ಈ ಹಿನ್ನೆಲೆ ಹಿನ್ನೆಲೆ ಸಂಚಾರ ಅಸ್ತವ್ಯಸ್ತವಾಗಿದೆ. ಸದ್ಯ ರಸ್ತೆಯಲ್ಲಿ ಬಿದ್ದ ಮಣ್ಣನ್ನು ಜಿಲ್ಲಾಡಳಿತ ತೆರವುಗೊಳಿಸುತ್ತಿದೆ.
ಕೆಆರ್‌ಎಸ್ ಡ್ಯಾಂ ಒಳ ಹರಿವು ಪ್ರಮಾಣ ಹೆಚ್ಚಳ:
ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡ್ಯಾಂ ಒಳ ಹರಿವು ಪ್ರಮಾಣ ಹೆಚ್ಚಳವಾಗಿದೆ. ಡ್ಯಾಂ ಭರ್ತಿಗೆ ಕೇವಲ 3 ಅಡಿ ಮಾತ್ರ ಬಾಕಿ ಇದೆ. ಇನ್ನೂ ಮೂರು ದಿನದಲ್ಲಿ ಡ್ಯಾಂ ಭರ್ತಿಯಾಗುವ ಸಾಧ್ಯತೆಯಿದೆ. 124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 121.42 ಅಡಿ ನೀರು ಭರ್ತಿಯಾಗಿದೆ. ಒಳ ಹರಿವಿನ ಪ್ರಮಾಣ 34.304 ಕ್ಯೂಸೆಕ್ ಇದ್ದರೆ, ಹೊರ ಹರಿವಿನ ಪ್ರಮಾಣ 3,307 ಕ್ಯೂಸೆಕ್ ಇದೆ.
ಚಿಕ್ಕಮಗಳೂರಿನಲ್ಲಿ ಕಿರು ಸೇತುವೆ ಕುಸಿತ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಮಣಬೂರಿನಲ್ಲಿದ್ದ ಕಿರು ಸೇತುವೆ ಕುಸಿದಿದೆ. ರಸ್ತೆಗಳು ಕುಸಿಯುತ್ತಿರುವುದರಿಂದ ಜನಸಾಮಾನ್ಯರಲ್ಲಿ ಆತಂಕ ಮನೆಮಾಡಿದೆ. ಇನ್ನು ಕೊಪ್ಪ ತಾಲೂಕಿನ ಬಸರಿಕಟ್ಟೆಯ ಸಮೀಪ ಹತ್ತಾರು ವಿದ್ಯುತ್ ಕಂಬಗಳು ಧರೆಗುರುಳಿವೆ.
ಯಾದಗಿರಿಯಲ್ಲಿ ಪ್ರವಾಹ ಭೀತಿ:
ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಯಾದಗಿರಿಯ ಕೃಷ್ಣಾ ನದಿ ಪಾತ್ರದ ಜನರಿಗೆ ಪ್ರವಾಹ ಭೀತಿ ಶುರುವಾಗಿದೆ. ಪ್ರವಾಹ ಮುನ್ಸೂಚನೆ ಹಿನ್ನೆಲೆ ಜಿಲ್ಲಾ ಪೊಲೀಸರು ಅಲರ್ಟ್ ಆಗಿದ್ದಾರೆ. ಪೊಲೀಸರು ನದಿ ಸುತ್ತಮುತ್ತ ಗ್ರಾಮಗಳಿಗೆ ಭೇಟಿ ನೀಡಿ, ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರಿಗೆ ಸೂಚನೆ ನೀಡುತ್ತಿದ್ದಾರೆ.
ಪ್ರವಾಹದಿಂದ ಬೆಳೆ ನಾಶ:
ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಜೋರಾಗಿದ್ದರಿಂದ ವರದಾ, ತುಂಗಭದ್ರಾ, ಕುಮುದ್ವತಿ ನದಿ
ತುಂಬಿ ಹರಿಯುತ್ತಿವೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹೇರೂರು ಗ್ರಾಮದ ಬಳಿ ನದಿಗಳ ಪ್ರವಾಹದಿಂದ
ಮೆಕ್ಕೆಜೋಳ, ಕಬ್ಬು, ಚೆಂಡು ಹೂವಿನ ಬೆಳೆ ನಾಶವಾಗಿದೆ.
Published On - 8:22 am, Sat, 9 July 22