ಬೆಂಗಳೂರು: ಯುವ ಕಾಂಗ್ರೆಸ್ ಕರ್ನಾಟಕ ಘಟಕದ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಅವರನ್ನು ಮುಂದುವರಿಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ. ಈ ಸಂಬಂಧ ಇಂಡಿಯನ್ ಯೂತ್ ಕಾಂಗ್ರೆಸ್ ವೆಬ್ಸೈಟ್ನಲ್ಲೇ ಘೋಷಣೆ ಮಾಡಲಾಗಿದೆ. ಯುವ ಕಾಂಗ್ರೆಸ್ ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನದ ವಿವಾದ ಹಲವು ತಿರುವುಗಳನ್ನು ತೆಗೆದುಕೊಂಡಿತ್ತು. ಇದೀಗ ರಕ್ಷಾ ರಾಮಯ್ಯ ಅವರನ್ನೇ ಅಧ್ಯಕ್ಷರಾಗಿ ಮುಂದುವರಿಸಲು ನಿರ್ಧರಿಸಿರುವುದರಿಂದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ನಲಪಾಡ್ಗೆ ಹಿನ್ನಡೆಯಾದಂತೆ ಆಗಿದೆ. ಮುಂದಿನ ದಿನಗಳಲ್ಲಿ ನಲಪಾಡ್ಗೆ ಅಧಿಕಾರ ಹಸ್ತಾಂತರ ಆಗುವ ಸಾಧ್ಯತೆಯೂ ಕಡಿಮೆ. ಈ ಸಂಬಂಧ ಬುಧವಾರ ಕಾಂಗ್ರೆಸ್ ಪಕ್ಷವು ಅಧಿಕೃತವಾಗಿ ಮಾಧ್ಯಮ ಹೇಳಿಕೆ ಪ್ರಕಟಿಸಿದ್ದು, ಗೊಂದಲಗಳಿಗೆ ತೆರೆ ಎಳೆದಿದೆ.
ಕಳೆದ ಕೆಲ ದಿನಗಳಿಂದ ಅಧ್ಯಕ್ಷ ಸ್ಥಾನದ ಬಗ್ಗೆ ರಕ್ಷಾ ರಾಮಯ್ಯ ಮತ್ತು ನಲಪಾಡ್ ನಡುವೆ ಸಂಘರ್ಷವಿತ್ತು. ವಿವಾದವನ್ನು ಪರಿಹರಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವರು ಪ್ರಯತ್ನಿಸಿದ್ದರು. ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಯಾರಿಗೆ ನೀಡಬೇಕು ಎಂದು ನಿರ್ಧರಿಸಲು ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿಯವರೆಗೂ ಡಿ.ಕೆ.ಶಿವಕುಮಾರ್ ಸರಣಿ ಸಭೆಗಳನ್ನು ನಡೆಸಿದ್ದರು. ಈ ಸಭೆಗಳ ಬೆನ್ನಲ್ಲೇ ಮಹತ್ವದ ಘೋಷಣೆ ಹೊರಬಿದ್ದಿದೆ.
ಚರ್ಚೆಯ ಒಂದು ಹಂತದಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿರುವ ರಕ್ಷಾ ರಾಮಯ್ಯ ಮತ್ತು ನಲಪಾಡ್ ಇಬ್ಬರನ್ನೂ ಹೊರಗೆ ಇಟ್ಟು ಬೇರೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆದಿತ್ತು. ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ, ಹಾಲಿ ಎನ್ಎಸ್ಯುಐ ಅಧ್ಯಕ್ಷರಾಗಿರುವ ಎಚ್.ಎಸ್.ಮಂಜುನಾಥ್ ಹೆಸರೂ ಸಲ ಕೇಳಿಬಂದಿತ್ತು.
ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್, ಡಿಸೆಂಬರ್ 31ರವರೆಗೆ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುತ್ತಾರೆ. ಡಿಸೆಂಬರ್ 31ರ ಬಳಿಕ ನಲಪಾಡ್ ಅವರಿಗೆ ಅಧ್ಯಕ್ಷ ಸ್ಥಾನ ಸಿಗುತ್ತದೆ. ಈ ವಿಚಾರದಲ್ಲಿ ಯಾವುದೇ ಜಟಾಪಟಿ ಇಲ್ಲ. ಕೆಪಿಸಿಸಿ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಇಬ್ಬರಿಗೆ ಆಶೀರ್ವಾದ ಮಾಡಿದ್ದಾರೆ. ಅದರಲ್ಲಿ ಯಾವುದೇ ರೀತಿ ಗೊಂದಲ ಇಲ್ಲ. ನಂತರದಲ್ಲಿ ರಕ್ಷಾ ರಾಮಯ್ಯ ಐವೈಸಿಗೆ ಬರುತ್ತಾರೆ. ನಲಪಾಡ್ ಮತ್ತು ರಕ್ಷಾ ರಾಮಯ್ಯ ಇಬ್ಬರೂ ಈ ನಿರ್ಧಾರಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
(Raksha Ramaiah to Continue as President of Youth Congress Central Committee Clarifies)
ಇದನ್ನೂ ಓದಿ: ಯುವ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗೆ ಸಿದ್ದರಾಮಯ್ಯ ಗರಂ
ಇದನ್ನೂ ಓದಿ: ಕೊವಿಡ್ ಪರಿಹಾರ ಸಾಮಾಗ್ರಿ ಹಂಚಿಕೆಯಲ್ಲಿ ಅವ್ಯವಹಾರ ಆರೋಪ; ಇದಕ್ಕೆಲ್ಲಾ ಹೆದರುವುದಿಲ್ಲ ಎಂದ ಯುವ ಕಾಂಗ್ರೆಸ್ ನಾಯಕ
Published On - 4:04 pm, Wed, 30 June 21