ಬೆಂಗಳೂರು, ಜನವರಿ 23: ಕನ್ನಡದಲ್ಲೇ ರಾಮನ ಅರ್ಚನೆ ಮಾಡುವ ಚಿಕ್ಕಮಗಳೂರಿನ (Chikkamagalur) ಹಿರೇಮಗಳೂರಿನ ಕೋದಂಡರಾಮ ದೇಗುಲದ ಅರ್ಚಕ ಹಿರೇಮಗಳೂರು ಕಣ್ಣನ್ (Hiremagaluru Kannan) ಅವರ ವೇತನ ವಾಪಸ್ ಕೇಳುವ ಮೂಲಕ ಆಕ್ರೋಶಕ್ಕೆ ಗುರಿಯಾಗಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರ ಇದೀಗ ಎಚ್ಚೆತ್ತುಕೊಂಡಿದೆ. ಹಿರೇಮಗಳೂರು ಕಣ್ಣನ್ ಅವರಿಗೆ ನೀಡಿರುವ ನೋಟಿಸ್ ಹಿಂಪಡೆಯಲು ಮುಜರಾಯಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡುವುದಾಗಿ ಮುಜರಾಯಿ ಇಲಾಖೆಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸ್ಥಳೀಯ ತಹಶೀಲ್ದಾರ್ ತಪ್ಪು ತೀರ್ಮಾನದಿಂದ ನೋಟಿಸ್ ಜಾರಿಯಾಗಿದೆ. ಅದನ್ನು ಹಿಂಪಡೆಯುತ್ತೇವೆ ಎಂದರು.
ಕನ್ನಡದಲ್ಲೇ ಮಂತ್ರ ಪಠಣ ಮಾಡಿ ಅರ್ಚನೆ ಮಾಡುವ ಮೂಲಕ ರಾಜ್ಯದ ಜನರ ಗಮನ ಸೆಳೆದಿದ್ದ ಹಿರೇಮಗಳೂರು ಕಣ್ಣನ್ ಅವರಿಗೆ ಜಿಲ್ಲಾಡಳಿತ ವೇತನ ವಾಪಸ್ ಕೇಳಿ ನೋಟಿಸ್ ಜಾರಿ ಮಾಡಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಲು ಆರಂಭವಾಗಿತ್ತು. ವಿಷಯ ಗಮನಕ್ಕೆ ಬಂದಕೂಡಲೇ ರಾಮಲಿಂಗಾರೆಡ್ಡಿ ಆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಹಿರೇಮಗಳೂರು ಕಣ್ಣನ್ ಅವರು ಕಳೆದ 44 ವರ್ಷಗಳಿಂದ ಕಲ್ಯಾಣ ಕೋದಂಡ ರಾಮ ದೇವಾಲಯದ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ರಾಜ್ಯ ಸರ್ಕಾರ ಪ್ರತಿ ತಿಂಗಳು 7500 ರೂ. ವೇತನ ನೀಡುತ್ತಿತ್ತು. ಆದರೆ, ಇದೀಗ ದೇವಾಲಯದ ಆದಾಯ ಕಡಿಮೆ ಇದೆ ಎಂಬ ಕಾರಣ ನೀಡಿ ಈ ಹಿಂದೆ ನೀಡಿದ್ದ 7500 ರೂ. ವೇತನದಲ್ಲಿ 4500 ರೂ. ಅನ್ನು ವಾಪಸ್ ನೀಡುವಂತೆ ಸೂಚಿಸಲಾಗಿತ್ತು. 4500 ರೂಪಾಯಿಯಂತೆ 10 ವರ್ಷದ 4,74,000 ರೂ. ಹಣವನ್ನು ವಾಪಸ್ ನೀಡುವಂತೆ ನೋಟಿಸ್ನಲ್ಲಿ ಉಲ್ಲೇಖಿಸಲಾಗಿತ್ತು. ಜತೆಗೆ, ಡಿಸೆಂಬರ್ ತಿಂಗಳ ವೇತನವನ್ನು ತಡೆ ಹಿಡಿದು 2023ರ ಡಿಸೆಂಬರ್ 2ರಂದು ತಹಶಿಲ್ದಾರ್ ಸುಮಂತ್ ನೋಟಿಸ್ ನೀಡಿದ್ದರು.
44 ವರ್ಷಗಳಿಂದ ದೇವಾಲಯದಲ್ಲಿ ಅರ್ಚಕನಾಗಿ ಕೆಲಸ ಮಾಡಿದ್ದೇನೆ. ದೇವಾಲಯಕ್ಕೆ ಆದಾಯ ಇಲ್ಲ ಎಂದು ಸಂಬಳ ತಡೆಹಿಡಿದು, ಅರ್ಚಕರಿಗೆ ನೀಡಿದ ವೇತನ ವಾಪಸ್ ಕೇಳುವುದು ಸರಿಯಲ್ಲ. ದೇವಾಲಯಗಳಲ್ಲಿ ಅರ್ಚಕರ ಕೊರತೆ ಇದೆ. ಬಡ ಅರ್ಚಕರ ವೇತನವನ್ನು ವಾಪಸ್ ಕೇಳುವುದು ಎಷ್ಟು ಸರಿ? ಜಿಲ್ಲಾಡಳಿತದ ಈ ನಡೆ ಅಚ್ಚರಿ ಮೂಡಿಸಿದೆ ಎಂದು ಹಿರೇಮಗಳೂರು ಕಣ್ಣನ್ ಚಿಕ್ಕಮಗಳೂರಿನಲ್ಲಿ ‘ಟಿವಿ9’ಗೆ ಬೇಸರದಿಂದ ಪ್ರತಿಕ್ರಿಯಿಸಿದ್ದರು.
ಇದನ್ನೂ ಓದಿ: ಅರ್ಚಕರ ವೇತನ ವಾಪಸ್ ಕೇಳಿದ ಸರ್ಕಾರ: ಹಿರೇಮಗಳೂರು ಕಣ್ಣನ್ಗೆ ನೋಟಿಸ್
ಮುಜರಾಯಿ ಇಲಾಖೆಯ ಮೂಲಕ ದೇವಾಲಯಗಳನ್ನು ಸಂರಕ್ಷಿಸಬೇಕು. ದೇವಾಲಯಕ್ಕೆ ಆದಾಯ ಇಲ್ಲ ಎಂದು ಅರ್ಚಕರ ಸಂಬಳ ತಡೆಹಿಡಿದು ನೀಡಿದ ಹಣ ವಾಪಸ್ ಕೇಳುವುದು ಸರಿಯಲ್ಲ ಎಂದು ಅವರು ಅಸಮಾಧಾನ ತೋಡಿಕೊಂಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ