ರಾಮನಗರ ಜಿಲ್ಲಾ ಪೊಲೀಸರಿಂದ ವಿನೂತನ ಕಾರ್ಯಕ್ರಮ: ಬೀಟ್ ಪೊಲೀಸರಿಂದ ಗ್ರಾಮ ವಾಸ್ತವ್ಯ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 06, 2021 | 9:35 PM

ರಾಮನಗರ ಜಿಲ್ಲಾ ಪೊಲೀಸರು ಹಮ್ಮಿಕೊಂಡಿರುವ ಬೀಟ್ ಪೊಲೀಸರಿಂದ ಗ್ರಾಮ ವಾಸ್ಯವ್ಯ ಕಾರ್ಯಕ್ರಮದ ಬಗ್ಗೆ ಜನರಲ್ಲಿ ನಿರೀಕ್ಷೆಗಳು ವ್ಯಕ್ತವಾಗಿವೆ.

ರಾಮನಗರ ಜಿಲ್ಲಾ ಪೊಲೀಸರಿಂದ ವಿನೂತನ ಕಾರ್ಯಕ್ರಮ: ಬೀಟ್ ಪೊಲೀಸರಿಂದ ಗ್ರಾಮ ವಾಸ್ತವ್ಯ
ಕನಕಪುರ ತಾಲೂಕಿನ ಶಿವನೇಗೌಡನದೊಡ್ಡಿ ಗ್ರಾಮದಲ್ಲಿ ಹೆಡ್​ಕಾನ್​ಸ್ಟೆಬಲ್ ಕೆ.ಪಿ.ರಮೇಶ್ ಗ್ರಾಮ ವಾಸ್ತವ್ಯ ಮಾಡಿದ್ದರು.
Follow us on

ರಾಮನಗರ: ಪೊಲೀಸರು ಎಂದರೆ ಸಾಕು ಮೂಗು ಮುರಿಯುವವರೇ ಹೆಚ್ಚು. ಪೊಲೀಸರ ಮೇಲೆ ಸಾಕಷ್ಟು ಆರೋಪಗಳನ್ನು ಮಾಡುತ್ತಾರೆ. ಆದರೆ ಇದೀಗ ರಾಮನಗರ ಜಿಲ್ಲೆಯ ಪೊಲೀಸರ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಅದಕ್ಕೆ ಕಾರಣವಾಗಿರುವುದು ರಾಮನಗರ ಜಿಲ್ಲಾ ಪೊಲೀಸರು ಹಮ್ಮಿಕೊಂಡಿರುವ ವಿನೂತನ ಕಾರ್ಯಕ್ರಮ. ಅದುವೇ ಬೀಟ್ ಪೊಲೀಸರಿಂದ ಗ್ರಾಮ ವಾಸ್ಯವ್ಯ.

ಮುಖ್ಯಮಂತ್ರಿ, ಸಚಿವರು, ಶಾಸಕರು ಸೇರಿದಂತೆ ಜಿಲ್ಲಾಧಿಕಾರಿಗಳು ಸಹ ಈಗಾಗಲೇ ಗ್ರಾಮವಾಸ್ತವ್ಯ ಮಾಡಿದ್ದಾರೆ. ಈ ಮೂಲಕ ಗ್ರಾಮದ ಸಮಸ್ಯೆಗಳನ್ನು ಅರಿಯುವುದು, ಸ್ಥಳದಲ್ಲೇ ಪರಿಹಾರ ಕೊಡಿಸುವ ಕೆಲಸ ಮಾಡಿದ್ದಾರೆ. ಆದರೆ, ಇದೇ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ ಪೊಲೀಸರು ಸಹ ಗ್ರಾಮ ವಾಸ್ತವ್ಯಕ್ಕೆ ಮುಂದಾಗಿದ್ದು, ಬೀಟ್ ಪೊಲೀಸರು ತಿಂಗಳಿಗೆ ಎರಡು ಬಾರಿ ಗ್ರಾಮದಲ್ಲಿ ತಂಗಲಿದ್ದಾರೆ. ಇದು ರಾಜ್ಯದಲ್ಲೇ ಮೊದಲ ಪ್ರಯೋಗ ಎನ್ನಲಾಗಿದೆ.

ಈ ವಿನೂತನ ಕಾರ್ಯಕ್ರಮವನ್ನು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ಜಾರಿಗೆ ತಂದಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಬೀಟ್ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿಗೊಳಿಸುವುದು, ಜನಸ್ನೇಹಿ ಪೊಲೀಸ್ ಪ್ರಯತ್ನಕ್ಕೆ ಒತ್ತು ನೀಡುವುದು, ಅಪರಾಧ ಪ್ರಕರಣಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡುವುದು ಗ್ರಾಮ ವ್ಯಾಸ್ತವ್ಯದ ಉದ್ದೇಶವಾಗಿದೆ.

ರಾಮನಗರ ಜಿಲ್ಲೆಯಲ್ಲಿ 19 ಬೀಟ್ ಪೊಲೀಸ್ ಠಾಣೆಗಳಿದ್ದು, 460 ಬೀಟ್ ಪೊಲೀಸರಿದ್ದಾರೆ. ಇಷ್ಟು ಮಂದಿ ಸಹ ತಿಂಗಳಿಗೆ ಎರಡು ಬಾರಿ ತಮ್ಮ ಬೀಟ್ ವ್ಯಾಪ್ತಿಯ ಗ್ರಾಮಗಳಲ್ಲಿ ತಂಗಬೇಕು. ಅಷ್ಟೇ ಅಲ್ಲದೆ ಗ್ರಾಮದ ಸಮಸ್ಯೆಗಳ ಬಗ್ಗೆ ಪಟ್ಟಿ ಸಿದ್ಧಪಡಿಸಿ, ಠಾಣಾಧಿಕಾರಿಗಳಿಗೆ ನೀಡಬೇಕು. ಪೊಲೀಸ್ ಇಲಾಖೆಗೆ ಸೇರಿದ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸಬೇಕು. ಇತರ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಉನ್ನತಾಧಿಕಾರಿಗಳ ಮೂಲಕ ಸಂಬಂಧಿಸಿದ ಇಲಾಖೆಗಳಿಗೆ ತಲುಪಿಸುವ ಕೆಲಸವನ್ನು ಪೊಲೀಸ್ ಇಲಾಖೆ ಮಾಡಲಿದೆ.

ಹೇಗಿರಲಿದೆ ಪೊಲೀಸರ ವಾಸ್ತವ್ಯ?
ವಾರದಲ್ಲಿ ಒಂದು ಸಂಜೆ ಗ್ರಾಮಕ್ಕೆ ಹೋಗುವ ಬೀಟ್ ಪೊಲೀಸರು, ಗ್ರಾಮಸಭೆ ನಡೆಸಲಿದ್ದಾರೆ. ಮೊದಲಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಲಿದ್ದಾರೆ. ತುರ್ತು ಸಂದರ್ಭದಲ್ಲಿ ಪೊಲೀಸ್ ಠಾಣೆಗೆ ಬರಲು ಕಷ್ಟವಾಗುವ ಸಂದರ್ಭಗಳಲ್ಲಿ ಯಾವ ರೀತಿ ಮಾಹಿತಿ ನೀಡಬೇಕು? ಯಾವ ರೀತಿ ದೂರು ನೀಡಬಹುದು? ಪೊಲೀಸ್ ಇಲಾಖೆ ಯಾವ ರೀತಿ ಜನಸ್ನೇಹಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಿದೆ ಎಂಬುದೂ ಸೇರಿದಂತೆ ಪೊಲೀಸ್ ವ್ಯವಸ್ಥೆ ಬಗ್ಗೆ ಮಾಹಿತಿ ನೀಡುತ್ತಾರೆ. ಆನಂತರ ಗ್ರಾಮಸಭೆಯಲ್ಲಿಯೇ ಸಾರ್ವಜನಿಕರಿಂದ ಗ್ರಾಮದ ಸಮಸ್ಯೆಗಳ ಮಾಹಿತಿ ಪಡೆದುಕೊಂಡು ಪಟ್ಟಿ ಮಾಡಿಕೊಳ್ಳುತ್ತಾರೆ. ಗ್ರಾಮದ ಸರ್ಕಾರಿ ಶಾಲೆ, ಅಂಗನವಾಡಿಗಳಲ್ಲಿ ರಾತ್ರಿ ಉಳಿದುಕೊಳ್ಳುತ್ತಾರೆ. ಮಾರನೇ ದಿನ ಬೆಳೆಗ್ಗೆ ಗ್ರಾಮವಾಸ್ತವ್ಯ ಮುಗಿಸಿ ಠಾಣೆ ಬಂದು ಠಾಣೆಯ ಮೇಲಾಧಿಕಾರಿಗಳಿಗೆ ಪಟ್ಟಿ ನೀಡುತ್ತಾರೆ.

ಕೋಡಿಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಚಾಲನೆ
ರಾಮನಗರ ಜಿಲ್ಲೆಯಲ್ಲಿ ಮಂಗಳವಾರ (ಅ.5) ರಾತ್ರಿಯಿಂದಲೇ ಪೊಲೀಸರ ಗ್ರಾಮ ವಾಸ್ತವ್ಯಕ್ಕೆ ಚಾಲನೆ ಸಿಕ್ಕಿದೆ. ಪ್ರಾಯೋಗಿಕವಾಗಿ ಕನಕಪುರ ತಾಲ್ಲೂಕು ಕೋಡಿಹಳ್ಳಿ ಠಾಣಾ ವ್ಯಾಪ್ತಿಯ ಗ್ರಾಮಗಳಲ್ಲಿ ಬೀಟ್ ಪೊಲೀಸರು ವಾಸ್ತವ್ಯ ಹೂಡಿದ್ದರು. ಒಟ್ಟು ಐದು ಗ್ರಾಮಗಳಲ್ಲಿ ಪೊಲೀಸರು ತಂಗಿದ್ದು, ಅಲ್ಲಿನ ಸಮಸ್ಯೆಗಳನ್ನು ಪಟ್ಟಿ ಮಾಡಿದ್ದಾರೆ. ಇದೇ ಮಾದರಿಯಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿಯೂ ಪೊಲೀಸರು ವಾಸ್ತವ್ಯ ಹೂಡಲಿದ್ದಾರೆ. ಆಯಾ ಠಾಣೆಯ ಸಬ್ ಇನ್​ಸ್ಪೆಕ್ಟರ್ ಹಾಗೂ ಇನ್​ಸ್ಪೆಕ್ಟರ್​ಗಳು ಮೇಲುಸ್ತುವಾರಿ ವಹಿಸಲಿದ್ದಾರೆ.

ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ, ಕನಕಪುರ ತಾಲೂಕಿನ ಶಿವನೇಗೌಡನದೊಡ್ಡಿ ಗ್ರಾಮದಲ್ಲಿ ವಾಸ್ತವ್ಯ ಮಾಡಿದ ಹೆಡ್​ಕಾನ್​ಸ್ಟೆಬಲ್ ಕೆ.ಪಿ.ರಮೇಶ್ ಬಳಿ ಗ್ರಾಮಸ್ಥರು ಗ್ರಾಮದ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಗ್ರಾಮವು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿದ್ದು, ವಿದ್ಯುತ್ ತಂತಿ ಬೇಲಿ ನಿರ್ಮಾಣ ಪೂರ್ಣ ಆಗಿಲ್ಲ. ಇದರಿಂದಾಗಿ ಕಾಡುಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ವಿದ್ಯುತ್ ತಂತಿ ಬೇಲಿ ಪೂರ್ಣ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.

ದೂರದ ಗ್ರಾಮಗಳಿಗೆ ಆದ್ಯತೆ
ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸುವುದು, ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕುವುದು, ಸಾರ್ವಜನಿಕರ ಮೂಲಕ ಪೊಲೀಸ್ ವ್ಯವಸ್ಥೆಯನ್ನು ಇನ್ನಷ್ಟು ಬಲಗೊಳಿಸುವ ಉದ್ದೇಶದಿಂದ ಬೀಟ್ ಪೊಲೀಸರಿಂದ ಗ್ರಾಮ ವಾಸ್ತವ್ಯ ಆಯೋಜಿಸಲಾಗುತ್ತಿದೆ. ಸದ್ಯಕ್ಕೆ ದೂರದ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತಿದ್ದು, ಪೊಲೀಸ್ ಠಾಣೆಯ ಕೆಲಸದ ಒತ್ತಡಗಳನ್ನು ನೋಡಿಕೊಂಡು ತಿಂಗಳಿಗೆ ಎರಡು ಬಾರಿ ನಮ್ಮ ಪೊಲೀಸರು ದಿನಾಂಕ ನಿಗದಿಪಡಿಸಿಕೊಂಡು ಗ್ರಾಮಗಳಲ್ಲಿ ಉಳಿದುಕೊಳ್ಳಲಿದ್ದಾರೆ. ಎಲ್ಲ ಇಲಾಖೆಗಳ ಸಮಸ್ಯೆಗಳನ್ನು ಪಟ್ಟಿ ಮಾಡಿ, ಆಯಾ ಇಲಾಖೆಗಳಿಗೂ ತಲುಪಿಸಲಾಗುವುದು ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್ ‘ಟಿವಿ9 ಕನ್ನಡ ಡಿಜಿಟಲ್​’ಗೆ ಪ್ರತಿಕ್ರಿಯಿಸಿದ್ದಾರೆ.

ವಿಶೇಷ ವರದಿ: ಪ್ರಶಾಂತ್ ಹುಲಿಕೆರೆ

ಇದನ್ನೂ ಓದಿ: Viral Video: ಉಕ್ಕಿ ಹರಿಯುತ್ತಿದ್ದ ಕಾಲುವೆಗೆ ಧುಮುಕಿ ತಾಯಿ-ಮಗುವನ್ನು ಕಾಪಾಡಿದ ಪೊಲೀಸ್; ವಿಡಿಯೋ ವೈರಲ್
ಇದನ್ನೂ ಓದಿ: ಭಾರತ್ ಬಂದ್ ವೇಳೆ ಪೊಲೀಸ್ ಇನ್ಸ್​ಪೆಕ್ಟರ್​ ವಾಕಿಟಾಕಿ ಕಳವು