ವೃಷಭಾವತಿ ಒಡಲಲ್ಲಿ ರಾಶಿ ರಾಶಿ ತ್ಯಾಜ್ಯ: ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಮುಕ್ತಿ ಎಂದು?
ಗ್ರೇಟರ್ ಬೆಂಗಳೂರು ಪ್ರಾಧಿಕಾರ ದಂಡ, ಕಸ ಎಸೆಯುವವರ ಮನೆ ಮುಂದೆಯೇ ತ್ಯಾಜ್ಯ ತಂದು ಸುರಿಯುವುದು ಸೇರಿ ಹತ್ತು ಹಲವು ಜಾಗೃತಿ ಕ್ರಮಗಳನ್ನ ಕೈಗೊಂಡರೂ ಬೆಂಗಳೂರಲ್ಲಿ ಮಾತ್ರ ಕಸದ ಸಮಸ್ಯೆಗೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ಕುಂಬಳಗೂಡು- ಕಗ್ಗಲಿಪುರ ರಸ್ತೆಯ ಅಕ್ಕಪಕ್ಕದಲ್ಲಿ ರಾಶಿ ರಾಶಿ ಕಸ ಸಂಗ್ರಹವಾಗಿದ್ದು, ವೃಷಭಾವತಿ ನದಿ ಒಡಲನ್ನು ಇವು ಸೇರುತ್ತಿವೆ.

ಬೆಂಗಳೂರು ದಕ್ಷಿಣ (ರಾಮನಗರ), ನವೆಂಬರ್ 03: ಸಾಕಷ್ಟು ಕಠಿಣ ಕ್ರಮಗಳ ಬಳಿಕವೂ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಕಸದ ಸಮಸ್ಯೆಗೆ ಸದ್ಯಕ್ಕೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ದಂಡ, ಕಸ ಎಸೆಯುವವರ ಮನೆ ಮುಂದೆಯೇ ತ್ಯಾಜ್ಯ ತಂದು ಸುರಿಯುವುದು ಸೇರಿ ಹತ್ತು ಹಲವು ಜಾಗೃತಿ ಕ್ರಮಗಳನ್ನ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕೈಗೊಂಡರೂ ಈ ಸಮಸ್ಯೆ ಮಾತ್ರ ಹಾಗೆಯೇ ಉಳಿದುಕೊಂಡಿದೆ. ಎಲ್ಲೆಂದರಲ್ಲಿ ಕಸ ಎಸೆದು ಹೋಗುತ್ತಿರುವ ಕಾರಣ ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಡಿಸಿಎಂ ಡಿಕೆ ಶಿವಕುಮಾರ್ ಬೆಂಗಳೂರನ್ನು ಕಸಮುಕ್ತ ನಗರವನ್ನಾಗಿ ಮಾಡಲು ಪಣತೊಟ್ಟಿದ್ದು, ಈ ಬಗ್ಗೆ ಸ್ವತಃ ಮುತುವರ್ಜಿ ವಹಿಸಿದ್ದಾರೆ. ಹೀಗಿದ್ದರೂ ಕಸದ ವಿಲೇವಾರಿ ಮಾತ್ರ ಸರಿಯಾಗಿ ನಡೆಯುತ್ತಿಲ್ಲ. ಕುಂಬಳಗೂಡು- ಕಗ್ಗಲಿಪುರ ರಸ್ತೆಯ ಅಕ್ಕಪಕ್ಕದಲ್ಲಿ ರಾಶಿ ರಾಶಿ ಕಸ ಸಂಗ್ರಹವಾಗಿದ್ದು, ರಸ್ತೆಬದಿ ಓಡಾಲೂ ಜನ ಅಸಹ್ಯ ಪಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಾಳಿ ಬಂದರೆ ಅಕ್ಕ ಪಕ್ಕದ ಏರಿಯಾಗಳ ವರೆಗೆ ದುರ್ವಾಸನೆ ಹರಡುತ್ತಿದೆ.
ಇದನ್ನೂ ಓದಿ: ದಂಡ ವಿಧಿಸಿದ್ರೂ ಬೆಂಗಳೂರಿನಲ್ಲಿ ಕಸ ಎಸೆಯುವುದು ನಿಲ್ಲುತ್ತಿಲ್ಲ: ವಿಲೇವಾರಿಯಲ್ಲೂ ನಿರ್ಲಕ್ಷ್ಯ
ವೃಷಭಾವತಿ ನದಿ ನೀರು ಕಲುಷಿತ
ಇನ್ನು ಇದೇ ರಾಶಿ ರಾಶಿ ಕಸ ಒಂದು ಕಾಲದಲ್ಲಿ ಜೀವ ಸೆಲೆಯಾಗಿದ್ದ ವೃಷಭಾವತಿ ನದಿಯ ಒಡಲನ್ನ ಸೇರುತ್ತಿದ್ದು,ಈಗಾಗಲೇ ನದಿ ನೀರು ಸಂಪೂರ್ಣ ಕಲುಷಿತಗೊಂಡಿದೆ. ಈ ಪರಿಸರದ ಸಮೀಪವೇ ಅಪಾರ್ಟ್ಮೆಂಟ್ಗಳಿದ್ದು, ನಿವಾಸಿಗಳು ಪ್ರತಿನಿತ್ಯ ಪರದಾಡಬೇಕಾದ ಸ್ಥಿತಿ ಇದೆ. ಇದೇ ರಸ್ತೆಯಲ್ಲಿ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಂಚರಿಸಬೇಕಿದೆ. ಹೀಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣುಮುಚ್ಚಿ ಕುಳಿತಿದ್ದಾರೆ ಎನ್ನುವುದು ಸ್ಥಳೀಯ ನಿವಾಸಿಗಳ ಆರೋಪ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:32 pm, Mon, 3 November 25



