ಶಾಸಕರಾಗಿ ಡಿಕೆಶಿ, ಸಂಸದರಾಗಿ ಡಿಕೆ ಸುರೇಶ್ ಏನು ಕೆಲಸ ಮಾಡಿದ್ದಾರೆ: ಸಚಿವ ಅಶ್ವತ್ಥ ನಾರಾಯಣ ಪ್ರಶ್ನೆ

ನಮಗೆ ಗಂಡಸ್ತನ ಇದೆ ಅದಕ್ಕೆ ಯೋಜನೆ ಜಾರಿ ಮಾಡ್ತೇವೆ. ನಿಮಗೆ ಗಂಡಸ್ತನ ಇದ್ದರೆ ಮಾಡಿ ತೋರಿಸಿ ಎಂದು ಸವಾಲು ಹಾಕಿದರು.

ಶಾಸಕರಾಗಿ ಡಿಕೆಶಿ, ಸಂಸದರಾಗಿ ಡಿಕೆ ಸುರೇಶ್ ಏನು ಕೆಲಸ ಮಾಡಿದ್ದಾರೆ: ಸಚಿವ ಅಶ್ವತ್ಥ ನಾರಾಯಣ ಪ್ರಶ್ನೆ
ಸಚಿವ ಅಶ್ವತ್ಥ್ ನಾರಾಯಣ (ಸಂಗ್ರಹ ಚಿತ್ರ)
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 11, 2022 | 5:15 PM

ರಾಮನಗರ: ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಡಿ.ಕೆ.ಶಿವಕುಮಾರ್ ಮತ್ತು ಎರಡು ಬಾರಿ ಸಂಸದರಾಗಿರುವ ಡಿ.ಕೆ.ಸುರೇಶ್ ಕ್ಷೇತ್ರಕ್ಕಾಗಿ ಏನು ಕೆಲಸ ಮಾಡಿದ್ದಾರೆಂದು ಜನರು ಪ್ರಶ್ನಿಸಬೇಕೆಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು. ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಯೋಜನೆ ಅನುಷ್ಠಾನ ಮಾಡಲು ಕಾಂಗ್ರೆಸ್‌ನಿಂದ ಎಂದಿಗೂ ಸಾಧ್ಯವಿಲ್ಲ. ಈ ಯೋಜನೆ ಜಾರಿಯಾಗುವುದಾದರೆ ಬಿಜೆಪಿಯಿಂದ ಮಾತ್ರ ಸಾಧ್ಯ. ನಮಗೆ ಗಂಡಸ್ತನ ಇದೆ ಅದಕ್ಕೆ ಯೋಜನೆ ಜಾರಿ ಮಾಡ್ತೇವೆ. ನಿಮಗೆ ಗಂಡಸ್ತನ ಇದ್ದರೆ ಮಾಡಿ ತೋರಿಸಿ ಎಂದು ಸವಾಲು ಹಾಕಿದರು.

ಪದೇಪದೆ ಗಂಡಸ್ತನ ಇದೆ ಎನ್ನುವ ಕಾಂಗ್ರೆಸ್ ನಾಯಕರು ಅಭಿವೃದ್ಧಿ ವಿಚಾರದಲ್ಲಿ ತಮ್ಮ ಸಾಮರ್ಥ್ಯ ತೋರಿಸಬೇಕು. ಬಿಜೆಪಿ ಅಧಿಕಾರದಲ್ಲಿದೆ ಎಂದು ಪಾದಯಾತ್ರೆ ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ. ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಯಾವುದೇ ಕೆಲಸ ಮಾಡಿಲ್ಲ. ಮೇಕೆದಾಟು ಯೋಜನೆ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಲವು ಬಾರಿ ಶ್ರಮ ವಹಿಸಿ ಕೆಲಸ ಮಾಡಿದ್ದಾರೆ. ಯೋಜನೆ ಜಾರಿಗೆ ಅಗತ್ಯವಿರುವ ಜಮೀನನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿದೆ. ನ್ಯಾಯಾಲಯದಲ್ಲಿ ಗೆಲುವಿಗಾಗಿ ಬೊಮ್ಮಾಯಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ಜಲಪ್ರಾಧಿಕಾರದ ಆದೇಶವನ್ನೂ ತಮಿಳುನಾಡು ಪ್ರಶ್ನಿಸಿದೆ. ಯಡಿಯೂರಪ್ಪನವರು ಎಲ್ಲ ಸಂದರ್ಭದಲ್ಲಿಯೂ ಮೇಕೆದಾಟು ಯೋಜನೆ ಜಾರಿಗೆ ಬದ್ಧ ಎಂದಿದ್ದಾರೆ. ನೀರಾವರಿ ಸಚಿವರಾಗಿದ್ದಾಗ ರಮೇಶ್ ಜಾರಕಿಹೊಳಿ ಸಹ ಈ ಪ್ರದೇಶಕ್ಕೆ ಭೇಟಿ ಕೊಟ್ಟಿದ್ದರು. ಆಗಲೇ ತಮಿಳುನಾಡು ಎನ್​ಜಿಟಿಗೆ ಸ್ಟೇ ತಂದಿದ್ದು ಎಂದು ನೆನಪಿಸಿಕೊಂಡರು.

ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದಾಗ ಈ ಜಿಲ್ಲೆಯ ಹಿತ ಕಾಪಾಡುವಲ್ಲಿ ಯಾವ ಕ್ರಮವನ್ನೂ ವಹಿಸಿಲ್ಲ. ಡಿಪಿಆರ್ ಮಾಡಲು, 4ಜಿ ರಿಯಾಯ್ತಿ ಕೊಡಲು ಹಲವು ವರ್ಷ ತೆಗೆದುಕೊಂಡರು. ಅದು ಅವರಿಗೆ ಇದ್ದ ಕಾಳಜಿಯನ್ನು ತೋರಿಸುತ್ತದೆ. 2013ರಿಂದ 2018ರವರೆಗೆ ಒಂದು ಫೀಸಬಿಲಿಟಿ ರಿಪೋರ್ಟ್ ತಯಾರಿಸಲು, ಡಿಪಿಆರ್ ತಯಾರಿಸಲು ಇವರಿಂದ ಆಗಲಿಲ್ಲ ಎಂದು ದೂರಿದರು.

ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆ ವೇಳೆ ಪರಸ್ಪರ ತಬ್ಬಿಕೊಂಡು ಉಭಯ ಕುಶಲೋಪರಿ ವಿಚಾರಿಸಿಕೊಂಡ ಸಾಧು ಕೋಕಿಲ-ಮಧು ಬಂಗಾರಪ್ಪ
ಇದನ್ನೂ ಓದಿ: ಮೇಕೆದಾಟು ಯೋಜನೆಯ ವಿಳಂಬದ ಹೊಣೆ ಕಾಂಗ್ರೆಸ್; ಕಾರಜೋಳರಿಂದ ಮತ್ತೊಂದು ಸರ್ಕಾರಿ ದಾಖಲೆ ಬಿಡುಗಡೆ

Published On - 5:15 pm, Tue, 11 January 22