ಮೇಕೆದಾಟು ಯೋಜನೆಯ ವಿಳಂಬದ ಹೊಣೆ ಕಾಂಗ್ರೆಸ್; ಕಾರಜೋಳರಿಂದ ಮತ್ತೊಂದು ಸರ್ಕಾರಿ ದಾಖಲೆ ಬಿಡುಗಡೆ
ಸಚಿವ ಗೋವಿಂದ ಕಾರಜೋಳ ಅವರು 2014 ರಲ್ಲಿಯೇ ಮೇಕೆದಾಟು ಯೋಜನೆ ಸಂಬಂಧ ಕಾನೂನು ಸಚಿವರು ಬರೆದಿದ್ದ ಟಿಪ್ಪಣಿ ಬಿಡುಗಡೆ ಮಾಡಿದ್ದಾರೆ. ಈ ಟಿಪ್ಪಣಿಯಲ್ಲಿ ಮೇಕೆದಾಟು ಯೋಜನೆ ಈಗಾಗಲೇ ವಿಳಂಬವಾಗಿದೆ ಎಂದು ಉಲ್ಲೇಖ ಮಾಡಲಾಗಿದೆ. ಇದನ್ನೇ ಪುರಾವೆ ಎಂದು ಬಿಜೆಪಿ ಬಿಡುಗಡೆ ಮಾಡಿದೆ.
ಬೆಂಗಳೂರು: ಮೇಕೆದಾಟು ಯೋಜನೆಯ ವಿಳಂಬದ ಹೊಣೆಯನ್ನುಬಿಜೆಪಿ (BJP) ಕಾಂಗ್ರೆಸ್ (Congress) ಮೇಲೆ ಹೊರಿಸಿದೆ. ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ (govinda karjola) ಅವರು ಮತ್ತೊಂದು ಸರ್ಕಾರಿ ದಾಖಲೆ ಬಿಡುಗಡೆ ಮಾಡಿದ್ದಾರೆ. 2014 ರಲ್ಲಿಯೇ ಮೇಕೆದಾಟು ಯೋಜನೆ (mekedatu project) ಸಂಬಂಧ ಕಾನೂನು ಸಚಿವರು ಬರೆದಿದ್ದ ಟಿಪ್ಪಣಿ ಬಿಡುಗಡೆ ಮಾಡಿದ್ದಾರೆ. ಈ ಟಿಪ್ಪಣಿಯಲ್ಲಿ ಮೇಕೆದಾಟು ಯೋಜನೆ ಈಗಾಗಲೇ ವಿಳಂಬವಾಗಿದೆ ಎಂದು ಉಲ್ಲೇಖ ಮಾಡಲಾಗಿದೆ. ಇದನ್ನೇ ಪುರಾವೆ ಎಂದು ಬಿಜೆಪಿ ಬಿಡುಗಡೆ ಮಾಡಿದೆ.
ಕಾಂಗ್ರೆಸ್ನವರು ಪ್ರತಿಭಟನೆ ಮಾಡುವುದು ಸರಿಯಲ್ಲ: ಸಚಿವ ಪ್ರಭು ಚೌಹಾಣ್ ಕಾಂಗ್ರೆಸ್ನವರು ರಾಜಕೀಯ ಲಾಭಕ್ಕಾಗಿ ಮೇಕೆದಾಟು ಯೋಜನೆ ಮುಂದಿಟ್ಟು ಹೋರಾಟ ಮಾಡುತ್ತಿದ್ದಾರೆ. ಕೊವಿಡ್ ಸಮಯದಲ್ಲಿ ಕಾಂಗ್ರೆಸ್ನವರು ಪ್ರತಿಭಟನೆ ಮಾಡುವುದು ಸರಿಯಲ್ಲ. ವಿರೋಧಿ ಪಕ್ಷವಾಗಿ ಅವರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ ಅವರು ಮಾಡಲಿ. ಪ್ರತಿಭಟನೆ ಮಾಡುವ ಹಕ್ಕು ಎಲ್ಲರಿಗೂ ಇದೆ. ಆದರೆ ಈಗ ಅವರು ಪ್ರತಿಭಟನೆ ಮಾಡುವ ಸಮಯ ಸರಿಯಿಲ್ಲ. ದಿನದಿಂದ ದಿನಕ್ಕೆ ಕೊರೊನಾ ಸೋಂಕು ಜಾಸ್ತಿಯಾಗುತ್ತಿದೆ. ಪ್ರತಿ ದಿನ ಹತ್ತು ಸಾವಿರ ದಾಟುತ್ತಿದೆ. ಇಂತಹ ಸಮಯದಲ್ಲಿ ಐದತ್ತು ಸಾವಿರ ಜನರನ್ನು ಸೇರಿಸಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚೌಹಾಣ್ ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಕರ್ಫ್ಯೂ ಇದೆ. ಕೊವಿಡ್ ಸಂಖ್ಯೆ ಜಾಸ್ತಿಯಾಗುತ್ತಿದೆ. ರಾಜಕಿಯಕ್ಕಾಗಿ ಪ್ರತಿಭಟನೆ ಸರಿಯಲ್ಲ. ಕೊವಿಡ್ ಸಮಯದಲ್ಲಿ ಕಾಂಗ್ರೆಸ್ನವರು ಸರಕಾರಕ್ಕೆ ಸಹಾಯ ಮಾಡಬೇಕು. ಆದರೆ ಅವರು ಹೀಗೆ ಮಾಡೋದು ಸರಿಯಲ್ಲ. ಸರಕಾರ ಜನರ ಒಳ್ಳೆಯದಕ್ಕಾಗಿ ನಿಂತಿದೆ. ಸದ್ಯದಲ್ಲೇ ಜಿಲ್ಲಾ ಪಂಚಾಯತ್ ಚುನಾವಣೆ ಇದೆ, ಎಂಎಲ್ಎ ಚುನಾವಣೆ ಇದೆ. ಅದಕ್ಕಾಗಿ ಕಾಂಗ್ರೆಸ್ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಚಿವ ಪ್ರಭು ಚೌಹಾಣ್ ತಿಳಿಸಿದ್ದಾರೆ.
ಹೋರಾಟ ಹತ್ತಿಕ್ಕಲು ಕೊವಿಡ್ ಕರ್ಫ್ಯೂ ವಿಧಿಸಲಾಗಿದೆ ಎನ್ನುವುದು ಹಾಸ್ಯಾಸ್ಪದ: ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಆರೋಗ್ಯ ಇಲಾಖೆ, ಡಬ್ಲ್ಯೂಹೆಚ್ ನಿಯಂತ್ರಣ ಮೀರಿ ಕೊವಿಡ್ ವಿಶ್ವದಾದ್ಯಂತ ಹೆಚ್ಚುತ್ತಿದೆ. ಕೊವಿಡ್ ನಿಯಂತ್ರಣ ದೊಡ್ಡ ಸಮಸ್ಯೆ ಆಗಿದೆ. ಈ ವೇಳೆ ಕಾಂಗ್ರೆಸ್ ಮೇಕೆದಾಟು ಹೋರಾಟ ಸರಿಯಲ್ಲ. ವಿಪಕ್ಷ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅದ್ಯಕ್ಷ ಡಿಕೆಶಿ ಜವಬ್ದಾರಿ ಅರಿಯಬೇಕು. ಹೋರಾಟ ಹತ್ತಿಕ್ಕಲು ಕೊವಿಡ್ ಕರ್ಫ್ಯೂ ವಿಧಿಸಲಾಗಿದೆ ಎನ್ನುವುದು ಹಾಸ್ಯಾಸ್ಪದ. ಕಳೆದ 2 ಅಲೆಗಿಂತ 3ನೇ ಅಲೆಯ ವೇಗ ಭಯ ಹುಟ್ಟಿಸುತ್ತಿದೆ ಎಂದು ಚಿತ್ರದುರ್ಗದಲ್ಲಿ ಬಿಜೆಪಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿಕೆ ನೀಡಿದ್ದಾರೆ.
ನಾಯಕರು ಹೋರಾಟಕ್ಕಿಳಿದಾಗ ಜನ ಸೇರುವುದು ಸಹಜ. ಹತ್ತಾರು ಸಾವಿರ ಜನಕ್ಕೆ ಕೊವಿಡ್ ಹರಡುವ ಸಾಧ್ಯತೆ ಇದೆ. ಬೊಮ್ಮಾಯಿ ಸರ್ಕಾರಕ್ಕೆ ಮುಜುಗರ ತರುವ ದೃಷ್ಠಿಯಿಂದ ಹೋರಾಟ ಸರಿಯಲ್ಲ. ಕೊರೊನಾ ಬಗ್ಗೆ ಈ ಮೊದಲೇ ಗೊತ್ತಿರದೆ ಪಾದಯಾತ್ರೆಗೆ ಸಜ್ಜು ಮಾಡಿದ್ದಾರೆ. ಈಗ ಕೊವಿಡ್ ಹರಡುವ ಸ್ಥಿತಿ ಕಂಡು ಹೋರಾಟ ಮೊಟಕುಗೊಳಿಸಬೇಕಿತ್ತು. ಬೊಮ್ಮಾಯಿ ಸರ್ಕಾರಕ್ಕೆ ಚಾಲೆಂಜ್ ಮಾಡುವ ರೀತಿಯ ನಡೆ ಸರಿಯಲ್ಲ. ಇನ್ನೂ ವಿಪಕ್ಷ ನಾಯಕ ಸಿದ್ಧರಾಮಯ್ಯಗೆ ನಿನ್ನೆ ಆರೋಗ್ಯ ಸಮಸ್ಯೆ ಆಗಿದ್ದು ದುಖಃಕರ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತಿಳಿಸಿದ್ದಾರೆ.
ಹಾವೇರಿ: ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಪಾದಯಾತ್ರೆ ದೊಡ್ಡ ನಾಟಕ: ಸಚಿವ ಬಿ.ಸಿ.ಪಾಟೀಲ್ ಮೇಕೆದಾಟು ವಿಚಾರದಲ್ಲಿ ನಡಿತಿರುವ ಪಾದಯಾತ್ರೆ ಕಾಂಗ್ರೆಸ್ನವರ ದೊಡ್ಡ ನಾಟಕ. ಸಿದ್ದರಾಮಯ್ಯನವರ ಮುಂದೆ ಪಾದಯಾತ್ರೆ ಮೂಲಕ ಡಿ.ಕೆ.ಶಿವಕುಮಾರ ದೊಡ್ಡ ಜನಾನುರಾಗಿ ಆಗಲು ಹೊರಟಿದ್ದಾರೆ. ಜನರನ್ನು ಸೇರಿಸಿ ಸಿದ್ದರಾಮಯ್ಯ ಮುಂದೆ ನಾಟಕ ಮಾಡುತ್ತಿದ್ದಾರೆ. ಜನರು ಹಾಳಾದರೆ ಹಾಳಾಗಲಿ, ಸತ್ತರೆ ಸಾಯಲಿ ಎಂದು ತಮ್ಮ ಜನಪ್ರಿಯತೆಗಾಗಿ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿ ಗ್ರಾಮದ ಬಳಿ ಇರುವ ಕೃಷಿ ಮಹಾವಿದ್ಯಾಲಯದಲ್ಲಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಹಿಂದೆ ಕಾಂಗ್ರೆಸ್ ಸರಕಾರವೆ ಅಧಿಕಾರದಲ್ಲಿತ್ತು. ಆಗ ಮೇಕೆದಾಟು ಯೋಜನೆ ಬಗ್ಗೆ ಡಿಪಿಆರ್ ಕೂಡ ಮಾಡಿರಲಿಲ್ಲ. ಮೇಕೆದಾಟು ಯೋಜನೆ ವಿಚಾರ ಇನ್ನೂ ಸುಪ್ರೀಂಕೋರ್ಟ್ನಲ್ಲಿ ಪೆಂಡಿಂಗ್ ಇದೆ. ಈ ಸಂದರ್ಭದಲ್ಲಿ ಹೋರಾಟದ ಮೂಲಕ ಸುಪ್ರೀಂಕೋರ್ಟ್ ಮೇಲೆ ಒತ್ತಡ ಹೇರುವುದು ಕಾನೂನುಬಾಹಿರ ಆಗುತ್ತದೆ. ಇದು ಸರಿಯಾದುದಲ್ಲ. ಇದು ಉದ್ಧಟತನ, ಗೂಂಡಾಗಿರಿ, ಮೂರ್ಖತನದ ಪರಮಾವಧಿ. ದೇಶದಲ್ಲಿ ಕೊರೊನಾ ಆರ್ಭಟವಿದೆ. ಹೀಗಿದ್ದಾಗ ಕಾಂಗ್ರೆಸ್ನವರ ಪಾದಯಾತ್ರೆ ಚುನಾವಣೆ ಗಿಮಿಕ್. ಚುನಾವಣೆಗೆ ಜನರ ಗಮನ ಸೆಳೆಯಲು ಕಾಂಗ್ರೆಸ್ನವರು ಈ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಚಿತ್ರನಟರ ಭಾಗಿ ವಿಚಾರಕ್ಕೆ ಸಂಬಂಧಪಟ್ಟಂತೆ ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿಕೆ ನೀಡಿದ್ದು, ಪಾದಯಾತ್ರೆ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ.ಕಲಾವಿದರಾಗಿ ಅಲ್ಲಿ ಭಾಗವಹಿಸೋದು ಸರಿಯಲ್ಲ. ಸಿನಿಮಾ ನಟರು ಕಾಂಗ್ರೆಸ್ ಕಾರ್ಯಕರ್ತರಾಗಿ ಪಾದಯಾತ್ರೆಗೆ ಹೋಗಲಿ. ಡಿ.ಕೆ.ಶಿವಕುಮಾರ ಪದೆ ಪದೆ ತಾಕತ್ತಿದ್ದರೆ ತಾಕತ್ತಿದ್ದರೆ ಅನ್ನುತ್ತಾರೆ. ಅವರು ಈಗಾಗಲೆ ಸುಸ್ತಾಗಿದ್ದಾರೆ. ಇನ್ನೂ ಸಿದ್ದರಾಮಯ್ಯನವರು ನಿನ್ನೆಯೇ ಪಾದಯಾತ್ರೆಯಿಂದ ಕೈಕೊಟ್ಟು ಹೋಗಿದ್ದಾರೆ. ಹೇಗಾದ್ರೂ ಮಾಡಿ ತಮ್ಮನ್ನ ಬಂಧಿಸಿದರೆ ಪಾದಯಾತ್ರೆ ಬಂದ್ ಆಗುತ್ತದೆ. ಸರಕಾರದ ಮೇಲೆ ಗೂಬೆ ಕೂರಿಸಬಹುದು ಎಂದು ತಾಕತ್ತಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಪಾದಯಾತ್ರೆಗೆ ಶಿವಣ್ಣ ಯಾಕೆ ಬಂದಿಲ್ಲ? ಕಾರಣ ವಿವರಿಸಿದ ಮಧು ಬಂಗಾರಪ್ಪ
Analysis: ಮೇಕೆದಾಟು ಪಾದಯಾತ್ರೆ: ಕಾಂಗ್ರೆಸ್ ಗೆಲುವಿಗೆ ಬರೆಯಲಿದೆಯೇ ಮುನ್ನುಡಿ?
Published On - 3:58 pm, Mon, 10 January 22