ರಾಮನಗರ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ (CP Yogeeshwar) ಕಾರಿಗೆ ಸುಮಾರು 500 ಹೆಚ್ಚು ಜೆಡಿಎಸ್ ಕಾರ್ಯಕರ್ತರು ಮುತ್ತಿಗೆ ಹಾಕಿ, ಕಲ್ಲು ಹಾಗೂ ಮೊಟ್ಟೆ ಎಸೆದಿರುವಂತಹ ಘಟನೆ ಜಿಲ್ಲೆಯ ಚನ್ನಪಟ್ಟಣದ ಭೈರಾಪಟ್ಟಣದಲ್ಲಿ ನಡೆದಿದೆ. ಯೋಗೇಶ್ವರ್ ಕಾರಿನ ಮೇಲೆ ಕಲ್ಲೆಸೆತ ಹಿನ್ನೆಲೆ JDS ಕಾರ್ಯಕರ್ತರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಲಾಗಿದೆ. ಕಲ್ಲು ತೂರಾಟದ ವೇಳೆ ಕೆಲ ಪೊಲೀಸ್ ಸಿಬ್ಬಂದಿಗೂ ಗಾಯಗಳಾಗಿವೆ. ಇಂದು ಚನ್ನಪಟ್ಟಣ ತಾಲೂಕಿನಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ರಾಂಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿಗಳಿಗೆ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಿದ್ದಾರೆ. ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ್ ನಾರಾಯಣ್ (Ashwath Narayan) ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ ಅವರು ಗೈರಾದ ಹಿನ್ನೆಲೆ MLC ಯೋಗೇಶ್ವರ್ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಯೋಗೇಶ್ವರ್ ಗಂಭೀರ ಆರೋಪ
ಈ ಕುರಿತಾಗಿ ಮಾಜಿ ಸಚಿವ ಯೋಗೇಶ್ವರ್ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಕಾರ್ಯಕರ್ತರ ಮೂಲಕ ದೊಂಬಿ ಎಬ್ಬಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದರು. ಜನರ ಸಾಮಾನ್ಯರ ಕೋರಿಕೆ ಮೇರೆಗೆ ನಾನು ಮನವಿಸಲ್ಲಿಸಿದ್ದೆ. ರಸ್ತೆ, ಚರಂಡಿ ಅಭಿವೃದ್ದಿಗೆ ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ದೆ. ಸಿಎಂ ನನ್ನ ಮನವಿ ಮೇರೆಗೆ 50 ಕೋಟಿ ಮಂಜೂರು ಮಾಡಿದ್ದಾರೆ. ನಾನು ಬಹಿರಂಗವಾಗಿ ಅನುಷ್ಠನಾಗೊಳಿಸಲು ಮನವಿ ಮಾಡಿದ್ದೆ. ಇದಕ್ಕೆ ಮಾಜಿ ಸಿಎಂ ಹೆಚ್‌ಡಿಕೆ ವಿರೋಧ ವ್ಯಕ್ತಪಡಿಸಿದ್ದರು. ಇದನ್ನ ತಡೆಯಲು ಸತತ ಪ್ರಯತ್ನ ಮಾಡಿದ್ದರು. ಕುಮಾರಸ್ವಾಮಿಗೆ ನಾನು ಕಾರ್ಯಕ್ರಮದಲ್ಲಿ ಬಹಿರಂಗ ಆಹ್ವಾನ ಕೊಟ್ಟಿದ್ದೆ. ಜೊತೆಯಲ್ಲೇ ಸೇರಿ ಅಭಿವೃದ್ದಿ ಮಾಡೋಣ ಎಂದು ಹೇಳಿದ್ದೆ. ಈ ಸರ್ಕಾರದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಗಲಾಟೆ ಮಾಡಿಸುತ್ತಿದ್ದಾರೆ ಎಂದು ಚನ್ನಪಟ್ಟಣದಲ್ಲಿ ಮಾಜಿ ಸಚಿವ ಯೋಗೇಶ್ವರ್ ಗಂಬೀರ ಆರೋಪ ಮಾಡಿದರು.
ಶಂಕುಸ್ಥಾಪನೆಗೆ ತೀವ್ರ ವಿರೋಧ
ಮಾಜಿ ಸಿಎಂ ಹಾಗೂ ಚನ್ನಪಟ್ಟಣ ಶಾಸಕ ಹೆಚ್ಡಿ ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಸ್ವತಃ ಕುಮಾರಸ್ವಾಮಿ ಅವರನ್ನು ದೂರವಿಟ್ಟು ಶಂಕುಸ್ಥಾಪನೆ ನೆರವೇರಿಸಿದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. 40% ಸರ್ಕಾರ, ಯಾರಪ್ಪ ಗಂಡಸು ಎಂದು ಘೋಷಣೆ ಕೂಗಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಯೋಗೇಶ್ವರ್, ಅಶ್ವತ್ಥ್ ನಾರಾಯಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಕೆಲ ಜೆಡಿಎಸ್ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದರು. ಇನ್ನು ತಮ್ಮನ್ನು ಕಡೆಗಣಿಸಿರುವ ಬಗ್ಗೆ ಹೆಚ್ಡಿ ಕುಮಾರಸ್ವಾಮಿಗೆ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಿಎಂ ಬೊಮ್ಮಾಯಿ ಸೂಚನೆ ಮೇರೆಗೆ ಸಚಿವ ಅಶ್ವತ್ಥ್ ನಾರಾಯಣ್ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ. ಆದರೆ ಇವರಿಬ್ಬರ ಜಗಳದ ನಡುವೆ ಸಧ್ಯ MLC ಯೋಗೇಶ್ವರ್ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮತ್ತು ಕೆಆರ್ಡಿಐಎಲ್ನ ವತಿಯಿಂದ ಗ್ರಾಮೀಣ ರಸ್ತೆಗಳ ಭೂಮಿಪೂಜೆ ಕಾರ್ಯಕ್ರಮ ನಡೆದಿದ್ದು ಚನ್ನಪಟ್ಟಣ ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿಗಾಗಿ ಸಿಎಂ ಬೊಮ್ಮಾಯಿ 50 ಕೋಟಿ ರೂ ವಿಶೇಷ ಅನುದಾನ ಬಿಡುಗಡೆ ಮಾಡಿದ್ದರು. ಅಶ್ವತ್ಥ್ ನಾರಾಯಣ್ ವಿರುದ್ಧ ಹೆಚ್ಡಿ ಕುಮಾರಸ್ವಾಮಿ ಸದನದಲ್ಲಿ ಗುಡುಗಿದ ಬೆನ್ನಲ್ಲಿ ಸಚಿವ ಅಶ್ವತ್ಥ್ ನಾರಾಯಣ್ ಶಂಕುಸ್ಥಾಪನೆಗೆ ಮುಂದಾಗಿದ್ದರು. ಆದರೆ ಈಗ ಅವರೇ ಗೈರಾಗಿದ್ದಾರೆ. ಹಾಗೂ ಹೆಚ್ಡಿ ಕುಮಾರಸ್ವಾಮಿ ಅವರನ್ನ ಭೂಮಿಪೂಜೆಯಿಂದ ಹೊರಗಿಟ್ಟಿದ್ದಾರೆ. ಈ ಬಗ್ಗೆ ಹೆಚ್‌ಡಿಕೆ ಸಿಎಂ ಬೊಮ್ಮಾಯಿ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:09 pm, Sat, 1 October 22