ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವಾರ ವಿಧಾನಸಭೆಯಲ್ಲಿ ಮಂಡಿಸಿದ್ದ ಚೊಚ್ಚಲ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (JDS MLA HD Kumaraswamy) ಅವರು ನಿನ್ನೆ ಬುಧವಾರ ದಾಖಲೆಗಳ ಸಮೇತವಾಗಿ ಈಗಲ್ಟನ್ ರೆಸಾರ್ಟ್ ಬಗ್ಗೆ (Eagleton Resort Bidadi, Ramanagar) ಸದನದಲ್ಲಿ ಪ್ರಸ್ತಾಪ ಮಾಡಿದ್ದರು. ಇಂದೂ ಸಹ ಅದರ ಮುಂದುವರಿದ ಭಾಗವಾಗಿ ಮತ್ತಷ್ಟು ಮಾಹಿತಿ/ ಸ್ಪಷ್ಟನೆಗಳನ್ನು ಸದನದಲ್ಲಿ ಕೊಟ್ಟಿದ್ದಾರೆ. ಈ ಮಧ್ಯೆ, ಮಾಜಿ ಮುಖ್ಯಮಂತ್ರಿ, ವಿಪಕ್ಷ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ (Siddaramaiah) ಅವರು ಹೆಚ್ಡಿ ಕುಮಾರಸ್ವಾಮಿ ಅವರ ಈಗಲ್ಟನ್ ರೆಸಾರ್ಟ್ ವರದಿಯ ವಿರುದ್ಧ ಸಾರಾಸಗಟಾಗಿ ಮುಗಿಬಿದ್ದಿದ್ದಾರೆ. (ಈಗಲ್ಟನ್ ರೆಸಾರ್ಟ್ ವಿಚಾರ ಕುರಿತಾದ) ನಿಮ್ಮ ವಾದ ಎಲ್ಲಾ ನಾನು ಕೇಳಿದೆ. ನೀವು ಹೇಳಿದ್ದೆಲ್ಲಾ ಈಗಲ್ಟನ್ ಪರವೇ ಇದೆ! ನನ್ನ ಮುಂದೆ ಬರಲಿಲ್ಲ ಅಂತೀರಲ್ಲಾ? ಸಿಎಂ ಆಗಿ ನಿಮ್ಮ ಮುಂದೆ ಇದು ಬರಬೇಕಿತ್ತಾ? ನೀವು ರಾಮನಗರದ ಪ್ರತಿನಿಧಿ ಅಲ್ವಾ? ಈಗಲ್ಟನ್ ರೆಸಾರ್ಟ್ ನಿಮ್ಮ ಕ್ಷೇತ್ರಕ್ಕೆ ಬರುತ್ತಲ್ಲಾ? ಯಾಕೆ ಈ ಬಗ್ಗೆ ನೀವು ಗಮನ ಹರಿಸಿಲ್ಲ? ಎಂದು ವಿಧಾನಸಭೆ ಕಲಾಪದ ವೇಳೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಸದನದಲ್ಲಿ ಕುಮಾರಸ್ವಾಮಿಗೆ ತಿರುಗೇಟು ನೀಡಿದ ಸಿದ್ದರಾಮಯ್ಯ:
ಅಷ್ಟೇ ಅಲ್ಲ; ಬಜೆಟ್ ಮೇಲಿನ ಚರ್ಚೆ ವೇಳೆ ಕುಮಾರಸ್ವಾಮಿ ಈಗಲ್ ಟನ್ ರೆಸಾರ್ಟ್ ವಿಚಾರವನ್ನು ಚರ್ಚೆಗೆ ತಂದಿದ್ದಕ್ಕೂ ವಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಿರಿ, ಆಗ ಈ ಸಮಸ್ಯೆ ಬಗೆಹರಿಸಬಹುದಿತ್ತಲ್ಲಾ? ಎಂದು ವಿಪಕ್ಷ ಉಪನಾಯಕ ಖಾದರ್ ಸಹ ಪ್ರಶ್ನೆ ಮಾಡಿದರು. ನಾನು ಸಿಎಂ ಆಗಿದ್ದಾಗ ಈ ಸಮಸ್ಯೆ ನನ್ನ ಮುಂದೆ ಬಂದೇ ಇರಲಿಲ್ಲ. ಬಂದಿದ್ರೆ ನಾನು ಅಧಿಕಾರ ಕಳೆದುಕೊಂಡಿದ್ದರೂ ಪರವಾಗಿಲ್ಲ ಇದಕ್ಕೆ ಅನ್ಯಾಯ ಆಗೋದಕ್ಕೆ ಬಿಡ್ತಾ ಇರಲಿಲ್ಲ ಎಂದು ಕುಮಾರಸ್ವಾಮಿ ಮಾರುತ್ತರ ನೀಡಿದರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಮೆಲಿನಂತೆ ತರಾಟೆಗೆ ತೆಗೆದುಕೊಂಡರು. ಜೊತೆಗೆ, ರಾಜ್ಯ ಬಜೆಟ್ಗೂ ಈಗಲ್ಟನ್ ರೆಸಾರ್ಟ್ಗೂ ಏನು ಸಂಬಂಧ? ಇಷ್ಟು ದಿನಗಳ ಕಾಲ ಸುಮ್ಮನಿದ್ದು ಈಗ್ಯಾಕೆ ವಿಚಾರ ಎತ್ತುತ್ತಿದ್ದೀರಿ? ಈ ರೀತಿ ನೀವು ಒಳ ಒಪ್ಪಂದ ಮಾಡಿಕೊಂಡು ಬಂದು ರಾಜಕಾರಣ ಮಾಡಿದ್ರೆ ಡೋಂಟ್ ಕೇರ್. ಇ ಇದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದೂ ಸಿದ್ದರಾಮಯ್ಯ ಗುಡುಗಿದರು.
ಬಜೆಟ್ ಮೇಲೆ ಚರ್ಚೆ ತಗೊಂಡು ಈ ವಿಷಯ ತಗೊಂಡಿದ್ದೀರಲ್ಲ? ಚುನಾವಣಾ ವರ್ಷ ಅಂತಾ ಇದನ್ನು ಪ್ರಸ್ತಾಪ ಮಾಡ್ತಿದ್ದೀರಲ್ಲಾ? ಒಂದು ವೇಳೆ ಇದರಲ್ಲಿ ಅಕ್ರಮ ಆದರೆ ತನಿಖೆ ಆಗಲಿ. ನೀವು ಏನು ತನಿಖೆ ಮಾಡಿಸ್ತಿರೋ ತನಿಖೆ ಮಾಡಿಸಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆಗ ನೀವು ಚೀಫ್ ಮಿನಿಸ್ಟರ್ ಆಗಿದ್ದರಿ, ಏನು ಮಾಡಿದ್ರಿ? ರಾಜಕಾರಣಕ್ಕಾಗಿ ಮಾತಾಡಬಾರದು, ಇದೆಲ್ಲಾ ಸುಮ್ಮನೆ ಒಳ್ಳೆಯದಲ್ಲ ಎಂದು ಸಿದ್ದರಾಮಯ್ಯ ತಮ್ಮ ಸಿಟ್ಟು ಹೊರಹಾಕಿದರು.
ಇಂದು ವಿಧಾನಸಭೆ ಕಲಾಪದ ವೇಳೆ ಈಗಲ್ಟನ್ ರೆಸಾರ್ಟ್ ವಿಷಯವಾಗಿ ನಡೆದ ಸ್ವಾರಸ್ಯಕರ ಚರ್ಚೆಯ ಒಂದು ಝಲಕ್ ಇಲ್ಲಿದೆ:
ಸಿದ್ದರಾಮಯ್ಯ- ಈಗಲ್ಟನ್ ಪರ ಮಾತಾಡ್ತಿದ್ದೀರಲ್ಲಾ ನೀವು ಯಾವ ಪರ್ಸಂಟೇಜ್ ತಗೊಂಡಿದ್ದೀರಾ?
ಕುಮಾರಸ್ವಾಮಿ- ಮಾನವೀಯತೆಯ ಪರ್ಸಂಟೇಜ್, ತಾಯಿ ಹೃದಯದ ಪರ್ಸಂಟೇಜ್
ಸಿದ್ದರಾಮಯ್ಯ- ನೀವು ಅಧಿಕಾರದಲ್ಲಿ ಇದ್ದಾಗಲೂ ಆ ಭೂಮಿ ಲೀಸ್ ನಲ್ಲಿತ್ತು, ಯಾಕೆ ನೀವು ಆಗ ಕ್ರಮ ಕೈಗೊಳ್ಳಲಿಲ್ಲ, ನೀವು ಈಗಲ್ಟನ್ ಪರ ವಕಾಲತ್ತು ಹಾಕ್ತಾ ಇದ್ದೀರಾ, ಇದಕ್ಕೂ ಬಜೆಟ್ ಗೂ ಸಂಬಂಧವೇ ಇಲ್ಲ
ಕುಮಾರಸ್ವಾಮಿ- ಬಜೆಟ್ ಗೂ ಈಗಲ್ಟನ್ ಗೂ ಸಂಬಂಧವೇ ಇಲ್ವಾ? ಬೇಕಿದ್ದರೆ ನಾನು ಇದರ ಬಗ್ಗೆ ಒಂದು ವರ್ಷ ಮಾತಾಡಬಲ್ಲೆ.
ಸಿದ್ದರಾಮಯ್ಯ- ನನ್ನ ಪ್ರಕಾರ ಬಜೆಟ್ ಗೂ ಈಗಲ್ಟನ್ ಗೂ ಸಂಬಂಧ ಇಲ್ಲ, ವಾಟ್ ಈಸ್ ದೇರ್ ಇನ್ ದಿ ಡಾಕ್ಯುಮೆಂಟ್? ನೀವು ಅಧಿಕಾರಕ್ಕೆ ಬಂದಿರಲಿಲ್ವಾ? ತನಿಖೆ ಮಾಡಿಸ್ರೀ, ಐ ರಿಕ್ವೆಸ್ಟ್ ಬಸವರಾಜ್ ಬೊಮ್ಮಾಯಿ ಟು ಇನ್ವೆಸ್ಟಿಗೇಟ್, ಯಾರು ಯಾರ ಪರ ಇದ್ದಾರೆ ಗೊತ್ತಾಗಲಿ, ಯಾರು ಕಮಿಷನ್ ತಗೊಂಡಿದ್ದಾರೆ ಗೊತ್ತಾಗಲಿ, ತನಿಖೆ ಮಾಡಿ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿ
(ಮಧ್ಯೆ ಪ್ರವೇಶಿಸಿದ) ಸಿಎಂ ಬೊಮ್ಮಾಯಿ- ಈಗಾಗಲೇ ಈ ಪ್ರಕರಣ ಸುಪ್ರೀಂ ಕೋರ್ಟ್ ವರೆಗೂ ಹೋಗಿದೆ, ಮ್ಯಾಟರ್ ಈಸ್ ಸೀಸ್ಡ್ ಅಪ್ ಬೈ ಕೋರ್ಟ್. ಮೊದಲನೆಯದಾಗಿ ನಾನು ಸ್ಟಡಿ ಮಾಡಬೇಕು, ಸರ್ಕಾರ ಇದರಲ್ಲಿ ಮಧ್ಯೆ ಪ್ರವೇಶ ಮಾಡಬಹುದೇ ಎಂಬ ಪ್ರಶ್ನೆ ಇದೆ, ನಾವು ಏನೇ ಮಾಡಿದರೂ ಕೋರ್ಟ್ ತೀರ್ಮಾನಕ್ಕೆ ಒಳಪಟ್ಟಿರುತ್ತದೆ, ಈ ಸ್ಥಿತಿಯಲ್ಲಿ ತನಿಖೆ ಮಾಡಬಹುದಾ ಎಂಬ ಲೀಗಲ್ ಅಡ್ವೈಸ್ ತೆಗೆದುಕೊಳ್ಳುತ್ತೇನೆ.
(ಮಧ್ಯೆ ಪ್ರವೇಶಿಸಿದ) ರಮೇಶ್ ಕುಮಾರ್- ಕುಮಾರಸ್ವಾಮಿ ಹೇಳ್ತಾರೆ 980 ಕೋಟಿ ರೂಪಾಯಿ ದಂಡ ಹಾಕಿದಾರೆ ಅಂತ, ವಿಪಕ್ಷ ನಾಯಕರು ಹೇಳ್ತಾರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿರೋದರಿಂದ ಅಷ್ಟು ದಂಡ ಹಾಕಿದಾರೆ ಅಂತ, ಒಂದು ವೇಳೆ ನಾವೇನಾದರೂ ಕಡಿಮೆ ದಂಡ ಹಾಕಿದ್ದರೆ ಕಮಿಷನ್ ತಗೊಂಡಿದ್ದಾರೆ ಅಂತಿದ್ರು, ಯಾವುದೇ ತನಿಖೆಗೆ ಸಿದ್ಧ. ಭಾರತ ರತ್ನ ಕೊಡಲಿ ಅಂತಿದಾರೆ, ಆದರೆ ಕುಮಾರಸ್ವಾಮಿ ಅವರು ದೊಡ್ಡವರು ಮೊದಲು ಅವರೇ ಭಾರತ ರತ್ನ ತಗೊಳ್ಳಲಿ, ಆಮೇಲೆ ನಾವು ತಗೋತೀವಿ, ಒಟ್ಟೊಟ್ಟಿಗೆ ಸರ್ಕಾರ ಮಾಡಿದೀವಿ, ಒಟ್ಟೊಟ್ಟಿಗೆ ಭಾರತ ರತ್ನ ತಗೋಳೋಣ.
ಇಂದೂ ಈಗಲ್ಟನ್ ರೆಸಾರ್ಟ್ ಚರ್ಚೆ ಮುಂದುವರಿಸಿದ ಕುಮಾರಸ್ವಾಮಿ:
ಇನ್ನು ವಿಧಾನಸಭೆಯಲ್ಲಿ ಇಂದೂ ಬಜೆಟ್ ಚರ್ಚೆ ಮುಂದುವರಿಸಿದ ಕುಮಾರಸ್ವಾಮಿ ನಿನ್ನೆ ಸಹಕಾರ ಇಲಾಖೆ ಹಾಗೂ ಈಗಲ್ಟನ್ ಹಗರಣದ ಬಗ್ಗೆ ಪ್ರಸಾಪಿಸಿದ್ದೆ. ನಿನ್ನೆ ನಾನು ಈಗಲ್ಟನ್ ಪ್ರಕರಣದಲ್ಲಿ ಆದ ಕಾನೂನು ತೊಡಕುಗಳ ಬಗ್ಗೆ, ಸರ್ಕಾರದ ತೀರ್ಮಾನಗಳ ಬಗ್ಗೆ ಚರ್ಚೆ ಮಾಡುತ್ತಿದ್ದೆ. 1994ರಿಂದ ಪ್ರಾರಂಭವಾದ ಭೂಮಿಯ ಪ್ರಕರಣ ಅದಾಗಿದೆ. 2011 ರಿಂದ 2014 ರವರೆಗೆ ನಾಲ್ಕು ಜನ ಜಿಲ್ಲಾಧಿಕಾರಿಗಳು ಕೊಟ್ಟ 3 ಕೋಟಿಯಿಂದ 980 ಕೋಟಿಗೆ ತಲುಪಿದ ಪ್ರಕರಣ ಅದಾಗಿದೆ. 2011 ರಲ್ಲಿ ಸುಪ್ರೀಂ ಕೋರ್ಟ್ ಕೊಟ್ಟ ಆದೇಶದ ಆಧಾರದ ಮೇಲೆ 2010 ರಲ್ಲಿ ಅಂದಿನ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿ ಸುಮಾರು 136 ಎಕರೆ ಭೂಮಿಗೆ ಮಾರುಕಟ್ಟೆ ದರವನ್ನು ನಿಗದಿ ಮಾಡಲು ನಾವು ತಯಾರಿ ಇದ್ದೇವೆ ಎಂದು ಸರ್ಕಾರದಿಂದಲೇ ಕೋರ್ಟ್ ಗೆ ಅರ್ಜಿ ಸಲ್ಲಿಸಿದರು.
ಅದರ ಆಧಾರದ ಮೇಲೆ ಕೋರ್ಟ್ ಆದೇಶ ಮಾಡಿತ್ತು. 28 ಎಕರೆ ಭೂಮಿಯನ್ನು ವಾಪಸ್ ವಶಪಡಿಸಿಕೊಳ್ಳುವುದು, ಇನ್ನೂ72 ಎಕರೆಗೆ ದರ ನಿಗದಿ ಮಾಡುವುದು ಎಂದಾಗಿತ್ತು. ಇದರ ಆಧಾರದ ಮೇಲೆ ಮೊದಲ ಡಿಸಿ ಕೊಟ್ಟ ವರದಿಯನ್ನು ಲಗತ್ತಿಸಿ ಸರ್ಕಾರಕ್ಕೆ ಮಾಹಿತಿ ಕೊಡುತ್ತಾರೆ. ಅದರಲ್ಲಿ 77 ಎಕರೆ ಭೂಮಿಯಲ್ಲಿ 71 ಎಕರೆ ಸರ್ಕಾರ ಭೂಮಿ, ಇನ್ನುಳಿದ ಆರು ಎಕರೆ ಸರ್ವೆ ನಲ್ಲಿ ವಿವಾದ ಇದೆ ಎಂದು ವರದಿ ಕೊಟ್ಟಿದ್ದರು. ಇದಾದ ನಂತರ 2011 ರಲ್ಲಿ ಕೋರ್ಟ್ ಆದೇಶ ಕೊಟ್ಟಿತ್ತು.
2010-11 ರ ಮಾರುಕಟ್ಟೆ ದರ ನಿಗದಿ ಮಾಡುವಂತೆ ಸೂಚನೆ ಕೊಟ್ಟಿತ್ತು. ಸೂಚನೆ ಆಧಾರದ ಮೇಲೆ ಡಿಸಿಗಳು ಸಭೆ ಮಾಡಿದರು. ಸಭೆಯಲ್ಲಿ 7-7-11ಕ್ಕೆ ಕಂದಾಯ ಇಲಾಖೆಯ ಮುಖ್ಯ ಕಾರ್ಯದರ್ಶಿಗೆ ಶಿಫಾರಸು ಮಾಡಿದ್ದರು. ಅವರು ಶಿಫಾರಸು ಮಾಡಿದ್ದ 7 ಕೋಟಿ ಮಾರ್ಕೆಟ್ ವ್ಯಾಲ್ಯೂ ನಿಗದಿ ಮಾಡಿದ್ರು. ಟೂರಿಸಂ ಪಾಲಿಸಿಯಲ್ಲಿ 50 % ಹಣ ನಿಗದಿ ಮಾಡಿ ಕಳಿಸಿದ ವರದಿ ಅದಾಗಿತ್ತು. ಅದರ ಆಧಾರದ ಮೇಲೆ ಸದನದ ಗಮನಕ್ಕೆ ತಂದಿದ್ದೇನೆ ಎಂದು ತಮ್ಮ ಮಾತು ಮುಗಿಸಿದರು. ಅದಕ್ಕೂ ಮುನ್ನ, ಈಗಲ್ಟನ್ಗೂ ನನಗೂ ಯಾವುದೇ ಸಂಬಂಧ ಇಲ್ಲ; ಅಲ್ಲಿ ಹೋಟೆಲ್ಗೆ ಹೋಗಿದ್ದೇನೆ ಅಷ್ಟೇ, ಅವರ ವ್ಯವಹಾರಗಳಿಗೂ ನನಗೂ ಸಂಬಂಧ ಇಲ್ಲ; ಪತ್ರಿಕೆಯಲ್ಲಿ ಬಂದ ವರದಿ ಆಧರಿಸಿ ಇಲ್ಲಿ ಪ್ರಸ್ತಾಪ ಮಾಡ್ತಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ಇದನ್ನು ಓದಿ:
ವಿಧಾನ ಸಭೆಯಲ್ಲಿ ಈಗಲ್ಟನ್ ರೆಸಾರ್ಟ್ ಖರೀದಿ ವ್ಯವಹಾರದ ಇಂಚಿಂಚೂ ಮಾಹಿತಿ ತೆರೆದಿಟ್ಟ ಜೆಡಿಎಸ್ ನಾಯಕ ಕುಮಾರಸ್ವಾಮಿ
HDK v/s Siddu : ಕಾಂಗ್ರೆಸ್ ವಿರುದ್ಧ ಆರೋಪ ಮಾಡ್ತಿರೋ ಕುಮಾರಸ್ವಾಮಿ ಮೇಲೆ ಸಿದ್ದು ಕಿಡಿಕಿಡಿ
Published On - 1:50 pm, Thu, 10 March 22