ರಾಮನಗರ: ನ್ಯಾಯಾಲಯಕ್ಕೆ ತಲೆಬಾಗಿ ಪಾದಯಾತ್ರೆಯನ್ನು ನಿಲ್ಲಿಸಿದ್ದೇವೆ. ಜನರ ಆರೋಗ್ಯ ಗಮನದಲ್ಲಿಟ್ಟುಕೊಂಡು ಪಾದಯಾತ್ರೆ ಸ್ಥಗಿತ ಮಾಡಿದ್ದೇವೆ. ನಮ್ಮನ್ನು ಬಂಧಿಸಿದ್ರೂ ಹೆದರಲ್ಲವೆಂದು ಅವರಿಗೆ ಗೊತ್ತಿತ್ತು. ಕೊರೊನಾ ಕಡಿಮೆಯಾದ ಬಳಿಕ ಪಾದಯಾತ್ರೆ ನಡೆಸುತ್ತೇವೆ ಎಂದು ಕಾಂಗ್ರೆಸ್‌ನಿಂದ ಮೇಕೆದಾಟು ಪಾದಯಾತ್ರೆ ಮೊಟಕು ವಿಚಾರವಾಗಿ ಟಿವಿ9ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಮೇಕೆದಾಟು ಪಾದಯಾತ್ರೆ ಅಂತ್ಯವಲ್ಲ, ಆರಂಭ. ಜನರ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಪಾದಯಾತ್ರೆ ಸ್ಥಗಿತವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಹುರುಪಿನಿಂದ ಪಾದಯಾತ್ರೆ ಮಾಡುತ್ತೇವೆ. ರಾಮನಗರದಿಂದಲೇ ಪಾದಯಾತ್ರೆ ಪುನಾರಂಭ ಮಾಡುತ್ತೇವೆ. ಪಾದಯಾತ್ರೆ ತುಂಬಾ ಖುಷಿ ತಂದಿದೆ, ಮತ್ತಷ್ಟು ಉತ್ಸಾಹ ಬಂದಿದೆ ಎಂದು ರಾಮನಗರದಲ್ಲಿ ಟಿವಿ9ಗೆ ಸಂಸದ ಡಿ.ಕೆ. ಸುರೇಶ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 12 ಸಾವಿರ ಕೇಸ್ ಬಂದಿದೆ. ಮುಂದೆ ಇನ್ನೂ ಹೆಚ್ಚಾಗಬಹುದೆಂದು ಪಾದಯಾತ್ರೆ ನಿಲ್ಲಿಸಿದ್ದೇವೆ. ಕಳೆದ 4 ದಿನಗಳಿಂದ ಪಾದಯಾತ್ರೆಗೆ ಜನಬೆಂಬಲ ವ್ಯಕ್ತವಾಗಿತ್ತು. ಕಾಂಗ್ರೆಸ್ ಪಾದಯಾತ್ರೆಯಿಂದ ಕೊರೊನಾ ಪ್ರಕರಣ ಹೆಚ್ಚಾಗಿಲ್ಲ. 5ರಿಂದ 10 ನಾಯಕರು ಪಾದಯಾತ್ರೆ ಮಾಡಬೇಕು ಎಂದಿತ್ತು. ಮತ್ತೆ ಜನ ಸೇರುತ್ತಾರೆಂದು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದೇವೆ ಎಂದು ರಾಮನಗರದಲ್ಲಿ ಟಿವಿ9ಗೆ ಚಲುವರಾಯಸ್ವಾಮಿ ಹೇಳಿಕೆ ನೀಡಿದ್ದಾರೆ.
ಜನರ ಭಾವನೆ ಅರ್ಥಮಾಡಿಕೊಂಡು ಪಾದಯಾತ್ರೆ ನಿಲ್ಲಿಸಿದ್ದೇವೆ. 3ನೇ ಅಲೆ ತಗ್ಗಿದ ಮೇಲೆ ಮತ್ತೆ ಪಾದಯಾತ್ರೆ ಆರಂಭಿಸುತ್ತೇವೆ ಎಂದು ಚಲುವರಾಯಸ್ವಾಮಿ ಹೇಳಿದ್ದಾರೆ. ಪಾದಯಾತ್ರೆ ತಾತ್ಕಾಲಿಕವಾಗಿ ಸ್ಥಗಿತವಾದರೂ ಜನಜಾತ್ರೆ ಮುಂದುವರಿದಿದೆ. ಮಾಯಗಾನಹಳ್ಳಿ ಬಳಿ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಬಳಿಯ ಮಾಯಗಾನಹಳ್ಳಿಯಲ್ಲಿ ಪಾದಯಾತ್ರೆಗೆ ಬಂದಿದ್ದ ಕಾರ್ಯಕರ್ತರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ.
ಸಿದ್ದರಾಮಯ್ಯಗೆ ಟಕ್ಕರ್ ಕೊಡುವುದೇ ಡಿ.ಕೆ. ಶಿವಕುಮಾರ್ಗೆ ಉದ್ದೇಶವಾಗಿತ್ತು: ಅಶ್ವತ್ಥ್ ನಾರಾಯಣ
ತಮ್ಮ ತಪ್ಪಿನ ಅರಿವಾಗಿ ಸೂಕ್ತ ನಿರ್ಣಯ ತೆಗೆದುಕೊಂಡಿದ್ದಾರೆ. ನಾಡಿನ ಸಮಸ್ತರು ಒಟ್ಟಾಗಿ ಸೇರಿ ಮಾಡಬೇಕಾದ ಯೋಜನೆಯನ್ನು ರಾಜಕೀಯ ಲಾಭದ ಏಕೈಕ ದುರುದ್ದೇಶದಿಂದ ಆರಂಭಿಸಿದ್ದರು. ಪಾದಯಾತ್ರೆ ಅವಶ್ಯಕತೆಯೇ ಇರಲಿಲ್ಲ. ಯಾರಾದರೂ ಬೇಡ ಅಂದಿದ್ದರೆ ಪಾದಯಾತ್ರೆ ಮಾಡಬೇಕಿತ್ತು. ಮೇಕೆದಾಟು ಯೋಜನೆ ಅನುಷ್ಠಾನದ ಬಗ್ಗೆ ಕಾಳಜಿ ಇಲ್ಲ. ಸಿದ್ದರಾಮಯ್ಯಗೆ ಟಕ್ಕರ್ ಕೊಡುವುದೇ ಡಿ.ಕೆ. ಶಿವಕುಮಾರ್ಗೆ ಉದ್ದೇಶವಾಗಿತ್ತು. ಈಗಲಾದರೂ ಸತ್ಯ ಅರಿತುಕೊಂಡು ಪಾದಯಾತ್ರೆ ನಿಲ್ಲಿಸಿದ್ದಾರೆ. ಪಾದಯಾತ್ರೆಯಿಂದ ಕೊವಿಡ್ ವೇಗವಾಗಿ ಹರಡಬಹುದು. ಪಾದಯಾತ್ರೆ ನಿಲ್ಲಿಸಿದ್ದಾರೆ ಹೀಗಾಗಿ ನಾವು ಟೀಕೆ ಮಾಡುವುದಿಲ್ಲ ಎಂದು ಕಾಂಗ್ರೆಸ್‌ನಿಂದ ಮೇಕೆದಾಟು ಪಾದಯಾತ್ರೆ ಮೊಟಕು ವಿಚಾರವಾಗಿ ರಾಮನಗರ ಉಸ್ತುವಾರಿ ಸಚಿವ ಡಾ.ಅಶ್ವತ್ಥ್ ಪ್ರತಿಕ್ರಿಯೆ ನೀಡಿದ್ದಾರೆ.
ಡಿ.ಕೆ. ಶಿವಕುಮಾರ್ ನಡೆದಿದ್ದು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತೆ: ಡಾ. ರಂಗನಾಥ್
ಡಿ.ಕೆ. ಶಿವಕುಮಾರ್ ಮಧ್ಯರಾತ್ರಿ 2 ಗಂಟೆಗೆ ಮಲಗಿ ಬೆಳಗ್ಗೆ 6 ಗಂಟೆಗೆ ಎದ್ದೇಳುತ್ತಿದ್ದರು. ಅವರಿಗೆ ಒಂದಷ್ಟು ಮೆಡಿಸಿನ್ ಕೊಡ್ತಿದ್ದೆ. ಕಾರ್ಯಕರ್ತರು ನೂಕುನುಗ್ಗಲಿನಿಂದ ಹೈರಾಣಾಗಿಬಿಡ್ತಿದ್ದರು. ಪಾದಯಾತ್ರೆ ನಿಂತಿದ್ದು ಬೇಸರವಿದೆ. ಆದ್ರೆ ಮತ್ತೆ ಮುಂದುವರಿಸುತ್ತೇವೆ. ಪಾದಯಾತ್ರೆ ಮುಗಿಸಿ ಬಂದ ಬಳಿಕ ನಾನೇ ಶಿವಕುಮಾರ್ ಅವ್ರ ಆರೋಗ್ಯ ನೋಡಿಕೊಳ್ಳುತ್ತಿದ್ದೆ. ಅವರು ನಡೆದಿದ್ದು ನೋಡಿದರೆ ನಿಜಕ್ಕೂ ನನಗೆ ಅಚ್ಚರಿಯಾಗುತ್ತೆ. ಡಿ.ಕೆ ಶಿವಕುಮಾರ್ಗೆ ಬಹುದೊಡ್ಡ ಶಕ್ತಿ ಡಿ.ಕೆ ಸುರೇಶ್. ಅವರಿಂದಲೇ ಈ ಪಾದಯಾತ್ರೆ ಇಷ್ಟುದಿನ ಯಶಸ್ವಿಯಾಗಿದ್ದು ಎಂದು ಕುಣಿಗಲ್ ಶಾಸಕ ಡಾ.ರಂಗನಾಥ್ ಹೇಳಿದ್ದಾರೆ.
ಇದನ್ನೂ ಓದಿ: Mekedatu Padayatra: ಮೇಕೆದಾಟು ಪಾದಯಾತ್ರೆ ಕೈಬಿಡುವಂತೆ ಡಿಕೆ ಶಿವಕುಮಾರ್ಗೆ ಎಸ್ಎಂ ಕೃಷ್ಣ ಪತ್ರ
ಇದನ್ನೂ ಓದಿ: Mekedatu Padayatra: ಪಾದಯಾತ್ರೆ ಮೊಟಕುಗೊಳಿಸಿದ ಕಾಂಗ್ರೆಸ್; ಹೈಕಮಾಂಡ್ ಆದೇಶಕ್ಕೆ ತಲೆಬಾಗಿದ ರಾಜ್ಯ ನಾಯಕರು
Published On - 3:54 pm, Thu, 13 January 22