Mekedatu Padayatra: ಪಾದಯಾತ್ರೆ ಮೊಟಕುಗೊಳಿಸಿದ ಕಾಂಗ್ರೆಸ್; ಹೈಕಮಾಂಡ್ ಆದೇಶಕ್ಕೆ ತಲೆಬಾಗಿದ ರಾಜ್ಯ ನಾಯಕರು
Rahul Gandhi | DK Shivakumar: ಮೇಕೆದಾಟು ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಕಾಂಗ್ರೆಸ್ ಮುಂದಾಗಿದೆ. ಕೊರೊನಾ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸ್ಥಿತಿ ತಿಳಿಯಾದ ಬಳಿಕ ಕಾಂಗ್ರೆಸ್ ಯಾತ್ರೆ ಮುಂದುವರೆಸಲಿದೆ.
ಮೇಕೆದಾಟು ಪಾದಯಾತ್ರೆಯನ್ನು ಮುಂದೂಡಲು ರಾಜ್ಯ ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಕಾಂಗ್ರೆಸ್ ಶಾಸಕಾಂಗ ಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದ ಸಭೆಯಲ್ಲಿ ತೀರ್ಮಾನ ಮಾಡಲಾಗಿದ್ದು, ಹೈಕಮಾಂಡ್ ಆದೇಶದಂತೆ ತಾತ್ಕಾಲಿಕವಾಗಿ ಪಾದಯಾತ್ರೆ ನಿಲ್ಲಿಸುವ ನಿರ್ಧಾರ ಕೈಗೊಳ್ಳಲಾಗಿದೆ. ರಾಮನಗರದ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆದಿದೆ. ಕೊವಿಡ್ ಕಡಿಮೆ ಆದ ಬಳಿಕ ಪಾದಯಾತ್ರೆ ಮುಂದುವರೆಯಲಿದೆ. ಪಾದಯಾತ್ರೆಯನ್ನು ನಿಲ್ಲಿಸಲು ಡಿಕೆ ಶಿವಕುಮಾರ್ ಅವರಿಗೆ ಮನಸ್ಸಿರಲಿಲ್ಲ. ಆದರೆ ಹೈಕಮಾಂಡ್ ನಿಲ್ಲಿಸುವಂತೆ ಹೇಳಿತ್ತು. ಇದೀಗ ಯಾತ್ರೆಯನ್ನು ನಿಲ್ಲಿಸದೇ ಮೊಟಕುಗೊಳಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಮುಂದುವರೆಸುವ ಯೋಜನೆಯನ್ನು ಕಾಂಗ್ರೆಸ್ ಹೊಂದಿದೆ. ಇದುವರೆಗೆ ಐದು ದಿನಗಳ ಯಾತ್ರೆ ನಡೆದಿದ್ದು, ಅದರ ಯಶಸ್ಸಿಗೆ ಕಾರಣರಾದವರಿಗೆ ರಾಜ್ಯ ಕಾಂಗ್ರೆಸ್ ನಾಯಕರು ಧನ್ಯವಾದ ಹೇಳಿದ್ದಾರೆ.
ಪಾದಯಾತ್ರೆ ನಿಲ್ಲಿಸುವಂತೆ ಹೈಕಮಾಂಡ್ ಸೂಚನೆ: ಇಂದು ರಾಜ್ಯ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆ ನಿಲ್ಲಿಸುವಂತೆ ಹೈಕಮಾಂಡ್ ಸೂಚನೆ ನೀಡಿತ್ತು. ರಣದೀಪ್ ಸುರ್ಜೇವಾಲ ಮೂಲಕ ಸಂದೇಶ ರವಾನಿಸಲಾಗಿತ್ತು. ಕೋರ್ಟ್ ವತಿಯಂದಲೇ ಆದೇಶ ಬರೋವರೆಗೂ ಪಾದಯಾತ್ರೆ ಮುಂದುವರಿಸುವ ಆಲೋಚನೆಯಲ್ಲಿದ್ದ ಕರ್ನಾಟಕ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನೆ ಮಾಡಿತ್ತು. ಅಲ್ಲದೇ ರಾಹುಲ್ ಗಾಂಧಿ ಕೂಡ ಡಿಕೆ ಶಿವಕುಮಾರ್ ಅವರಿಗೆ ಕರೆ ಮಾಡಿ ವಿವರಣೆ ಕೇಳಿದ್ದರು. ಅಲ್ಲದೇ ಯಾವುದೇ ಅಪವಾದ ಬರದಂತೆ ನೋಡಿಕೊಳ್ಳಲು ತಿಳಿಸಿದ್ದರು. ಇದೀಗ ರಾಜ್ಯ ನಾಯಕರು ಪಾದಯಾತ್ರೆ ಮೊಟಕುಗೊಳಿಸಿದ್ದು, ಪರಿಸ್ಥಿತಿ ಸುಧಾರಿಸಿದ ಬಳಿಕ ಮುಂದುವರೆಸುವ ನಿರ್ಧಾರ ತೆಗೆದುಕೊಂಡಿದ್ದಾರೆ.
ಪಾದಯಾತ್ರೆ ನಿಲ್ಲಿಸುವಂತೆ ಸಿಎಂ ಬೊಮ್ಮಾಯಿ ಮನವಿ: ವಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಸಿಎಂ ಬೊಮ್ಮಾಯಿ ಪತ್ರ ಬರೆದಿದ್ದು, ಮೇಕೆದಾಟು ಯೋಜನೆ ಜಾರಿಗೆ ಸಿದ್ಧ ಎಂದಿದ್ದಾರೆ. ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದು, ಮೇಕೆದಾಟು ಪಾದಯಾತ್ರೆ ಕೈಬಿಡುವಂತೆ ಕೋರಿದ್ದಾರೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧವಿದೆ. ಈಗಾಗಲೇ ಹೈಕೋರ್ಟ್ ತೀವ್ರವಾದ ಅಭಿಪ್ರಾಯ ನೀಡಿದೆ. ಹೈಕೋರ್ಟ್ ಅಭಿಪ್ರಾಯವೇ ಜನಾಭಿಪ್ರಾಯವೂ ಆಗಿದೆ. ಪಾದಯಾತ್ರೆ ಬಿಟ್ಟು ಕೊರೊನಾ ಎದುರಿಸೋಣ. ಮುಂಬರುವ ದಿನಗಳಲ್ಲಿ ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ. ಜನ ಸೇರಿಸಿ ಪಾದಯಾತ್ರೆ ಮಾಡುವುದು ಆರೋಗ್ಯ ದೃಷ್ಟಿಯಿಂದ ಸರಿಯಲ್ಲ. ಕೊರೊನಾ 3ನೇ ಅಲೆ ಮಕ್ಕಳ ಮೇಲೆ ತೀವ್ರವಾಗಿ ಅಪ್ಪಳಿಸಿದೆ. ಹಾಗಾಗಿ ಪಾದಯಾತ್ರೆ ಕೈಬಿಡುವಂತೆ ಸಿಎಂ ಮನವಿ ಮಾಡಿದ್ದಾರೆ.
ಇದನ್ನೂ ಓದಿ:
Mekedatu Padayatra Live: ಪಾದಯಾತ್ರೆ ಮುಂದುವರಿಸಲು ಡಿಕೆ ಶಿವಕುಮಾರ್ ಪಟ್ಟು
ತಕ್ಷಣ ಪಾದಯಾತ್ರೆ ನಿಲ್ಲಿಸಲು ರಣದೀಪ್ ಸುರ್ಜೇವಾಲ ಮೂಲಕ ಹೈಕಮಾಂಡ್ ಸಂದೇಶ ರವಾನೆ! ರಾಜ್ಯ ನಾಯಕರ ಮುಂದಿನ ನಡೆ ಏನು?
Published On - 12:31 pm, Thu, 13 January 22