ಅವರೆಲ್ಲ ಸರ್ಕಾರಿ ಕೆಲಸದಲ್ಲಿ ಇದ್ದು, ನಿವೃತ್ತಿ ಪಡೆದವರು. ಹೆಚ್ಚಿನ ಬಡ್ಡಿ ಬರುತ್ತೆ ಅಂತಾ ಅದೊಂದು ಕೋ ಅಪರೇಟೀವ್ ಕ್ರೆಡಿಟ್ ಸೊಸೈಟಿಯಲ್ಲಿ ಹಣವನ್ನ ಠೇವಣಿಯಾಗಿ ಇಟ್ಟಿದ್ರು. ನೀವು ನಮ್ಮ ಬ್ಯಾಂಕ್ ನಲ್ಲಿ ಹಣವನ್ನ ಠೇವಣಿಯಾಗಿ ಇಟ್ಟರೇ, ಬೇರೆ ಬ್ಯಾಂಕಿಗಿಂತ ಅಧಿಕ ಬಡ್ಡಿ ಕೊಡುವುದಾಗಿ ಹೇಳಿ ಬ್ಯಾಂಕ್ ಸಿಬ್ಬಂದಿ ಲಕ್ಷಾಂತರ ರೂ ಹಣವನ್ನ ಕಟ್ಟಿಸಿಕೊಂಡಿದ್ರು. ಆದರೆ ಇದೀಗ ಠೇವಣಿಯೂ (Deposit) ಇಲ್ಲ, ಬಡ್ಡಿಯೂ (Interest) ಇಲ್ಲದಂತೆ ಆಗಿದ್ದು, ವಂಚನೆಗೆ (Fraud) ಒಳಗಾದವರು ಪೊಲೀಸರ ಮೊರೆ ಹೋಗಿದ್ದಾರೆ. ಅಧಿಕ ಬಡ್ಡಿ ಆಸೆ ತೋರಿಸಿ ನೂರಾರು ಜನರಿಂದ ಠೇವಣಿ ಪಡೆದು, ಬಡ್ಡಿಯೂ ಇಲ್ಲದೆ, ಠೇವಣಿಯನ್ನೂ ನೀಡದೆ ವಂಚಿಸಿರುವ ಮತ್ತೊಂದು ಪ್ರಕರಣ ರಾಮನಗರ (Ramanagara) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಅಂದಹಾಗೆ ರಾಮನಗರ ಐಜೂರು ನಗರದಲ್ಲಿರುವ ಪಂಚವಟಿ ಮಲ್ಟಿಸ್ಟೇಟ್ ಕೋಆಪರೇಟೀವ್ ಕ್ರೆಡಿಟ್ ಸೊಸೈಟಿಯಿಂದ (Panchavati Multistate credit coop society) ಮಹಾ ದೋಖಾ ನಡೆದಿದ್ದು, ಠೇವಣಿಯಿಟ್ಟ ಬಹಳಷ್ಟು ಮಂದಿ ಕಂಗಲಾಗಿದ್ದು, ರಾಮನಗರದ ಸಿಇಎನ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸೊಸೈಟಿಯ 8 ಮಂದಿ ವಿರುದ್ದ ಎಫ್ಐಆರ್ ಕೂಡ ದಾಖಲಾಗಿದೆ. ಅಂದಹಾಗೆ ಸೊಸೈಟಿಯ ಕಾರ್ಯದರ್ಶಿ ಎನ್ನಲಾದ ಬೈರಲಿಂಗಯ್ಯ ಎಂಬಾತ ನಿವೃತ್ತಿ ಸರ್ಕಾರಿ ಅಧಿಕಾರಿಗಳಿಗೆ ಗಾಳ ಹಾಕಿ, ನಮ್ಮ ಬ್ಯಾಂಕ್ ನಲ್ಲಿ ಹಣವಿಟ್ಟರೆ ಬೇರೆ ಬ್ಯಾಂಕ್ ಗಳಿಗಿಂತ ಅಧಿಕ ಬಡ್ಡಿ ಕೊಡಿಸುವುದಾಗಿ ನಂಬಿಸಿದ್ದಾನೆ.
ಇದನ್ನು ನಂಬಿ ಬಹಳಷ್ಟು ಮಂದಿ ಲಕ್ಷ ಲಕ್ಷ ಹಣವನ್ನು ಸೊಸೈಟಿಯಲ್ಲಿ ಠೇವಣಿ ಇಟ್ಟಿದ್ದಾರೆ. ಪ್ರಾರಂಭದಲ್ಲಿ ಕೆಲ ತಿಂಗಳುಗಳ ಕಾಲ ಬಡ್ಡಿಯೂ ಕೂಡ ಸಂದಾಯವಾಗಿದೆ. ಆದರೆ ಬಾಂಡ್ ಮೆಚ್ಯುರಿಟಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಮ್ಮ ಠೇವಣಿ ಹಣವನ್ನು ವಾಪಾಸ್ ನೀಡುವಂತೆ ಬ್ಯಾಂಕ್ ನಲ್ಲಿ ಮನವಿ ನೀಡಿದ್ದಾರೆ. ಆದರೆ ಹಣ ಕೊಡಲು ಬ್ಯಾಂಕ್ ಸಿಬ್ಬಂದಿ ಸಬೂಬು ಹೇಳಿದ್ದಾರೆ.
ಹೀಗಾಗಿ ಕೇಂದ್ರ ಕಚೇರಿ ಎನ್ನಲಾದ ಬೆಂಗಳೂರಿನ ರಾಜಾಜಿನಗರದ ಕಚೇರಿಗೆ ಹೋಗಿ ವಿಚಾರಿಸೋಣ ಅಂದರೆ, ಅಲ್ಲಿಯೂ ಕೂಡ ಕಚೇರಿ ಬಂದ್ ಆಗಿದೆ. ಹೀಗಾಗಿ ಠೇವಣಿದಾರರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಬ್ಯಾಂಕ್ ಅಧ್ಯಕ್ಷ ರಾಜು, ಕಾರ್ಯದರ್ಶಿ ಬೈರಲಿಂಗಯ್ಯ, ನಿರ್ದೇಶಕ ಹರೀಶ್, ಲಿಂಗರಾಜು, ಸುರೇಶ್, ಬಸವಚಾರ್, ಚಂದ್ರಶೇಖರ್ ಸೇರಿದಂತೆ ಎಂಟು ಜನರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.
ಅಂದಹಾಗೆ ರಾಮನಗರ ಜಿಲ್ಲೆಯಲ್ಲಿಯೇ ಸಾಕಷ್ಟು ಜನರಿಗೆ ಈ ರೀತಿ ದೋಖಾವಾಗಿದ್ದು, ಪಂಚವಟಿ ಮಲ್ಟಿ ಸ್ಟೇಟ್ ಕೋ ಅಪರೇಟೀವ್ ಸೊಸೈಟಿ ಭಾರತ ಸರ್ಕಾರದಿಂದ ಅನುಮತಿ ಪಡೆದಿದೆ ಎಂದು ಸಹ ನಂಬಿಸಿದ್ದಾರೆ. ಸುಮಾರು 11 ಮಂದಿ ಠೇವಣಿದಾರರು ಪೊಲೀಸ್ ಠಾಣೆ ಮೊರೆ ಹೋಗಿದ್ದಾರೆ. ಕೇವಲ ಠೇವಣಿ ಮಾತ್ರ ಕಟ್ಟಿಸಿಕೊಳ್ಳದೇ ಕೆಲವಷ್ಟು ಷೇರುಗಳನ್ನು ಕೂಡ ಖರೀದಿಸುವಂತೆ ಒತ್ತಡ ಹಾಕಿ ಷೇರುಗಳನ್ನು ಕೂಡ ಮಾರಾಟ ಮಾಡಿ ಹಣವನ್ನು ಕಟ್ಟಿಸಿಕೊಂಡಿದ್ದಾರೆ.
ಜೊತೆಗೆ ಆರ್ ಡಿ ಕೂಡ ಕಟ್ಟಿಸಿಕೊಂಡಿದ್ದಾರೆ. ಆದರೆ ಇದುವರೆಗೂ ಯಾವುದನ್ನೂ ಕೂಡ ವಾಪಾಸ್ ಕೊಟ್ಟಿಲ್ಲಿ. ಇನ್ನು ಇದು ಹೆಸರಿಗೆ ತಕ್ಕಂತೆ ಮಲ್ಪಿ ಸ್ಟೇಟ್ ವಂಚನೆ ಆಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಅಂದಾಜಿಸಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ಈಗಾಗಲೇ ಶಾಖೆಗಳನ್ನು ತೆರೆದು, ಮುಚ್ಚಲಾಗಿದೆ ಎಂದು ತಿಳಿದು ಬಂದಿದೆ. ಹೊರ ರಾಜ್ಯಗಳಲ್ಲಿಯೂ ಸಹ ಇದೇ ರೀತಿ ಗ್ರಾಹಕರಿಗೆ ವಂಚನೆ ಮಾಡಿರುವ ಸಾಧ್ಯತೆಯಿದ್ದು ಈ ನಿಟ್ಟಿನಲ್ಲೂ ಕೂಡ ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಸಂತೋಷ್ ಬಾಬು ಕೆ, ರಾಮನಗರ ಎಸ್ ಪಿ ಮಾಹಿತಿ ನೀಡಿದ್ದಾರೆ.
ಒಟ್ಟಾರೆ ನಿವೃತ್ತ ಅಧಿಕಾರಿಗಳನ್ನೇ ಯಾಮಾರಿಸಿ ಹಣವನ್ನ ಕಟ್ಟಿಸಿಕೊಂಡು ವಾಪಾಸ್ ನೀಡದೇ ಬ್ಯಾಂಕ್ ನಿಂದ ದೋಖಾ ನಡೆದಿದೆ. ಪೊಲೀಸರ ವಿಚಾರಣೆ ನಂತರವಷ್ಟೇ ಮತ್ತಷ್ಟು ಸತ್ಯಾಸತ್ಯತೆ ತಿಳಿದು ಬರಲಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ವರದಿ: ಪ್ರಶಾಂತ್ ಹುಲಿಕೆರೆ, ಟಿವಿ9, ರಾಮನಗರ