ವಿಧಾನಸೌಧದಲ್ಲಿ ದಾಖಲೆ ಬಿಡುಗಡೆ ಮಾಡ್ತೀನಿ: ಅಚ್ಚರಿ ಮೂಡಿಸಿದ ಕುಮಾರಸ್ವಾಮಿ ಹೇಳಿಕೆ
ಯಾರಿಗಾದ್ರೂ ಅನ್ಯಾಯವಾದರೆ ಆ ವಿಷಯವನ್ನು ಜನರ ಮುಂದೆ ಇಡುತ್ತೇನೆ. ಯಾವ ವಿಚಾರ ಮಾತನಾಡಬೇಕೆಂದು ಇವರಿಂದ ಕಲಿಯಬೇಕೆ ಎಂದು ಪ್ರಶ್ನಿಸಿದರು.
ರಾಮನಗರ: ವಿಧಾನಸೌಧದಲ್ಲಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ತಾಲ್ಲೂಕಿನ ಅವ್ವೇರಹಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ (HD Kumaraswamy) ಹೇಳಿದರು. ಸಂಸದ ಡಿ.ಕೆ.ಸುರೇಶ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಅವರು, ‘ನನಗೆ ಹೇಳಲು ಅವನು ಯಾರು’ ಎಂದು ಪ್ರಶ್ನಿಸಿದರು. ‘ನನ್ನ ಸುದ್ದಿಗೆ ಬರಬೇಕಿಲ್ಲ. ಇವರ ಹಿನ್ನೆಲೆ ನನಗೆ ಗೊತ್ತಿಲ್ಲವೇ? ಕಂಡವರ ಜಮೀನು ಲೂಟಿ ಹಾಗೂ ಕಿಡ್ನ್ಯಾಪ್ ಮಾಡಿಸುವುದು. ಹೆದರಿಸಿ ಸಹಿ ಹಾಕಿಸಿಕೊಳ್ಳುವ ಕೆಲಸವನ್ನು ನಾನು ಈ ಜೀವನದಲ್ಲಿ ಮಾಡಿಲ್ಲ’ ಎಂದರು.
ಯಾರಿಗಾದ್ರೂ ಅನ್ಯಾಯವಾದರೆ ಆ ವಿಷಯವನ್ನು ಜನರ ಮುಂದೆ ಇಡುತ್ತೇನೆ. ಯಾವ ವಿಚಾರ ಮಾತನಾಡಬೇಕೆಂದು ಇವರಿಂದ ಕಲಿಯಬೇಕೆ? ಹಣದ ದಾಹಕ್ಕೆ ಎಷ್ಟು ರೈತರ ಕುಟುಂಬ ಹಾಳು ಮಾಡಿದ್ದೀರಿ? ಭೂಮಿ ಒತ್ತುವರಿ ಮಾಡಿ ಬಂಡೆ ಒಡೆದು ವಿದೇಶಕ್ಕೆ ಸಾಗಿಸಿದ್ದಾರೆ. ಇವರಿಂದ ನಾನು ಬುದ್ಧಿ ಕಲಿಯಬೇಕಾ? ನೀರಾವರಿ ವಿಚಾರವಾಗಿ ನಾನು ಸತತ ಮೂರು ಗಂಟೆ ಮಾತನಾಡಿದ್ದೇನೆ. ಒಂದು ವಿಚಾರದ ಬಗ್ಗೆ ಇವರ ಬಳಿ ಮಾಹಿತಿ ಇದೆಯೇ? ಈಗಲ್‌ಟನ್ ರೆಸಾರ್ಟ್ ಪ್ರಕರಣದಲ್ಲಿ ಆದೇಶ ಉಲ್ಲಂಘಿಸಿದ ಬಗ್ಗೆ ನಾನು ಚರ್ಚಿಸಿದ್ದೇನೆ. ಜನಪ್ರತಿನಿಧಿಯಾಗಿ ಈ ರೀತಿ ಮಾಡಿದ್ದು ತಪ್ಪೆ? ಸರ್ಕಾರ ನಡೆಸುವವರು ಸಹಿ ಹಾಕಬೇಕಾದರೆ ಪೂರ್ವಾಪರ ಯೋಚಿಸಬೇಕು. ಕಾಂಗ್ರೆಸ್ ಸರ್ಕಾರದಲ್ಲಿ ತಾನೇ ಇದು ಆಗಿರುವುದು ಎಂದು ಪ್ರಶ್ನಿಸಿದರು.
ಈಗಲ್ಟನ್ಗೆ 98 ಸಾವಿರ ಬಿಲ್ ಕೊಡಬೇಕು ಎಂದು 980 ಕೋಟಿ ಮಾಡಿದ್ದು ಯಾರು? ಈ ಅನ್ಯಾಯದ ವಿಚಾರವನ್ನು ಜನರ ಮುಂದೆ ಇಡಲು ನಾನು ಸಿದ್ಧತೆ ಮಾಡಿಕೊಂಡಿದ್ದೇನೆ. ನಾನು ಯಾವ ವಿಷಯ ಮಾತನಾಡಬೇಕು ಎಂಬುದನ್ನು ಇವರಿಂದ ಕಲಿಯಬೇಕೆ? ಕನಕಪುರದಲ್ಲಿ ಹಣದ ದಾಹಕ್ಕೆ ಎಷ್ಟೋ ರೈತ ಕುಟುಂಬಗಳನ್ನು ಹಾಳು ಮಾಡಿದರು. ಜಮೀನು ಒತ್ತುವರಿ ಮಾಡಿ ಬಂಡೆಗಳನ್ನು ಒಡೆದು ವಿದೇಶಕ್ಕೆ ಸಾಗಿಸಿದರು ಎಂದು ನೇರ ಆರೋಪ ಮಾಡಿದರು.
ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನನ್ನ ಕ್ಷೇತ್ರಕ್ಕೆ ಬರಲು ಇವರ ಅನುಮತಿ ಪಡೆಯಬೇಕೆ ಎಂದು ಪ್ರಶ್ನಿಸಿದರು. ರಾಮನಗರ ಜಿಲ್ಲೆಗೆ ನಾನು ಕೊಟ್ಟಿರುವ ಕೊಡುಗೆ ಸಾಕಷ್ಟು ಇದೆ. ಇವರುಗಳು ಏನು ಮಾಡಿದ್ದಾರೆ? ಆಲಿಬಾಬಾ 40 ಮಂದಿ ಕಳ್ಳರು ಅಂತಾರಲ್ಲ ಹಾಗೆ ಇವರೆಲ್ಲರೂ ಆವರಿಸಿಕೊಂಡಿದ್ದಾರೆ ಜನರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಜನರಿಗೆ ರಕ್ಷಣೆ ಕೊಡಲು ಬಂದಿದ್ದೇನೆ. ನಾವು ಯಾರೊಬ್ಬರ ಆಸ್ತಿಯನ್ನೂ ಲೂಟಿ ಮಾಡಲು ಬಂದಿಲ್ಲ. ಯಾರಾರಾ ಜಮೀನನ್ನು ಯೋಗೇಶ್ವರ್ ಬರೆಸಿಕೊಂಡಿದ್ದಾನೆ ಎಂದು ಗೊತ್ತಿದೆ. ಚನ್ನಪಟ್ಟಣದಲ್ಲಿ ಸುಳ್ಳು ದಾಖಲೆ ಸೃಷ್ಟಿ ಮಾಡಿ ಜಮೀನುಗಳನ್ನ ಬರೆಸಿಕೊಂಡಿರುವವರ ಭವಿಷ್ಯವನ್ನು ಜನರು 2023ರಲ್ಲಿ ತೀರ್ಮಾನ ಮಾಡುತ್ತಾರೆ ಎಂದರು.
ಕೆಲಸಗಳು ಆಗಲು ಪ್ರಯತ್ನ ಪಡುವುದು ನಾನು. ಟೇಪ್ ಕಟ್ ಮಾಡಿ, ಗುದ್ದಲಿಪೂಜೆ ಮಾಡಿ ಭಾಷಣ ಮಾಡಲು ಬರುವುದು ಇವರು. ಜನರ ಮುಂದೆ ಶೋ ಮಾಡುತ್ತಾರೆ. ಚುನಾವಣಾ ವರ್ಷದಲ್ಲಿ ವಿವಿಧ ಪಕ್ಷಗಳು ಆಫರ್ ಕೊಡುತ್ತವೆ. ರಾಜ್ಯದಲ್ಲಿ ಶೀಘ್ರದಲ್ಲಿಯೇ ಸಾಕಷ್ಟು ಬದಲಾವಣೆ ಆಗಲಿದೆ. ನನಗೆ ಆತುರವಿಲ್ಲ. ನನ್ನನ್ನ ಬಹಳಷ್ಟು ಜನ ಭೇಟಿ ಆಗಿದ್ದಾರೆ. ಪಕ್ಷಕ್ಕೆ ಬನ್ನಿ ಎಂದು ಯಾರನ್ನು ಕರೆದಿಲ್ಲ. ಪ್ರೀತಿಯಿಂದ ಬರಬೇಕು, ಬಲವಂತ ಮಾಡಲ್ಲ ಎಂದು ವಿವರಿಸಿದರು.
ಇದನ್ನೂ ಓದಿ: CM Ibrahim: ದೇವೇಗೌಡ-ಕುಮಾರಸ್ವಾಮಿ ಜೊತೆ ಚರ್ಚೆ ಫಲಪ್ರದ, ಮಾತುಕತೆಯಿಂದ ಸಂತೋಷವಾಗಿದೆ ಎಂದ ಸಿ ಎಂ ಇಬ್ರಾಹಿಂ
ಇದನ್ನೂ ಓದಿ: ಸಿಎಂ ಬೊಮ್ಮಾಯಿಗೆ ಹೇಳಿ ಉಚಿತವಾಗಿ ಬರೆಸಿಕೊಡಲಿ; ಈಗಲ್ಟನ್ ವಿಚಾರವಾಗಿ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಡಿಕೆ ಸುರೇಶ್