ಬಿಎಸ್ ಯಡಿಯೂರಪ್ಪ ಪಕ್ಷ ತ್ಯಾಗಕ್ಕೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆಯೇ ಇಲ್ಲ: ಇದು ಅಭ್ಯರ್ಥಿ ಆಗುವ ವಿಚಾರಕ್ಕೆ ಪ್ರಚಾರ ಕೊಡ್ತಿದ್ದಾರೆ ಅಷ್ಟೇ
ಜನರ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಬಿಜೆಪಿ ಅಧಿಕಾರ ಹಿಡಿಯುವುದಲ್ಲ. ಬಿಜೆಪಿ ಅವರ ಹವ್ಯಾಸವೇ ಪ್ರಚಾರ ಪಡೆದು ಅಧಿಕಾರಕ್ಕೆ ಬರುವುದು. ಬಿಜೆಪಿ ಪಕ್ಷದಲ್ಲಿ 75 ವರ್ಷ ಆಗಿರುವವರು ನಿರ್ಗಮಿಸಬೇಕು ಅಂತ ಇದೆ.

ರಾಮನಗರ: ಬಿ.ಎಸ್. ಯಡಿಯೂರಪ್ಪ(BS Yediyurappa) ಶಿಕಾರಿಪುರ ಕ್ಷೇತ್ರ ವಿಜಯೇಂದ್ರಗೆ ಬಿಟ್ಟುಕೊಟ್ಟ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ(HD Kumaraswamy), ಇದಕ್ಕೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆಯೇ ಇಲ್ಲ. ಅಭ್ಯರ್ಥಿ ಆಗುವ ವಿಚಾರಕ್ಕೆ ಇವರು ಪ್ರಚಾರ ಕೊಡುತ್ತಿದ್ದಾರೆ ಅಷ್ಟೇ ಎಂದಿದ್ದಾರೆ.
ಜನರ ಸಮಸ್ಯೆಗಳಿಗೆ ಪರಿಹಾರ ಕೊಟ್ಟು ಬಿಜೆಪಿ ಅಧಿಕಾರ ಹಿಡಿಯುವುದಲ್ಲ. ಬಿಜೆಪಿ ಅವರ ಹವ್ಯಾಸವೇ ಪ್ರಚಾರ ಪಡೆದು ಅಧಿಕಾರಕ್ಕೆ ಬರುವುದು. ಬಿಜೆಪಿ ಪಕ್ಷದಲ್ಲಿ 75 ವರ್ಷ ಆಗಿರುವವರು ನಿರ್ಗಮಿಸಬೇಕು ಅಂತ ಇದೆ. ರಾಜಕೀಯದಲ್ಲಿ ದೊಡ್ಡಮಟ್ಟದ ಬೆಳವಣಿಗೆ ಅನ್ನೋ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಾರೆ ಎಂದು ಹೆಚ್ಡಿಕೆ ವ್ಯಂಗ್ಯವಾಡಿದ್ದಾರೆ.
ನಾನು ಶಾಸಕನಾಗೋದು ಮುಖ್ಯವಲ್ಲ, ಅಭ್ಯರ್ಥಿಗಳನ್ನ ಗೆಲ್ಲಿಸಿ ಬರುತ್ತೇನೆ
ಇನ್ನು ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, ರಾಮನಗರದಲ್ಲಿ ವನಿತಾ ಕುಮಾರಸ್ವಾಮಿ ಅಥವಾ ನಿಖಿಲ್ ನಿಲ್ಲಬೇಕು ಅಂತ ಹೇಳ್ತಿದ್ದಾರೆ. ನಿಖಿಲ್ ನಾನು ಶಾಸಕನಾಗೋದು ಮುಖ್ಯವಲ್ಲ, ಅಭ್ಯರ್ಥಿಗಳನ್ನ ಗೆಲ್ಲಿಸಿ ಬರುತ್ತೇನೆ ಎನ್ನುತ್ತಿದ್ದಾರೆ. ಪಕ್ಷದಲ್ಲಿ ಕನಿಷ್ಟ 30-40 ಸ್ಥಾನ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ. ಮಂಡ್ಯದಲ್ಲೂ ನಿಲ್ಲಬೇಡ ಅಂತ ಹೇಳಿದ್ದೆ, ಶಾಸಕರ ಒತ್ತಡದಿಂದ ನಿಂತರು. ಈಗ ಅದು ನಿಖಿಲ್ ಅರ್ಥ ಆಗಿದೆ, ಹಾಗಾಗಿ ಪಕ್ಷ ಇದ್ರೆ ನಾವು ಅನ್ನೋದು ಅರ್ಥ ಆಗಿದೆ. ಈಗ ಚುನಾವಣೆ ಸ್ಪರ್ಧೆ ಬಿಟ್ಟು ಪಕ್ಷ ಸಂಘಟನೆ ಮಾಡುವ ಬಗ್ಗೆ ಆಲೋಚನೆ ಮಾಡಿದ್ದಾರೆ ಎಂದರು.
ಸಿದ್ದರಾಮಯ್ಯ ಅವಧಿಯಲ್ಲೂ ಹಲವು ಅಕ್ರಮಗಳು ನಡೆದಿವೆ
ಸಿದ್ದರಾಮಯ್ಯ ಆಡಳಿತದ ಸಾಧನೆ ಕುರಿತ ಪುಸ್ತಕ ಬಿಡುಗಡೆ ವಿಚಾರವಾಗಿ ಸಿದ್ದರಾಮಯ್ಯ ಆಡಳಿತದ ಬಗ್ಗೆ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮರಳು ದಂಧೆ ಎಷ್ಟು ನಡೀತು, ಸಬ್ ಇನ್ಸ್ ಪೆಕ್ಟರ್ ನೇಮಕಾತಿ ಅಕ್ರಮ ಸೇರಿದಂತೆ ಸಿದ್ದರಾಮಯ್ಯ ಕಾಲದಲ್ಲೂ ಸಹ ಅಕ್ರಮ ನಡೆದಿದೆ. ಅದು ಅಷ್ಟೇ ಅಲ್ಲ ಪಿಯುಸಿ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಲೀಕ್ ಆಗಿವೆ. ಯಾರ ಮೇಲೆ ಕ್ರಮ ಕೈಗೊಂಡರು? ಸಮಾಜ ಕಲ್ಯಾಣ ಇಲಾಖೆಯಲ್ಲಿ ಹಾಸಿಗೆ ಕೊಡುವುದರಲ್ಲೂ ದುಡ್ಡು ತಿಂದ್ರು. ಚುನಾವಣೆ ಬಿರುಸು ಶುರುವಾಗಿದೆ. ನಾಡಿನ ಜನತೆ ಹಾಗೂ ಜನರ ಆಶೀರ್ವಾದ ಇರಬೇಕು ಸಿಎಂ ಆಗಲು. ಇವತ್ತಿನ ಪರಿಸ್ಥಿತಿಯಲ್ಲಿ ಈಗ ಚುನಾವಣೆ ನಡೆದ್ರೂ ಸಹ 15-20 ಕ್ಕೂ ಹೆಚ್ಚು ಸ್ಥಾನ ಗೆಲ್ಲುತ್ತೇವೆ ಎಂದರು. ಜೊತೆಗೆ ರಾಮನಗರದಲ್ಲಿ ಡಿಕೆ ಸುರೇಶ್ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿ ಯಾರೇ ಬಂದ್ರೂ ನಾವು ಚುನಾವಣೆ ಎದುರಿಸುತ್ತೇವೆ. ರಾಜಕೀಯ ಜನ್ಮ ಕೊಟ್ಟ ಭೂಮಿ ರಾಮನಗರ ಎಂದು ಗುಡುಗಿದರು.
ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು
ಹೆಚ್‌ಡಿಕೆರನ್ನೇ ಸೋಲಿಸಿದ್ದೇನೆಂದು ಡಿಕೆಶಿ ಹೇಳಿಕೆಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಹೆಚ್‌ಡಿಡಿ ವಿರುದ್ಧ ಡಿಕೆಶಿ 2 ಸಲ ಸೋತಿದ್ದಾರೆಂದು ತಿರುಗೇಟು ಕೊಟ್ಟಿದ್ದಾರೆ. ಡಿಕೆಶಿ ವಿರುದ್ಧ ಸೋತಾಗ ರಾಜಕೀಯ ಅಂಬೆಗಾಲು ಇಡುತ್ತಿದ್ದೆ. ಡಿಕೆಶಿ ಚುನಾವಣೆ ಗೆದ್ದು ಬಂದಿರುವ ಇತಿಹಾಸ ನಮಗೂ ಗೊತ್ತು. ಯಾವ ರೀತಿಯಲ್ಲಿ ಡಿಕೆಶಿ ಚುನಾವಣೆ ಗೆದ್ದಿದ್ದಾರೆ ಗೊತ್ತಿಲ್ಲವಾ? ಡಿಕೆಶಿ ಎಲೆಕ್ಷನ್‌ನಲ್ಲಿ ಗೆದ್ದ ಬಗ್ಗೆ ದೊಡ್ಡ ಪುಸ್ತಕ ಬರೆಯಬಹುದು ಎಂದು ಟೀಕೆ ಮಾಡಿದ್ದಾರೆ.
ಡಿಕೆಶಿ ಒಕ್ಳಲಿಗ ಟ್ರಂಪ್ ಕಾರ್ಡ್ ಎಂಬ ವಿಚಾರಕ್ಕೆ, ಯಾರೂ ಯಾವ ಟ್ರಂಪ್ ಕಾರ್ಡ್ ಆದ್ರೂ ಬಳಸಲಿ. ಅಂತಿಮವಾಗಿ ಮತದಾರ ತೀರ್ಮಾನ ಮಾಡುತ್ತಾರೆ. ಸುಮ್ಮನೆ ನಾನು ಸಿಎಂ. ಸಿಎಂ ಅಂದ್ರೆ ಸಾಲದು. ಡಿಕೆ ಶಿವಕುಮಾರ್ ಆ ರೀತಿಯಲ್ಲಿ ಆಸೆಪಡುವುದು ತಪ್ಪಲ್ಲ. ಆದರೆ ಅಭಿವೃದ್ಧಿ ಹೇಗೆ ಮಾಡಿದ್ದೇವೆ, ಮಾಡುತ್ತೇವೆ ಅನ್ನೋದು ಮುಖ್ಯ ಎಂದರು.
Published On - 3:27 pm, Sun, 24 July 22




