ರಾಮನಗರ ನ.24: ಕಂದಾಯಕ್ಕೆ ಸಂಬಂಧಿಸಿದ ಮೇಲ್ಮನವಿ ಪ್ರಕರಣಗಳ ಉಪ ವಿಭಾಗಾಧಿಕಾರಿ ನ್ಯಾಯಾಲಯವನ್ನು ಜಿಲ್ಲಾ ಕೇಂದ್ರ ರಾಮನಗರ (Ramnagar) ದಿಂದ ಕನಕಪುರ ತಾಲೂಕು ಕೇಂದ್ರಕ್ಕೆ ಸ್ಥಳಾಂತರಿಸಿರುವುದನ್ನು ಖಂಡಿಸಿ, ಜಿಲ್ಲಾಡಳಿತದ ವಿರುದ್ಧ ರಾಮನಗರ ವಕೀಲರ ಸಂಘ ಪ್ರತಿಭಟನೆ ನಡೆಸಿತು. ವಕೀಲರ (Lawyers) ಪ್ರತಿಭಟನೆಗೆ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಮನಗರ ನ್ಯಾಯಾಲಯಕ್ಕೆ ಭೇಟಿ ನೀಡಿ ವಕೀಲರೊಂದಿಗೆ ಕೆಲಕಾಲ ಚರ್ಚಿಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಹೆಚ್ಡಿ ಕುಮಾರಸ್ವಾಮಿ, ಉಪವಿಭಾಗಧಿಕಾರಿ ನ್ಯಾಯಾಲಯವನ್ನು ಒಂದು ತಾಲೂಕಿನಲ್ಲಿ ನಡೆಸಲು ತೀರ್ಮಾನ ಮಾಡಿದ್ದಾರೆ. ಇಂತಹ ತೀರ್ಮಾನ ರಾಜ್ಯದ ಯಾವುದೇ ಕ್ಷೇತ್ರದಲ್ಲಿ ಇಲ್ಲ. ಈ ರೀತಿಯ ತೀರ್ಮಾನ ಎಲ್ಲರಿಗೂ ಅಚ್ಚರಿ ತಂದಿದೆ ಎಂದು ಹೇಳಿದರು.
ಈ ನಿರ್ಣಯದ ಬಗ್ಗೆ ವಕೀಲರು ಪ್ರತಿಭಟನೆ ಮಾಡಿದ್ದಾರೆ. ಅವೈಜ್ಞಾನಿಕ ನಿರ್ಧಾರ ಸರಿಯಲ್ಲ. ಇದು ಸರ್ಕಾರದ ಆದೇಶವೋ, ಜಿಲಾಧಿಕಾರಿ ಆದೇಶವೋ ಅಥವಾ ಎಸಿಯವರ ಸ್ವಂತ ತೀರ್ಮಾನವೇ? ಹಾಗೆ ಮಾಡುವುದಿದ್ದರೇ ನಮ್ಮ ತಾಲೂಕಿನಲ್ಲೂ ಬಂದು ಉಪ ವಿಭಾಗಾಧಿಕಾರಿ ನ್ಯಾಯಾಲಯ ನಡೆಸಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ: ರಾಮನಗರ: ಕೋರ್ಟ್ ಆವರಣದಲ್ಲೇ ಶಾಸಕ ಇಕ್ಬಾಲ್ ಹುಸೇನ್ ತರಾಟೆಗೆ ತೆಗೆದುಕೊಂಡ ವಕೀಲರು
ಇದು ತುಘಲಕ್ ಸಂಸ್ಕೃತಿ. ಈ ರೀತಿಯ ತೀರ್ಮಾನ ಮಾಡಲು ಅವಕಾಶವಿಲ್ಲ. ಮಾಡಿದರೇ ಇಡೀ ರಾಜ್ಯಕ್ಕೆ ಅನ್ವಯವಾಗುವ ಹಾಗೆ ಮಾಡಿ. ಕೇವಲ ಕನಕಪುರಕ್ಕೆ ಮಾತ್ರ ಏಕೆ. ಜಿಲ್ಲಾ ಕೇಂದ್ರದಿಂದ ಎಸಿ ಕೋರ್ಟ್ನ್ನು ತಾಲೂಕಿಗೆ ಸ್ಥಳಾಂತರ ಮಾಡೋದು ಎಷ್ಟು ಸರಿ ? ನಿಮ್ಮ (ವಕೀಲರ) ಪರವಾಗಿ ನಾನು ಸದನದಲ್ಲಿ ಪ್ರಸ್ತಾಪ ಮಾಡುತ್ತೇವೆ. ಸರ್ಕಾರದ ಹುಡುಗಾಟಿಕೆಯ ನಿರ್ಧಾರದ ಬಗ್ಗೆ ಧ್ವನಿ ಎತ್ತಬೇಕು. ಸಮಸ್ಯೆಗಳನ್ನು ಇವರೇ ಉದ್ಭವ ಮಾಡುತ್ತಾರೆ. ನಾನು ನಿಮ್ಮ ಜೊತೆ ಇರುತ್ತೇನೆ, ಸದನದಲ್ಲಿ ಇದನ್ನ ಚರ್ಚೆ ಮಾಡುತ್ತೇನೆ ಎಂದು ವಕೀಲರಿಗೆ ಭರವಸೆ ನೀಡಿದರು.
ಕಂದಾಯಕ್ಕೆ ಸಂಬಂಧಿಸಿದ ಮೇಲ್ಮನವಿ ಪ್ರಕರಣಗಳ ಉಪ ವಿಭಾಗಾಧಿಕಾರಿ ನ್ಯಾಯಾಲಯವನ್ನು ಜಿಲ್ಲಾ ಕೇಂದ್ರ ರಾಮನಗರದಿಂದ ಕನಕಪುರ ತಾಲೂಕು ಕೇಂದ್ರಕ್ಕೆ ಸ್ಥಳಾಂತರಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇದರ ವಿರುದ್ಧ ವಕೀಲರು ಪ್ರತಿಭಟನೆ ಮಾಡುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:38 pm, Fri, 24 November 23