ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಳೆದ ವಾರ ವಿಧಾನಸಭೆಯಲ್ಲಿ ಮಂಡಿಸಿದ್ದ ಚೊಚ್ಚಲ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ (JDS MLA HD Kumaraswamy) ದಾಖಲೆಗಳ ಸಮೇತವಾಗಿ ಈಗಲ್ಟನ್ ರೆಸಾರ್ಟ್ ಬಗ್ಗೆ (Eagleton Resort Bidadi, Ramanagar) ಸದನದಲ್ಲಿ ಪ್ರಸ್ತಾಪ ಮಾಡಿದರು. ಈಗಲ್ಟನ್ ರೆಸಾರ್ಟ್ ಜಮೀನು ವಹಿವಾಟು, ದರ ನಿಗದಿ ಸಂಬಂಧ ಸುಪ್ರೀಂ ಕೋರ್ಟ್ ಆದೇಶ, ಸರ್ಕಾರಿ ಆದೇಶಗಳನ್ನು ಸವಿವರವಾಗಿ ಸದನದ ಮುಂದೆ ಇಟ್ಟ ಕುಮಾರಸ್ವಾಮಿ 2009ರಲ್ಲಿ ಸುಪ್ರೀಂ ಕೋರ್ಟ್ ಆದೇಶ ಮಾಡಿ ಭೂಮಿ ಅತಿಕ್ರಮಣ ಮಾಡಿದನ್ನು ಪತ್ತೆ ಮಾಡುವುದು ಅಗತ್ಯವಾಗಿದೆ. ಕೆಐಡಿಬಿ ಸರ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆಗೂಡಿ ಜಮೀನನ್ನು ಸರ್ವೆ ಮಾಡಬೇಕು. ಬಳಿಕ ಒತ್ತುವರಿ ಮಾಡಿದ ಜಮೀನನ್ನು ವಶಕ್ಕೆ ಪಡೆಯಬೇಕು ಎಂದು ಸೂಚನೆ ನೀಡಿತ್ತು ಎಂದು ಹೇಳಿದರು.
ಈಗಲ್ಟನ್ ರೆಸಾರ್ಟ್ ಬಗ್ಗೆ ಸದನದಲ್ಲಿ ಹೆಚ್ಡಿ ಕುಮಾರಸ್ವಾಮಿ ಪ್ರಸ್ತಾಪ ಮಾಡಿದ ವಿಷಯ ಹೀಗಿದೆ:
ಸುಪ್ರೀಂ ಕೋರ್ಟ್ ಆದೇಶದ ಬಳಿಕ ಜಿಲ್ಲಾಧಿಕಾರಿ, ಎಸಿ, ತಹಶೀಲ್ದಾರ್ ಮತ್ತು ಈಗಲ್ಟನ್ ರೆಸಾರ್ಟ್ ಮ್ಯಾನೇಜರ್ ಸೇರಿ ಹಲವು ಅಧಿಕಾರಿಗಳು ಒಂದು ಸಭೆ ಮಾಡುತ್ತಾರೆ. ಅಲ್ಲಿ 77.19 ಎಕರೆಗೆ 7.49 ಕೋಟಿ ರೂ. ದರ ನಿಗದಿ ಮಾಡುತ್ತಾರೆ. ಇದರಲ್ಲಿ 50 % ಪ್ರವಾಸೋದ್ಯಮಕ್ಕಾಗಿ 3.74 ಕೋಟಿ ರೂ. ಪಾವತಿಸಲು ಶಿಫಾರಸು ಮಾಡುತ್ತಾರೆ. ಆದರೆ ಮೂರು ತಿಂಗಳು ಆದರೂ ಯಾವುದೇ ಕ್ರಮ ತೆಗೆದುಕೊಳ್ಳಲಾಗುವುದಿಲ್ಲ. ಇದನ್ನು ಪ್ರಶ್ನಿಸಿ ಮತ್ತೆ ಈಗಲ್ಟನ್ ರೆಸಾರ್ಟ್ ಸುಪ್ರೀಂ ಕೋರ್ಟ್ ಗೆ ಹೋಗುತ್ತದೆ. 28.33 ಎಕರೆ ಜಮೀನನ್ನು ವಾಪಸ್ ಕೊಡಲು ಸಿದ್ಧರಾಗಿದ್ದೇವೆ ಎಂದು ಈಗಲ್ಟನ್ ರೆಸಾರ್ಟ್ ಕೋರ್ಟ್ ನಲ್ಲಿ ಒಪ್ಪಿಕೊಳ್ಳುತ್ತದೆ. ಆದರೂ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. 2011ರಲ್ಲಿ ರಾಮನಗರ ಜಿಲ್ಲಾಧಿಕಾರಿ ಆ ಜಮೀನಿಗೆ ಮಾರುಕಟ್ಟೆ ದರದಂತೆ 3,74,87,500 ರೂ. ನಿಗದಿ ಮಾಡುತ್ತದೆ.
2012ರಲ್ಲಿ ಮತ್ತೊಬ್ಬ ಜಿಲ್ಲಾಧಿಕಾರಿ 82 ಕೋಟಿ ರೂ. ದರ ನಿಗದಿ ಮಾಡುತ್ತಾರೆ. 2014ರಲ್ಲಿ ನಾಲ್ಕನೇ ಡಿಸಿ ಬರುತ್ತಾರೆ. ಅವರು ಜಮೀನಿಗೆ 17,79,08,183 ಕೃಷಿ ಮಾರ್ಗ ಸೂಚಿ ದರದಲ್ಲಿ ನಿಗದಿ ಮಾಡುತ್ತಾರೆ. ಅದರಂತೆ ಬಿ ಕೆಟಗರಿಯಲ್ಲಿ ವಸತಿ ಉದ್ದೇಶಕ್ಕಾಗಿನ ಪರಿವರ್ತಿತ ಭೂಮಿಗೆ ದರ ನಿಗದಿ ಮಾಡಲಾಗುತ್ತದೆ. ಆದರೆ ಅದು ಗಾಲ್ಫ್ ಗೆ ಬಳಸಿದ ಭೂಮಿಯಾಗಿದೆ. ಹಾಗಾಗಿ ಅದಕ್ಕೆ 93.83 ಕೋಟಿ ರೂ. ದರ ನಿಗದಿ ಮಾಡುತ್ತಾರೆ. ಸಿ ಕೆಟಗರಿಯಲ್ಲಿ ಪ್ರತಿ ಚದರ ಮೀಟರ್ 1,560 ರೂ. ಆಧಾರದಲ್ಲಿ 526 ಕೋಟಿ ರೂ. ನಿಗದಿ ಮಾಡಿದರು. ಇವರು 50 % ರಂತೆ ಪ್ರವಾಸೋದ್ಯಮಕ್ಕೆ 289 ಕೋಟಿ ಪಾವತಿಸುವಂತೆ ಹೇಳುತ್ತಾರೆ. ಐದನೇ ಡಿಸಿ 2014ರಲ್ಲಿ ಪ್ರತಿ ಚದರ ಮೀಟರ್ ಗೆ 2,900 ರೂ. ನಂತೆ 980 ಕೋಟಿ ರೂ ನಿಗದಿ ಮಾಡಲಾಗುತ್ತದೆ ಎಂದು ಸವಿಸ್ತಾರ ಮಾಹಿತಿಯನ್ನು ಸದನದ ಮುಂದೆ ಕುಮಾರಸ್ವಾಮಿ ತೆರೆದಿಟ್ಟರು.
ಮುಂದುವರಿದು ಮಾತನಾಡುತ್ತಾ, ಐದನೇ ಡಿಸಿಯ ದರ ನಿಗದಿ ಕಾರಣ ಸ್ವಾರಸ್ಯಕರವಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು. ರಾಮನಗರದ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಇದಕ್ಕೆ ಕಾರಣರಾಗಿದ್ದಾರೆ ಎಂದು ಆರೋಪಿಸಿದರು. ಆ ಪ್ರಭಾವಿ ರಾಜಕಾರಣಿ ಯಾರು? ಎಂದು ಬಿಜೆಪಿ ಶಾಸಕ ಯತ್ನಾಳ್ ಪ್ರಶ್ನಿಸಿದರು. ಮಧ್ಯ ಪ್ರವೇಶಿಸಿದ ಸಚಿವ ಡಾ. ಸುಧಾಕರ್ ಅವರು ರಾಮನಗರದಲ್ಲಿ ಪ್ರಭಾವಿ ಅಂದರೆ ನೀವು ಮಾತ್ರ ಅಂತಾ ನಾವು ತಿಳಿದುಕೊಂಡಿದ್ದೆವು ಎಂದು ಕುಮಾರಸ್ವಾಮಿಗೆ ಕಿಚಾಯಿಸಿದರು.
ಮಾತು ಮುಂದುವರಿಸಿದ ಕುಮಾರಸ್ವಾಮಿ ಆ ವೇಳೆ ಚುನಾವಣೆ ಇರುತ್ತದೆ. ತಮ್ಮ ಬೆಂಬಲಿಗರೊಂದಿಗೆ ಆ ಪ್ರಭಾವಿ ನಾಯಕ ಈಗಲ್ಟನ್ ರೆಸಾರ್ಟ್ ಗೆ ಊಟಕ್ಕೆ ಹೋಗುತ್ತಾರೆ. ಆಗ 98 ಸಾವಿರ ಬಿಲ್ ಆಗುತ್ತದೆ. ಅದಕ್ಕೆ ಗಲಾಟೆ ಆಗುತ್ತದೆ. ನಮ್ಮ ಸಾಹೇಬರಿಗೆ ಬಿಲ್ ಇಡ್ತೀಯಾ ಎಂದು ಹುಡುಗರು ಗಲಾಟೆ ಮಾಡುತ್ತಾರೆ. ಆದರೂ ಪ್ರಭಾವಿ ರಾಜಕಾರಣಿ ಒಂದು ಲಕ್ಷ ಬಿಲ್ ಕೊಟ್ಟು ಬರುತ್ತಾರೆ. ಬಳಿಕ ಆ ಪ್ರಭಾವಿ ನಾಯಕ ಜಿಲ್ಲಾಧಿಕಾರಿಯನ್ನು ಕರೆಯುತ್ತಾರೆ. ಈಗಲ್ಟನ್ ರೆಸಾರ್ಟ್ ದಾಖಲಾತಿ ತನ್ನಿ ಎಂದು ಡಿಸಿಗೆ ಹೇಳುತ್ತಾರೆ. ಅವರಿಗೆ ಬುದ್ಧಿ ಕಲಿಸಬೇಕಲ್ಲಾ ಎಂದು ಜಿಲ್ಲಾಧಿಕಾರಿಗೆ ಕೇಳುತ್ತಾರೆ. ಆಗ ನೀವು ಏನು ಹೇಳಿದರೂ ಮಾಡಬಹುದು ಎಂದು ಡಿಸಿ ಹೇಳುತ್ತಾರೆ. ಅದರಂತೆ ಆಗ 980 ಕೋಟಿ ರೂ. ದರ ನಿಗದಿ ಆಗುತ್ತದೆ.
77.19 ಎಕರೆ ಜಮೀನು ದರ 3 ಕೋಟಿ ರೂ. ನಿಂದ 980 ಕೋಟಿ ರೂ. ಗೆ ಹೋಗುತ್ತದೆ ಎಂದು ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಇಂಚಿಂಚೂ ವಿವರವನ್ನು ಬಹಿರಂಗಪಡಿಸಿದರು. ಬಳಿಕ ಸಂಪುಟ ಉಪಸಮಿತಿಯಲ್ಲಿ 28 ಎಕರೆ ವಾಪಸ್ ಪಡೆಯರಿ, ಮೂರು ತಿಂಗಳಲ್ಲಿ ಹಣ ಕೊಡದೇ ಇದ್ದರೆ ಜಮೀನು ವಶಕ್ಕೆ ಪಡೆಯಿರಿ ಎಂದು ಕೋರ್ಟ್ ಸೂಚನೆ ಕೊಡುತ್ತದೆ. 2015ರಲ್ಲಿ ಕಂದಾಯ ಸಚಿವರ ನೇತೃತ್ವದ ಸಂಪುಟ ಉಪಸಮಿತಿ ಸಭೆ ನಡೆಯುತ್ತದೆ. ಉಪಸಮಿತಿಯಲ್ಲಿ 15 ಮಂದಿ ಇದ್ದರು. ಸಭೆಯಲ್ಲಿ ಇದನ್ನು ಸಚಿವ ಸಂಪುಟದ ಮುಂದೆ ತರುವ ಅಗತ್ಯ ಇಲ್ಲ ಎಂದು ಕಾನೂನು ಇಲಾಖೆ ಅಭಿಪ್ರಾಯ ನೀಡುತ್ತದೆ. ಮತ್ತೊಮ್ಮೆ ಮೌಲ್ಯದ ದರ ಪಡೆಯುವ ಪ್ರಶ್ನೆ ಉದ್ಬವಿಸಲ್ಲ. 2017ರಲ್ಲಿ ಚಾಲ್ತಿಯಲ್ಲಿದ್ದ ಮಾರುಕಟ್ಟೆ ಬೆಲೆ ನಿಗದಿ ಪಡಿಸುವುದು ಸೂಕ್ತ ಎಂದು ಕಾನೂನು ಸಚಿವರು ಅಭಿಪ್ರಾಯ ಪಡುತ್ತಾರೆ ಎಂದು ಬಿಡದಿ ಬಳಿಯ ಈಗಲ್ಟನ್ ರೆಸಾರ್ಟ್ ಬಗ್ಗೆ ಸವಿಸ್ತಾರ ಮಾಹಿತಿಯನ್ನು ಸದನದ ಗಮನಕ್ಕೆ ತಂದರು.
Published On - 7:38 pm, Wed, 9 March 22