ಶಬರಿಮಲೆ: ಮೇಲ್ಸೇತುವೆ ಮೇಲಿಂದ ಜಿಗಿದು ಕರ್ನಾಟಕದ ಅಯ್ಯಪ್ಪ ಮಾಲಾಧಾರಿ ಸಾವು

| Updated By: ವಿವೇಕ ಬಿರಾದಾರ

Updated on: Dec 17, 2024 | 12:18 PM

ಕನಕಪುರದ ಕುಮಾರಸ್ವಾಮಿ (40) ಎಂಬುವವರು ಶಬರಿಮಲೆಗೆ ತೆರಳಿದ್ದ ಸಂದರ್ಭದಲ್ಲಿ ಮಲ್ಲಿಕ್ ಪುರಂ ಮೇಲ್ಸೇತುವೆ ಮೇಲಿಂದ ಜಿಗಿದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದಾರೆ ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕುಮಾರಸ್ವಾಮಿಯ ಪತ್ನಿ ಮನೆಯಲ್ಲಿ ಯಾವುದೇ ಸಮಸ್ಯೆ ಇರಲಿಲ್ಲ ಎಂದು ಹೇಳಿದ್ದಾರೆ. ಸ್ಥಳೀಯ ಪೊಲೀಸರ ಪ್ರಕಾರ ಕುಮಾರಸ್ವಾಮಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಶಬರಿಮಲೆ: ಮೇಲ್ಸೇತುವೆ ಮೇಲಿಂದ ಜಿಗಿದು ಕರ್ನಾಟಕದ ಅಯ್ಯಪ್ಪ ಮಾಲಾಧಾರಿ ಸಾವು
ಶಬರಿಮಲೆ ದೇವಸ್ಥಾನ
Follow us on

ರಾಮನಗರ, ಡಿಸೆಂಬರ್​ 17: ಕೇರಳದ (Kerala) ಶಬರಿಮಲೆ (Sabarimala) ಅಯ್ಯಪ್ಪ ದೇವಸ್ಥಾನ (Ayyappa Temple) ಬಳಿ ಇರುವ ಮಲ್ಲಿಕ್​ ಪುರಂ ಮೇಲ್ಸೇತುವೆ ಮೇಲಿಂದ ಜಿಗಿದು ಕನಕಪುರ ಮೂಲದ ಅಯ್ಯಪ್ಪ ಮಾಲಾಧಾರಿ ಮೃತಪಟ್ಟಿದ್ದಾರೆ. ಕನಕಪುರ ನಿವಾಸಿ ಕುಮಾರಸ್ವಾಮಿ (40)‌ ಮೃತ ಅಯ್ಯಪ್ಪ ಮಾಲಾಧಾರಿ. ಕುಮಾರಸ್ವಾಮಿ ಅವರು ಮೂರು ದಿನದ ಹಿಂದೆ ಶಬರಿಮಲೆಗೆ ತೆರಳಿದ್ದರು. ಕುಮಾರಸ್ವಾಮಿ ಅವರು ಸೋಮವಾರ (ಡಿ.16) ಸಂಜೆ ದೇವಸ್ಥಾನದ ಸನ್ನಿಧಾನದಿಂದ ಮಲ್ಲಿಕ್ ಪುರಂಗೆ ಸಂಪರ್ಕಿಸುವ ಮೇಲ್ಸೇತುವೆ ಮೇಲಿಂದ ಕೆಳಗೆ ಜಿಗಿದಿದ್ದಾರೆ.

ಕೆಳಗೆ ಬಿದ್ದ ರಭಸಕ್ಕೆ ಅವರ ಕೈ ಮತ್ತು ಕಾಲಿಗೆ ಗಾಯವಾಗಿತ್ತು. ಅವರನ್ನು ಮೊದಲು ಸನ್ನಿಧಾನಂ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ಪಂಪಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಿಟಿ ಸ್ಕ್ಯಾನ್ ಸೇರಿದಂತೆ ಹೆಚ್ಚಿನ ಪರೀಕ್ಷೆಗಳಿಗಾಗಿ ಅವರನ್ನು ಕೊಟ್ಟಾಯಂ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ದುರಾದೃಷ್ಟವಶಾತ್​ ಕುಮಾರಸ್ವಾಮಿ ಅವರು ಹೃದಯಾಘಾತದಿಂದ ಮೃತಪಟ್ಟರು ಎಂದು ವರದಿಯಾಗಿದೆ.

ಟ್ವಿಟರ್​ ಪೋಸ್ಟ್​

ಇನ್ನು, ವಿಚಾರ ತಿಳಿಯುತ್ತಿದ್ದಂತೆ ಕೇರಳ ಪೊಲೀಸರು ಸ್ಥಳಕ್ಕೆ ತೆರಳಿ, ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರು ನೀಡಿದ ಮಾಹಿತಿ ಪ್ರಕಾರ ಕುಮಾರಸ್ವಾಮಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಶಬರಿಮಲೆ ಭಕ್ತರಿಗಾಗಿ ಹುಬ್ಬಳ್ಳಿ-ಬೆಳಗಾವಿಯಿಂದ ಕೊಲ್ಲಂಗೆ ವಿಶೇಷ ರೈಲು ಸಂಚಾರ

ಕುಮಾರಸ್ವಾಮಿ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬಸ್ಥರು ಆಘಾತಕ್ಕೆ ಒಳಗಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಕೇರಳದ ಪಂಪ ಪೊಲೀಸ್ ಠಾಣೆಯ ಬಳಿ ಇರುವ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದೆ. ಕುಮಾರಸ್ವಾಮಿ ಅವರ ಕುಟುಂಬಸ್ಥರು ಕೇರಳಕ್ಕೆ ಪ್ರಯಾಣ ಬೆಳಸಿದ್ದಾರೆ. “ಮನೆಯಲ್ಲಿ ಯಾವುದೇ ರೀತಿ ಸಮಸ್ಯೆ ಆಗಿರಲಿಲ್ಲ” ಎಂದು ಕುಮಾರಸ್ವಾಮಿ ಅವರ ಪತ್ನಿ ಹೇಳಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:53 am, Tue, 17 December 24